ಕಡೂರು: ಪಟ್ಟಣದ ವೇದಾ ಪಾರ್ಕ್‌ನಲ್ಲಿ ಪುರಸಭೆಯು ಸ್ಥಾಪಿಸಿದ 100 ಅಡಿ ಎತ್ತರದ ಸ್ತಂಭದಲ್ಲಿ (ಸ್ವಾತಂತ್ರ್ಯೋತ್ಸವ ದಿನ) ರಾಷ್ಟ್ರಧ್ವಜ ರಾರಾಜಿಸಿತು.
ಕಾರ್ಯಕ್ರಮ ಉದ್ಘಾಟಿಸಿ, ಶಿಲಾಫಲಕ ಅನಾವರಣಗೊಳಿಸಿ ಮಾತನಾಡಿದ ಶಾಸಕ ಕೆ.ಎಸ್.ಆನಂದ್, ‘ಕಡೂರು ಪುರಸಭೆ ರಾಷ್ಟ್ರಭಕ್ತಿಯನ್ನು ಉದ್ದೀಪಿಸುವ ಶ್ಲಾಘನೀಯ ಕಾರ್ಯ ಕೈಗೊಂಡಿದೆ. ಇದು ತಾಲ್ಲೂಕಿನ ಇತಿಹಾಸದಲ್ಲಿ ಮೈಲಿಗಲ್ಲು. ರಾಷ್ಟ್ರಧ್ವಜವು ಇತಿಹಾಸ ನೆನಪಿಸುವ, ದೇಶಪ್ರೇಮ ಬಿತ್ತುವ ಸಂಕೇತ. ಈ ಮಹತ್ತರ ಕಾರ್ಯಕ್ಕೆ ಪುರಸಭೆ ಅಭಿನಂದನಾರ್ಹ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿ, ‘ಸ್ವಾತಂತ್ರ್ಯ ದಿನದಂದೇ ಇಲ್ಲಿ ರಾಷ್ಟ್ರಧ್ವಜ ಮುಗಿಲೆತ್ತರಕ್ಕೆ ಹಾರಬೇಕು ಎನ್ನುವ ಕನಸು ನನಸಾಯಿತು. ತಿರಂಗಾ ಧ್ವಜವು ಯುವಜನರಲ್ಲಿ ಸಾಮಾಜಿಕ ಪ್ರಜ್ಞೆ, ದೇಶಪ್ರೇಮ ಮೂಡಿಸಿದರೆ ನಮ್ಮ ಕಾರ್ಯ ಸಾರ್ಥಕ. ಜನರ ತೆರಿಗೆ ಹಣವನ್ನು ಸದುಪಯೋಗ ಪಡಿಸಿಕೊಂಡಿದ್ದೇವೆ. ಪಟ್ಟಣವನ್ನು ಸುಂದರ, ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರ ಅಗತ್ಯ’ ಎಂದರು.
ರಜಾದಿನದ ಪ್ರಯುಕ್ತ ಸಾರ್ವಜನಿಕರು ವಾಹನಗಳಲ್ಲಿ ವೇದಾ ಪಾರ್ಕ್‌ಗೆ ತೆರಳಿ ಬಾನೆತ್ತರ ಹಾರುತ್ತಿದ್ದ ತಿರಂಗಾವನ್ನು ಕಣ್ತುಂಬಿಕೊಂಡರು. ಯುವಜನರು ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದಲ್ಲಿ ತೆರಳುತ್ತಿದ್ದವರು ಕಣ್ಣರಳಿಸಿ ನೋಡುವಂತೆ ಉದ್ಯಾನವನದ ಚಿತ್ರಣ ಬದಲಾಗಿತ್ತು. ಧ್ವಜಸ್ತಂಭದ ಸುತ್ತಲೂ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದ್ದು, 100 ಮೀಟರ್ ಉದ್ದದ ಪಾತ್‌ವೇ ನಿರ್ಮಿಸಿ ಅಲ್ಲಿಗೆ ಸಾಲುದೀಪಗಳನ್ನು ಅಳವಡಿಸಲಾಗಿದೆ. ಸಂಜೆವೇಳೆ ಧ್ವಜಕ್ಕೆ ಬೆಳಕು ಬೀಳುವಂತೆ ಪ್ರಖರ ವಿದ್ಯುದ್ದೀಪಗಳನ್ನೂ ಸ್ಥಾಪಿಸಲಾಗಿದೆ. ಕುಟುಂಬದೊಂದಿಗೆ ತೆರಳಿದ್ದ ಜನರು ಪಾರ್ಕ್ ಅನ್ನು ಪ್ರೇಕ್ಷಣೀಯ ಸ್ಥಳವಾಗಿಸಿದ ಪುರಸಭೆಯ ಕಾರ್ಯ ಅಭಿನಂದನಾರ್ಹ ಎಂದು ಸಂತಸ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಹಾಲಮ್ಮ, ಯತಿರಾಜ್, ಪದ್ಮಾಶಂಕರ್, ವಿಜಯಾ ರಾಜಗೋಪಾಲ್, ಲತಾ ರಾಜು, ಮನು ಮರುಗುದ್ದಿ, ಕಮಲಾ ವೆಂಕಟೇಶ್, ಸುಧಾ ಉಮೇಶ್, ಶ್ರೀಕಾಂತ್, ವಿಜಯಲಕ್ಷ್ಮಿ ಚಿನ್ನರಾಜು, ಜಿ.ಸೋಮಯ್ಯ, ಸೈಯದ್ ಯಾಸೀನ್, ಇಕ್ಬಾಲ್, ಪುಷ್ಪಲತಾ ಮಂಜುನಾಥ್, ಗೋವಿಂದಪ್ಪ, ಜ್ಯೋತಿ ಆನಂದ್, ಸುಬ್ಬಣ್ಣ, ಮೋಹನ್‌ಕುಮಾರ್, ವಿನಯ್ ದಂಡಾವತಿ, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಮಾಜಿ ಅಧ್ಯಕ್ಷರಾದ ಎಂ.ರಂಗಪ್ಪ, ಶಾಂತಪ್ಪ ಒಡೆಯರ್, ಬಿಜೆಪಿ ಮುಖಂಡರಾದ ಎ.ಮಣಿ, ಚಿನ್ನರಾಜು, ರಂಗನಾಥ್, ದೇವೇಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.