ADVERTISEMENT

ಮೂಗ್ತಿಹಳ್ಳಿ–ಮೂಡಿಗೆರೆ ರಸ್ತೆ ಕಾಮಗಾರಿ ಆರಂಭಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 4:34 IST
Last Updated 4 ಸೆಪ್ಟೆಂಬರ್ 2025, 4:34 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಚಿಕ್ಕಮಗಳೂರು: ‘ಮೂಡಿಗೆರೆ–ಮೂಗ್ತಿಹಳ್ಳಿ(ಚಿಕ್ಕಮಗಳೂರು) ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಕಾಮಗಾರಿ ಆರಂಭಿಸಲು ವಿಳಂಬವಾಗುತ್ತಿದ್ದು, ಇರುವ ತೊಡಕುಗಳನ್ನು ಶೀಘ್ರ ಸರಿಪಡಿಸಬೇಕು’ ಎಂದು ತಾಕೀತು ಮಾಡಿದರು.

‘ಹಲವು ಬಾರಿ ಈ ಕುರಿತು ಸಭೆ ನಡೆಸಿದರೂ ಅಧಿಕಾರಿಗಳು ಸಬೂಬು ಹೇಳುತ್ತಿರುವುದು ಸರಿಯಲ್ಲ. ನಾಲ್ಕು ತಿಂಗಳಿಂದ ನಿರಂತರವಾಗಿ ಸಭೆ ನಡೆಸಿದರೂ ಕಾಮಗಾರಿ ಒಂದು ಹೆಜ್ಜೆ ಮುಂದೆ ಹೋಗಿಲ್ಲ ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ಅಧಿಕಾರಿಗಳು ಪ್ರತಿ ಬಾರಿ ಸಬೂಬು ಹೇಳುವುದನ್ನು ಬಿಟ್ಟು ಕೆಲಸ ಮಾಡಬೇಕು. ಕೂಡಲೇ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗೆ ಸಲ್ಲಿಸಬೇಕು. ಅಲ್ಲಿನ ಉನ್ನತ ಅಧಿಕಾರಿಗಳಿಂದ ಸಮಯ ಪಡೆದು ಚರ್ಚೆ ನಡೆಸಲಾಗುವುದು’‍ ಎಂದು ಹೇಳಿದರು.

ಮೂಡಿಗೆರೆ ಪಟ್ಟಣದಲ್ಲಿ ರಸ್ತೆಯ ಮಧ್ಯ ಭಾಗದಿಂದ 16 ಮೀಟರ್ ಮಾತ್ರ ಅಗಲ ಮಾಡಲು ಜಾಗ ಗುರುತಿಸಿರುವ ಬಗ್ಗೆ ಸಾರ್ವಜನಿಕರಿಗೆ ಅಸಮಾಧಾನವಿದೆ. ಮುಂದೆ ಜನರಿಗೆ ಸಮಸ್ಯೆಯಾಗಲಿದೆ. ಸಂಚಾರ ದಟ್ಟಣೆ ಉಂಟಾಗಲಿದೆ. ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಮುಂದೆ ಜನರಿಗೆ ಅನಾನುಕೂಲ ಆಗದಂತೆ ರಸ್ತೆ ವಿಸ್ತರಣೆ ಮಾಡಬೇಕು ಎಂದು ತಿಳಿಸಿದರು.

ಚಿಕ್ಕಮಗಳೂರು ನಗರದ ಮಾದರಿಯಲ್ಲಿ ಮೂಡಿಗೆರೆ ಪಟ್ಟಣದಲ್ಲಿ ರಸ್ತೆ ವಿಸ್ತರಣೆಯಾಗಬೇಕು. ಬಿಳಿಗುಳದಿಂದ ಹ್ಯಾಂಡ್‌ ಪೋಸ್ಟ್‌ ತನಕ ರಸ್ತೆ ವಿಭಜಕ ನಿರ್ಮಾಣ ಮಾಡಲು ಕ್ರಮ ವಹಿಸಿ ಎಂದರು.

ಚಿಕ್ಕಮಗಳೂರು ನಗರದ ಎಐಟಿ ವೃತ್ತದಿಂದ ಹಿರೇಮಗಳೂರು ತನಕ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಆದರೂ ಚಿಕ್ಕಕುರುಬರಹಳ್ಳಿ ಬಳಿ ಇನ್ನು ಭೂಸ್ವಾಧೀನವಾಗಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಶೃಂಗೇರಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ-206ರ ಕಾಮಗಾರಿ ಸಂಬಂಧ ಹಾಗೂ ತರೀಕೆರೆ ತಾಲ್ಲೂಕಿನ ಹಳೆಯೂರು ಬಳಿ ಶ್ರೀಗಂಧ ಬೆಳೆಗಾರರ ಸಮಸ್ಯೆಗೆ ಸಂಬಂಧ ನ್ಯಾಯಾಲಯದ ತಡೆಯಾಜ್ಞೆ ತೆರವಾಗಿದೆ. ಕೂಡಲೇ ಅರಣ್ಯ ಇಲಾಖೆ ಮೂಲಕ ಮರಕಡಿತಲೆ ಮಾಡಿ ಕಾಮಗಾರಿ ಆರಂಭಿಸಲಾಗುವುದು ಎಂದು  ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಎಂ.ಸಿ. ಹಳ್ಳಿ- ಎಚ್. ರಂಗಾಪುರದ ಬಳಿ ಭದ್ರಾ ಪುನರ್ವಸತಿ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದೆ. ಅರಣ್ಯ ಇಲಾಖೆ ಜಾಗದಲ್ಲಿಯೇ ಪುನರ್ವಸತಿ ಕಲ್ಪಿಸಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಸಭೆಗೆ ಮಾಹಿತಿ ನೀಡಿದರು.

ವಾರದಲ್ಲಿ ಕಾಮಗಾರಿಗೆ ಚಾಲನೆ
ಮೂಗ್ತಿಹಳ್ಳಿ–ಮೂಡಿಗೆರೆ ರಸ್ತೆ ಅಭಿವೃದ್ಧಿಗೆ ಒಂದು ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘160 ಜನರಿಗೆ ಭೂಪರಿಹಾರ ನೀಡಬೇಕಿದ್ದು ಈ ಸಂಬಂಧ ನೋಟಿಸ್ ನೀಡುವ ಕೆಲಸ ಆರಂಭವಾಗಿದೆ. ಕಾಮಗಾರಿ ಆರಂಭಿಸಲು ತಯಾರಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದರು.  ಚಿಕ್ಕಮಗಳೂರು–ಬೇಲೂರು ಚಿಕ್ಕಮಗಳೂರು ಬೈಪಾಸ್ ರಸ್ತೆ ಅಭಿವೃದ್ಧಿ ಬಗ್ಗೆಯೂ ಚರ್ಚೆ ನಡೆಸಲಾಗಿದೆ.  ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿಯನ್ನು ಜಿಲ್ಲೆಗೆ ಕರೆಸಿ ಕಾಮಗಾರಿ ತ್ವರಿತ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.