ನರಸಿಂಹರಾಜಪುರ: ಜೇಸಿ ಸಂಸ್ಥೆ ವ್ಯಕ್ತಿತ್ವ ವಿಕಸನದ ಜೊತೆಗೆ ಸೇವಾ ಸಂಸ್ಥೆಯೂ ಆಗಿದೆ ಎಂದು ಸೀನಿಯರ್ ಚೇಂಬರ್‌ನ ಅಧ್ಯಕ್ಷ ಎಸ್.ಎಸ್.ಜಗದೀಶ್ ಹೇಳಿದರು.
ಇಲ್ಲಿನ ಮಹಾವೀರ ಭವನದಲ್ಲಿ ಸೋಮವಾರ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ 36ನೇ ಜೇಸಿ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕು ಕೇಂದ್ರದಲ್ಲಿ ಜೇಸಿ ಸಂಸ್ಥೆ 1990ರಲ್ಲಿ ಆರಂಭವಾಯಿತು. ಜೇಸಿ ಸಂಸ್ಥೆಯಲ್ಲಿ 18ರಿಂದ 40ವರ್ಷ ವಯಸ್ಸಿನವರಿಗೆ ಸದಸ್ಯತ್ವ ನೀಡಲಾಗುತ್ತದೆ. ಯುವಜನಾಂಗವನ್ನು ಉತ್ತಮ ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ಸಂವಹನ, ಭಾಷಣದ ಬಗ್ಗೆ ತರಬೇತಿ ನೀಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜೇಸಿ ಸಂಸ್ಥೆಗೆ ಸೇರುವ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿದ್ದು, ಹಲವು ತರಬೇತಿಗಳು ನಡೆಯದಿರುವುದು ವಿಷಾದದ ಸಂಗತಿಯಾಗಿದೆ. ಪ್ರತಿಯೊಬ್ಬರೂ ಸಮಾಜದಿಂದ ಏನನ್ನಾದರೂ ಪಡೆದುಕೊಂಡಿರುತ್ತೇವೆ. ಅದನ್ನು ಹಿಂದಿರುಗಿ ಕೊಡುವ ಕೆಲಸ ಸಂಘ–ಸಂಸ್ಥೆಗಳ ಮೂಲಕ ಮಾಡಬೇಕು ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಅವರು ‘ಜೇಸಿ ಹಾಗೂ ಮಹಿಳಾ ನಾಯಕತ್ವ’ ಎಂಬ ವಿಷಯದ ಬಗ್ಗೆ ಮಾತನಾಡಿ, ಜೇಸಿ ಕೇವಲ ಸಂಸ್ಥೆಯಲ್ಲ ನಾಯಕತ್ವ, ಮಾನವೀಯತೆಯ ಹಾಗೂ ಜೀವನದ ಬೆಳಕಿನ ದಾರಿಯಾಗಿದೆ. ಮಹಿಳೆ ಎಂದರೆ ಕೇವಲ ಮನೆತನದ ಕಾಳಜಿಯ ಸಂಕೇತವಲ್ಲ. ಅವಳು ಸೃಜನಶೀಲತೆ, ಸಂಸ್ಕೃತಿ, ಸಹನೆ ಮತ್ತು ಶಕ್ತಿಗಳ ದ್ಯೋತಕವಾಗಿದ್ದಾಳೆ. ಮಹಿಳೆ ಒಂದು ಕುಟುಂಬವನ್ನು ಕಟ್ಟುತ್ತಾಳೆ, ಕುಟುಂಬ ಸಮಾಜವನ್ನು ಕಟ್ಟುತ್ತದೆ, ಸಮಾಜ ರಾಷ್ಟ್ರವನ್ನು ಕಟ್ಟುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಜೇಶ್ ಮಾತನಾಡಿ, ಯುವಕರಲ್ಲಿ ನಾಯಕತ್ವ, ಉದ್ಯಮಶೀಲತ್ವದ ಗುಣ ಬೆಳೆಸುವಲ್ಲಿ ಸಂಘ–ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಸಂಘ– ಸಂಸ್ಥೆಗಳ ಕೊಡುಗೆ ಶೇ 10ರಷ್ಟಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜೇಸಿ ಸಂಸ್ಥೆಯ ಅಧ್ಯಕ್ಷ ಸಾರ್ಥಕ್ ಗೌಡ ಅಧ್ಯಕ್ಷತೆ ವಹಿಸಿದ್ದರು.
ಟಿಎಪಿಸಿಎಂಎಸ್ ನಿರ್ದೇಶಕಿ ಮೀನಾಕ್ಷಿ ಕಾಂತರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ಜೇಸಿ ಸಂಸ್ಥೆಯ ಕಾರ್ಯದರ್ಶಿ ಮಿಥುನ್ ಗೌಡ, ಸಪ್ತಾಹದ ಪ್ರಧಾನ ಕಾರ್ಯದರ್ಶಿ ಜೋಯಿ, ಜೇಸಿ ರೆಟ್ ವಿಂಗ್ ಅಧ್ಯಕ್ಷೆ ದಿಶಾಗೌಡ, ನಿಕಟಪೂರ್ವ ಅಧ್ಯಕ್ಷ ಎಂ.ಪಿ.ಮನು, ಚರಣ್, ಪಿ.ಪವನ್ಕರ್, ಸುಹಾಸ್, ದರ್ಶನಾಥ್ ಇದ್ದರು. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಡಾ.ಪ್ರಭು ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.