
ಕಡೂರು: ‘ರಾಜ್ಯದಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ಆರಂಭಿಸುವ ಸಮಯದಲ್ಲಿ ಮೂಲಸೌಕರ್ಯ ಕಲ್ಪಿಸಿ, ಕನಿಷ್ಠ 4 ಕೋರ್ಸ್‌ಗಳನ್ನು ಆರಂಭಿಸಲು ಕ್ರಮ ವಹಿಸಲಾಗುತ್ತದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಕಡೂರು ಪಟ್ಟಣದಲ್ಲಿ ನಿರ್ಮಾಣವಾಗಿರುವ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡವನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 107 ಪಾಲಿಟೆಕ್ನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಒಂದರಿಂದ ಗರಿಷ್ಠ 16 ಕೋರ್ಸ್‌ಗಳವರೆಗೆ ಇರುವ ಕಾಲೇಜುಗಳಿವೆ. ಆದರೆ, ಪ್ರತಿಯೊಂದು ಪಾಲಿಟೆಕ್ನಿಕ್‌ಗಳಲ್ಲಿ ಕನಿಷ್ಠ 4 ಕೋರ್ಸ್ ಇರುವಂತೆ ಮಾನದಂಡವನ್ನು ರೂಪಿಸಲಾಗಿದೆ. ಕಡೂರು ಕಾಲೇಜಿನಲ್ಲಿ ಮೂರು ಕೋರ್ಸ್ ಇದ್ದು, ಇನ್ನೂ 3 ಕೋರ್ಸ್ ತೆರೆಯಲು ಬೇಡಿಕೆ ಬಂದಿದೆ. ಅದರಲ್ಲಿಯೂ ಮೆಕ್ಯಾನಿಕಲ್ ವಿಭಾಗಕ್ಕೆ ಬೇಡಿಕೆ ಹೆಚ್ಚಿದ್ದು, ಪರಿಶೀಲಿಸಿ ಬೇಡಿಕೆ ಈಡೇರಿಸಲಾಗುವುದು. ಸಾಕಷ್ಟು ಕಡೆ ಕಚೇರಿ ಪೀಠೋಪಕರಣ, ಕಂಪ್ಯೂಟರ್, ಕಾಪೌಂಡ್ ನಿರ್ಮಿಸಲು ಬೇಡಿಕೆ ಇದ್ದು ಇದಕ್ಕಾಗಿ ₹10 ಕೋಟಿ ಅನುದಾನ ಮಂಜೂರಾಗಿದ್ದು, ಇಲ್ಲಿ ಅಗತ್ಯವಿರುವ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
ಪಾಲಿಟೆಕ್ನಿಕ್‌ಗಳಲ್ಲಿ ಹಲವು ಕಡೆ ವಿದ್ಯಾರ್ಥಿಗಳ ಊಟಕ್ಕೆ ಹಣ ಪಾವತಿಸಬೇಕಾದ ವ್ಯವಸ್ಥೆ ಇತ್ತು. ಹಾಸ್ಟೆಲ್ ಇದ್ದರೂ ನಿರ್ವಹಣೆ ಸುಲಭ ಇರಲಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಅವುಗಳ ನಿರ್ವಹಣೆಯನ್ನು ಬಿಸಿಎಂ ಇಲಾಖೆಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಊಟ ಮತ್ತು ವಸತಿ ದೊರಕಿದಾಗ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಗುಣಮಟ್ಟದ ಶಿಕ್ಷಣ ನಮ್ಮ ಮೊದಲ ಆದ್ಯತೆ ಇದ್ದು, ವಿಶೇಷವಾಗಿ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಎಸ್.ಆನಂದ್, ಕಡೂರು ಪಾಲಿಟೆಕ್ನಿಕ್ ಆರಂಭವಾಗಿ 2 ವರ್ಷಗಳಾಗಿದ್ದರೂ ಕಟ್ಟಡ ಉದ್ಘಾಟನೆಯಾಗಿರಲಿಲ್ಲ. ಇದೀಗ ಉತ್ತಮ ಕಟ್ಟಡ, ವರ್ಕಶಾಪ್, ಲ್ಯಾಬ್‌ಗಳು ಸುಸಜ್ಜಿತವಾಗಿದೆ. ಇನ್ನು ಹಲವು ವಿಭಾಗಗಳ ಆರಂಭಕ್ಕೆ ಬೇಡಿಕೆ ಇಟ್ಟಿದ್ದು, ಕಾಂಪೌಂಡ್ ನಿರ್ಮಿಸಲು ಸಹ ಮನವಿ ಮಾಡಿದ್ದೇವೆ. ಈ ಭಾಗದಲ್ಲಿ ಅಕ್ಕಪಕ್ಕದಲ್ಲಿಯೇ ಜಿಟಿಟಿಸಿ, ಐಟಿಐ, ಪಾಲಿಟೆಕ್ನಿಕ್ ಇದ್ದು ಇನ್ನೂ 30 ಎಕರೆ ಖಾಲಿ ಭೂಮಿ ಇದೆ. ಸಚಿವರು ಎಂಜಿನಿಯರಿಂಗ್ ಕಾಲೇಜು ಅಥವಾ ತಾಂತ್ರಿಕ ಹಬ್ ಮಂಜೂರು ಮಾಡಿಸಿದರೆ ಈ ಭಾಗವು ಒಂದು ಬೃಹತ್ ‘ಟೆಕ್ನಿಕಲ್ ಸೆಂಟರ್’ ಆಗಿ ಬೆಳೆಯಲಿದೆ ಎಂದರು.
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ, ಭದ್ರಾ ಕಾಡಾದ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ಪ್ರಾಂಶುಪಾಲ ವಿ.ಉಮಾಮಹೇಶ್ವರ್, ತಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಲೇಪಾಕ್ಷಿ, ಕಾಲೇಜಿಗೆ ತೆರಳಲು ರಸ್ತೆಗೆ ಭೂಮಿ ದಾನ ನೀಡಿದ ಹರುವನಹಳ್ಳಿಯ ಬಸಪ್ಪ, ರಾಮಣ್ಣ, ಮೋಹನ್ ಸಹೋದರರನ್ನು ಸಚಿವರು ಸನ್ಮಾನಿಸಿದರು. ಉಪನ್ಯಾಸಕರು, ಪಾಲಿಟೆಕ್ನಿಕ್ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.