ADVERTISEMENT

ಹೊಸ ರೂಪ ತಾಳಿದ ಮಲ್ಲಂದೂರು ಚರ್ಚ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 5:46 IST
Last Updated 26 ಫೆಬ್ರುವರಿ 2025, 5:46 IST
   

ಆಲ್ದೂರು: ಪ್ರಧಾನ ದೇಗುಲದ ಉಪಕೇಂದ್ರವಾಗಿದ್ದ ಮಲ್ಲಂದೂರು ಚರ್ಚ್‌ 64 ವರ್ಷಗಳಲ್ಲಿ ಹಲವು ರೂಪಗಳನ್ನು ತಾಳಿದ್ದು, ಮತ್ತೊಮ್ಮೆ ನವೀಕರಣಗೊಂಡು ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ.

ಮಲ್ಲಂದೂರು ಸಂತ ಲಾರೆನ್ಸ್ ಚರ್ಚ್‌ನ ಧರ್ಮ ಕೇಂದ್ರವು 1961ರಲ್ಲಿ ಚಿಕ್ಕಮಗಳೂರು ಸಂತ ಜೋಸೆಫರ ಪ್ರಧಾನಾಲಯದ ಉಪ ಕೇಂದ್ರವಾಗಿತ್ತು.  ಮೋಡಗಳನ್ನೇ ಚುಂಬಿಸುವಂತೆ ಭಾಸವಾಗುವ ಎತ್ತರದ ಬೆಟ್ಟ ಗುಡ್ಡಗಳ ತಪ್ಪಲಿನ ಕಾಫಿ ತೋಟಗಳ, ಗಿಡ–ಮರಗಳ ನಡುವೆ ಧರ್ಮ ಕೇಂದ್ರವೊಂದು ತಲೆ ಎತ್ತಿತು.

ಅಂಜೆಲೊ ಫರ್ನಾಂಡಿಸ್ ಅವರ ನೇತೃತ್ವದಲ್ಲಿ ಕಥೋಲಿಕ ಕಾಫಿ ಬೆಳೆಗಾರರು ಒಟ್ಟಾಗಿ ಜೆ.ಎಂ.ಎಲ್. ಡಿಸೋಜ ಅವರ ನೇತೃತ್ವದಲ್ಲಿ 1963ರಲ್ಲಿ ಚರ್ಚ್ ನಿರ್ಮಾಣವಾಯಿತು. ಮೈಸೂರಿನ ಅಂದಿನ ಧರ್ಮಾಧ್ಯಕ್ಷ ರೆನೆ ಪ್ಯೂಗಾ ಉದ್ಘಾಟಿಸಿದ್ದರು. ಆದರೂ, 1971ರ ತನಕ ಚಿಕ್ಕಮಗಳೂರಿನ ಉಪಕೇಂದ್ರವಾಗಿಯೇ ಉಳಿದಿತ್ತು. 1971ರಲ್ಲಿ ಇದನ್ನು ಒಂದು ಧರ್ಮ ಕೇಂದ್ರವನ್ನಾಗಿ ಪರಿವರ್ತಿಸಲಾಯಿತು. ಈಗಿನ ಮೈಸೂರಿನ ಧರ್ಮಾಧ್ಯಕ್ಷ ಸ್ವಾಮಿ ಥಾಮಸ್ ವಾಳಪಿಳ್ಳೆ ಅವರು ಧರ್ಮಕೇಂದ್ರದ ಪ್ರಥಮ ಧರ್ಮಗುರುವಾಗಿ ನೇಮಕಗೊಂಡರು.

ADVERTISEMENT

ನಂತರ ವಿಚಾರಣೆ ಗುರುಗಳಾಗಿ ಸ್ವಾಮಿ ಪಾಸ್ಕಲ್ ಮರಿಯಪ್ಪ ಬಂದರು. ಸಾಹಿತಿಗಳೂ ಆಗಿದ್ದ ಅವರು ‘ನವಜ್ಯೋತಿ’ ಮಾಸ ಪತ್ರಿಕೆಯ ಸಂಪಾದಕರಾಗಿ ಧರ್ಮದ ಕೆಲಸ ಮಾಡಿದರು. ನಂತರ ಇಲ್ಲಿನ ಪರಿಸರ ಕಂಡ ಕಾಪುಚಿನ್ ಸಭೆಯ ಧರ್ಮಗುರುವಾಗಿದ್ದ ಸಿರಿಲ್ ಅಂದ್ರಾದೆ ಹಾಗೂ ವಾಲ್ಟರ್ ಸಲ್ದಾನ ಅವರು 1979ರ ಡಿಸೆಂಬರ್‌ನಲ್ಲಿ ಈ ಧರ್ಮ ಕೇಂದ್ರದ ಮೇಲ್ವಿಚಾರಣೆ ವಹಿಸಿಕೊಂಡರು.

ಈ ದೇವಾಲಯದ ಒಂದು ಎಕರೆ ಜಾಗದಲ್ಲಿ ಕಾಫಿ ಗಿಡ ನೆಡಲಾಯಿತು. 1984ರಲ್ಲಿ ಮಲ್ಲಂದೂರಿಗೆ ಸ್ವಾಮಿ ವಲೇರಿಯನ್ ಡಿಸಿಲ್ವಾ ಅವರು ವಿಚಾರಣೆ ಗುರುಗಳಾಗಿ ನೇಮಕಗೊಂಡರು. ಅವರ ನೇತೃತ್ವದಲ್ಲಿ ಧರ್ಮಕೇಂದ್ರವು ಹಲವು ರೀತಿಯಲ್ಲಿ ಅಭಿವೃದ್ಧಿಗೊಂಡಿತು. ಮೈಲಿಮನೆಯಲ್ಲಿ ಸರ್ಕಾರ ನೀಡಿದ ಜಾಗದಲ್ಲಿ ದೇವಾಲಯ ಕಟ್ಟಿಸಲಾಯಿತು. 1987ರಲ್ಲಿ ಸ್ವಾಮಿ ಚಾರ್ಲ್ಸ್ ಸಾಲ್ದಾನ ಅವರು ಧರ್ಮಗುರುವಾಗಿ ನೇಮಕವಾದರು.

1991ರಲ್ಲಿ ಸ್ವಾಮಿ ಪೀಟರ್ ಮೆಂಡೋನ್ಸಾ, 1993ರಲ್ಲಿ ಸ್ವಾಮಿ ಅಂತೋಣಿ ಡಿಸೋಜ, 1999ರಲ್ಲಿ ಸ್ವಾಮಿ ಲೂರ್ದುಸ್ವಾಮಿ, 2001ರಲ್ಲಿ ಸ್ವಾಮಿ ಅಂತೋಣಿ ವಾಸ್ ಅವರು ಅವರು ಧರ್ಮಗುರುವಾಗಿ ಹಲವು ಕಾರ್ಯಗಳನ್ನು ಕೈಗೊಂಡರು. 2004ರಲ್ಲಿ ಸ್ವಾಮಿ ಮಾರ್ಕ್ ಸಲ್ದಾನಾ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಮಲ್ಲಂದೂರಿನಲ್ಲಿ ಕಪುಚಿನ್ ಸಭೆಯ ಗುರುಗಳು 30 ವರ್ಷಗಳ ಸೇವೆ ಸಲ್ಲಿಸಿ ತೆರಳಲು ಸಿದ್ದರಾದರು. ಆಗ ವಂ. ಸ್ವಾಮಿ ಜೋಸೆಫ್ ಮಾಡ್ತಾ 2007ರಲ್ಲಿ ಬಂದು ಹೊಸ ಗುರು ನಿವಾಸ ಕಟ್ಟಿಸಿದರು. ಮುಖ್ಯ ರಸ್ತೆಯಿಂದಲೂ ವೀಕ್ಷಿಸಿ ಪ್ರಾರ್ಥಿಸಲು ಸಾಧ್ಯವಾಗುವಂತೆ ಮರಿಯಮ್ಮ ಗವಿ ನಿರ್ಮಿಸಿದರು. 2011ರಲ್ಲಿ ಧರ್ಮ ಕೇಂದ್ರದ ಸುವರ್ಣ ಮಹೋತ್ಸವದ ಆಚರಣೆ ಕೂಡ ನಡೆಯಿತು. 

2013ರಲ್ಲಿ ಅವರ ವರ್ಗಾವಣೆಯ ನಂತರ ಸ್ವಾಮಿ ಮಾರ್ಸೆಲ್ ಪಿಂಟೊ, ಸ್ವಾಮಿ ಪೌಲ್ ಮಚಾದೊ, ಸ್ವಾಮಿ ಲ್ಯಾನ್ಸಿ ಪಿಂಟೊ ತಲಾ 1 ವರ್ಷ ಸೇವೆ ಸಲ್ಲಿಸಿದರು. 2016ರಲ್ಲಿ ಮೌಂಟ್ ಪೋರ್ಡ್ ಸಭೆಯ ಗುರುಗಳಾದ ಸ್ವಾಮಿ ವಿಕ್ಟರ್ ಡಾಯಸ್‌ ಬಂದರು. 2019ರಲ್ಲಿ ಸ್ವಾಮಿ ಫ್ರೆಡ್ರಿಕ್ ಪಾಯ್ಸ್‌ ಬಂದು ಸೇವೆ ಮುಂದುವರಿಸಿದರು.

ಮೊದಲ ಧರ್ಮ ಗುರುವಾಗಿ ಫಾ. ಥಾಮಸ್ ವಾಜಪಳ್ಳಿ ಅವರಿಂದ ಆದಿಯಾಗಿ ಈವರೆಗೆ 17 ಗುರುಗಳು ಇಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆರು ದಶಕಗಳ ಬಳಿಕ ಶಿಥಿಲಾವಸ್ಥೆಗೆ ತಲುಪಿದ್ದ ಕಟ್ಟಡ ದುರಸ್ತಿ ಕಾಮಗಾರಿಯನ್ನು 2023ರ ಜನವರಿ 8ರಿಂದ ಆರಂಭವಾಯಿತು. ಅಂದಾಜು ₹1.50 ಕೋಟಿ ಖರ್ಚಾಗಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ₹50 ಲಕ್ಷ ಅನುದಾನ ಲಭಿಸಿದೆ. 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ನೆರವು ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮತ್ತು ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ವಿಶೇಷ ಆಸಕ್ತಿ ಕಾರಣ ಎಂದು ಚರ್ಚ್‌ನವರು ನೆನಪಿಸಿಕೊಳ್ಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.