ADVERTISEMENT

‘ಶಿಕ್ಷಣದಿಂದ ಮಕ್ಕಳಲ್ಲಿ ಸೃಜನಶೀಲತೆ, ನಾಯಕತ್ವ ಗುಣ ಬೆಳೆಯಲಿ’

ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಪೋಷಕ–ಶಿಕ್ಷಕರ ಮಹಾಸಭೆ, ಮಕ್ಕಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:50 IST
Last Updated 15 ನವೆಂಬರ್ 2025, 5:50 IST
ನರಸಿಂಹರಾಜಪುರದ ಕೆಪಿಎಸ್‌ಸಿ ಶಾಲೆಯಲ್ಲಿ ಶುಕ್ರವಾರ ನಡೆದ ಪೋಷಕ ಶಿಕ್ಷಕರ ಮಹಾಸಭೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಚಾಲನೆ ನೀಡಿದರು. ಸೈಯದ್ ವಸೀಂ, ಲಕ್ಷ್ಮಣ್ ಶೆಟ್ಟಿ, ಶಬಾನಾ ಅಂಜುಮ್ ಪಾಲ್ಗೊಂಡಿದ್ದರು
ನರಸಿಂಹರಾಜಪುರದ ಕೆಪಿಎಸ್‌ಸಿ ಶಾಲೆಯಲ್ಲಿ ಶುಕ್ರವಾರ ನಡೆದ ಪೋಷಕ ಶಿಕ್ಷಕರ ಮಹಾಸಭೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಚಾಲನೆ ನೀಡಿದರು. ಸೈಯದ್ ವಸೀಂ, ಲಕ್ಷ್ಮಣ್ ಶೆಟ್ಟಿ, ಶಬಾನಾ ಅಂಜುಮ್ ಪಾಲ್ಗೊಂಡಿದ್ದರು   

ನರಸಿಂಹರಾಜಪುರ: ‘ಶಿಕ್ಷಣದಿಂದ ಮಕ್ಕಳಲ್ಲಿ ಸೃಜನಶೀಲತೆ, ನಾಯಕತ್ವ ಗುಣ, ಉತ್ತಮ ಸಂಸ್ಕಾರ ಬೆಳೆಯಲೆಂದು, ಶಿಕ್ಷಣ ಇಲಾಖೆಯಿಂದ ಹೊಸ ಯೋಜನೆಗಳನ್ನು ಆಗಾಗ್ಗೆ ರೂಪಿಸಿಲಾಗುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಇಲಾಖೆ, ಕೆಪಿಎಸ್‌ನ ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಷಕ–ಶಿಕ್ಷಕರ ಮಹಾಸಭೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇಶದ ಪ್ರಥಮ ಪ್ರಧಾನಿ ನೆಹರೂ ಅವರ ಜನ್ಮದಿನದಂದು, ನೆಹರೂ ಅವರ ಆಶಯದಂತೆ ಮಕ್ಕಳ ದಿನಾಚರಣೆ ಆಚರಿಸುತ್ತಿದೆ. ಈಗಾಗಲೇ ರಾಜ್ಯದಾದ್ಯಂತ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯಲಾಗಿದ್ದು, 35 ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದಾರೆ. ಶಿಕ್ಷಕರ ಸಂಖ್ಯೆ ಹೆಚ್ಚಿಸಬೇಕು, ಎಲ್ಲಾ ಮೂಲಸೌಕರ್ಯ ಮಾಡಿಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಪ್ರಸ್ತುತ ಡಿಸಿಟಲ್ ಯುಗವಾಗಿದ್ದು, ಕಾಲಕ್ಕೆ ತಕ್ಕ ಹಾಗೆ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ. ಉತ್ತಮ ಶಿಕ್ಷಣ ನೀಡಲು ಶಿಕ್ಷಕರ ಜೊತೆಗೆ ಪೋಷಕರು, ಎಸ್‌.ಡಿ.ಎಂ.ಸಿ ಹಾಗೂ ಜನಪ್ರತಿನಿಧಿಗಳೂ ಸಹ ಕೈ ಜೋಡಿಸಬೇಕು ಎಂದರು.

ADVERTISEMENT

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ, ‘ಗುಣಾತ್ಮಕ, ಹೆಚ್ಚು ಮೌಲ್ಯಯುತ ಶಿಕ್ಷಣಕ್ಕಾಗಿ ಮಕ್ಕಳ ದಿನಾಚರಣೆಯ ದಿನದಂದೇ ರಾಜ್ಯ ಸರ್ಕಾರವು ಏಕಕಾಲದಲ್ಲಿ ಎಲ್ಲಾ ಶಾಲೆಗಳಲ್ಲೂ ಪೋಷಕ–ಶಿಕ್ಷಕರ ಮಹಾಸಭೆ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಎಸ್‌.ಡಿ.ಎಂ.ಸಿ, ಪೋಷಕರು, ಶಿಕ್ಷಕರು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಸರ್ಕಾರವು ಮಕ್ಕಳಿಗಾಗಿ ಉಚಿತವಾಗಿ ಸಮವಸ್ತ್ರ, ಬಿಸಿಯೂಟ, ಪಠ್ಯ ಪುಸ್ತಕ, ಶೂ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಮಾತ್ರ ಎಂಬ ಉದ್ಯೋಗ ಎಂಬ ಕಾನೂನು ಜಾರಿಗೆ ತರಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಲಕ್ಷ್ಮಣಶೆಟ್ಟಿ ಮಾತನಾಡಿ, ‘ಶಾಸಕ ಟಿ.ಡಿ.ರಾಜೇಗೌಡರು ಕರ್ನಾಟಕ ಪಬ್ಲಿಕ್ ಸ್ಕೂಲಿನ ರಂಗಮಂದಿರಕ್ಕೆ ಇಂಟರ್‌ಲಾಕ್ ಹಾಕಿಸಲು ₹40 ಲಕ್ಷ ಅನುದಾನ ಮಂಜೂರು ಮಾಡಿದ್ದು, ಹೊಸ ಕೊಠಡಿಗಾಗಿ ₹1.50 ಕೋಟಿ ಅನುದಾನವನ್ನು ಶೀಘ್ರದಲ್ಲೇ ಮಂಜೂರು ಮಾಡಲಿದ್ದಾರೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಶಾಲೆಗೆ ಕಳಿಸಿದ ಮಕ್ಕಳ ಬಗ್ಗೆ ಪೋಷಕರು ಗಮನ ನೀಡುತ್ತಿರಬೇಕು. ಜೊತೆಗೆ ಶಿಕ್ಷಕರು ಸಹ ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು’ ಎಂದರು.

ಕೆಪಿಎಸ್ ಆಡಳಿತ ಮಂಡಳಿ ಉಪಾಧ್ಯಕ್ಷ ಪುರುಷೋತ್ತಮ್, ಶಿಕ್ಷಣ ಗುಣಮಟ್ಟ ಖಾತರಿ ಸಮಿತಿ ಅಧ್ಯಕ್ಷ ಕೆ.ಎ.ಅಬೂಬಕರ್, ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ವಸೀಂ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾನಾಯಕ್, ಉಪ ಪ್ರಾಂಶುಪಾಲ ರುದ್ರಪ್ಪ, ಉಪ ತಹಶೀಲ್ದಾರ್ ವೇಣುಗೋಪಾಲ್, ಕೊಪ್ಪ ಎ.ಪಿ.ಎಂ.ಸಿ. ನಿರ್ದೇಶಕ ಶಿವಣ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಘು, ಕೆಪಿಎಸ್ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಗಂಗಮ್ಮ, ಎಸ್.ಡಿ.ಎಂ.ಸಿ ಸದಸ್ಯರಾದ ಸಿಗ್ಬುತುಲ್ಲಾ, ಸಲೀಂ, ಉದಯ, ದೇವೇಂದ್ರ, ಶಕುಂತಳಾ ಇದ್ದರು.

ಅತಿಥಿಗಳು ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಿಕ್ಷಕ ಹಿರೇನಲ್ಲೂರು ಶ್ರೀನಿವಾಸ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.