ADVERTISEMENT

ಬದಲಾವಣೆಗೆ ನಾಂದಿ: ಟಿ.ವಿ.ಕಟ್ಟೀಮನಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 14:41 IST
Last Updated 16 ಸೆಪ್ಟೆಂಬರ್ 2020, 14:41 IST
ಚಿಕ್ಕಮಗಳೂರಿನ ಎಐಟಿಯಲ್ಲಿ ಏರ್ಪಡಿಸಿದ್ದ ವಿಚಾರ ಗೋಷ್ಠಿಯಲ್ಲಿ ಡಾ.ಟಿ.ವಿ.ಕಟ್ಟೀಮನಿ ಮಾತನಾಡಿದರು.
ಚಿಕ್ಕಮಗಳೂರಿನ ಎಐಟಿಯಲ್ಲಿ ಏರ್ಪಡಿಸಿದ್ದ ವಿಚಾರ ಗೋಷ್ಠಿಯಲ್ಲಿ ಡಾ.ಟಿ.ವಿ.ಕಟ್ಟೀಮನಿ ಮಾತನಾಡಿದರು.   

ಚಿಕ್ಕಮಗಳೂರು: ‘ಭಾರತ, ಹಳ್ಳಿ, ಕಸುಬು, ಮೌಲ್ಯ ಕೇಂದ್ರಿತ ಶಿಕ್ಷಣ ನೀಡುವುದು, ಆ ಮೂಲಕ ದೇಶದಲ್ಲಿ ಬದಲಾವಣೆ ತರುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ–2020) ಉದ್ದೇಶ’ ಎಂದು ಆಂಧ್ರಪ್ರದೇಶದ ಕೇಂದ್ರ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿ ಸದಸ್ಯ ಡಾ.ಟಿ.ವಿ.ಕಟ್ಟೀಮನಿ ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಅನುದಾನರಹಿತ ಶಾಲೆಗಳ ಒಕ್ಕೂಟದ ವತಿಯಿಂದ ನಗರದ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದಲ್ಲಿ (ಎಐಟಿ) ಬುಧವಾರ ಏರ್ಪಡಿಸಿದ್ದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ವಿದ್ಯೆಗೂ ಕಾಯಕಕ್ಕೂ ಸಂಬಂಧ ಕಲ್ಪಿಸುವುದು ಹೊಸ ನೀತಿಯ ಪ್ರಮುಖ ಅಂಶ. ಮಾತೃ ಭಾಷೆಯಲ್ಲಿ ಶಿಕ್ಷಣ, ದೇಶ ಕೇಂದ್ರಿತ ಸಂಶೋಧನೆ, ಕಸುಬುಗಳು, ವಿವಿಧ ಕ್ಷೇತ್ರಗಳಲ್ಲಿ ಯಶೋಗಾಥೆಗಳು ಎಲ್ಲವನ್ನು ಒಳಗೊಂಡಿದೆ ಎಂದು ಅವರು ವಿವರಿಸಿದರು.

‘ಭಾರತೀಯರು ಅಮೆರಿಕ, ಇಂಗ್ಲೆಂಡ್‌ನದ್ದನ್ನು ಕಲಿಯಬೇಕಿಲ್ಲ. ನಮ್ಮ ಪೂರ್ವಿಕರ ವಿಚಾರಗಳು, ನಮ್ಮ ಗ್ರಂಥಗಳೇ ಸಾಕು. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದು ಸಾಧನೆಗೆ ಮೆಟ್ಟಿಲು. ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲಿ ನೀಡಬೇಕು’ ಎಂದು ಪ್ರತಿಪಾದಿಸಿದರು.

ADVERTISEMENT

‘ಅತಿ ಕಡಿಮೆ ಶ್ರಮವಹಿಸಿ ‘ಗಳಿಸು’ವುದನ್ನು ಕಲಿಸುವುದು ಪರದೇಶದ ವಿದ್ಯೆ. ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬುದು ನಮ್ಮ ದೇಶದ ವಿದ್ಯೆ. ನಮ್ಮ ದೇಶದ ವಿದ್ಯೆಯನ್ನು ಮಕ್ಕಳಿಗೆ ಕಲಿಸುವುದು, ಜಾಗೃತ ನಾಯಕರನ್ನು ತಯಾರಿಸುವುದು ಈ ನೀತಿಯ ಗುರಿಯಾಗಿದೆ’ ಎಂದು ಅವರು ಹೇಳಿದರು.

‘ಶಿಕ್ಷಕರು ಮನಸ್ಸು ಮಾಡಿದರೆ ದೇಶದಲ್ಲಿ ಬದಲಾವಣೆ ರೂಪಿಸಲು, ಭಾರತವನ್ನು ವಿಶ್ವ ಗುರುವನ್ನಾಗಿಸಲು ಸಾಧ್ಯ ಇದೆ. ಹೊಸ ನೀತಿ ಅನುಷ್ಠಾನ ನಿಟ್ಟಿನಲ್ಲಿ ಶಿಕ್ಷಕರು ಸಂಕಲ್ಪ ತೊಡಬೇಕು. ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬಬೇಕು’. ‘ಶಿಕ್ಷಕರಿಗೆ ಸವಲತ್ತುಗಳನ್ನು ಕಲ್ಪಿಸಬೇಕು, ಅವರಿಗೆ ಇತರ ಕೆಲಸಗಳಿಗೆ ನಿಯೋಜನೆ ಮಾಡುವುದು ಸ್ಥಗಿತಗೊಳ್ಳಬೇಕು (ಗಣತಿ, ಚುನಾವಣೆ…)’ ಎಂದು ತಿಳಿಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್‌.ನರೇಂದ್ರ ಪೈ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕೆಎಸ್‌ಒಯು ಕುಲಪತಿ ಪ್ರೊ.ವಿದ್ಯಾಶಂಕರ್‌, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ.ಮಲ್ಲೇಶಪ್ಪ,

ಬಿಇಒ ಎಸ್‌.ಆರ್‌.ಮಂಜುನಾಥ್‌, ಚಂದ್ರಶೇಖರ ಸ್ವಾಮೀಜಿ, ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಷಡಕ್ಷರಿ, ರಮೇಶ್‌, ರಿಜ್ವಾನಾ, ನಂದಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.