ADVERTISEMENT

ಮತ್ತೊಂದು ಕಾಡುಹಂದಿ ಕಳೆಬರ ಪತ್ತೆ

ಭದ್ರಾ ಅಭಯಾರಣ್ಯದಲ್ಲಿ ಸಾವಿನ ಸರಣಿ

ಬಿ.ಜೆ.ಧನ್ಯಪ್ರಸಾದ್
Published 27 ಏಪ್ರಿಲ್ 2020, 17:09 IST
Last Updated 27 ಏಪ್ರಿಲ್ 2020, 17:09 IST
ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯದ ತಡಸ ಸೇತುವೆ ಪ್ರದೇಶದಲ್ಲಿ ಸೋಮವಾರ ಪತ್ತೆಯಾದ ಕಾಡುಹಂದಿಯ ಮರಣೋತ್ತರ ಪರೀಕ್ಷೆ ಸಂಜೆ ನಡೆಯಿತು.
ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯದ ತಡಸ ಸೇತುವೆ ಪ್ರದೇಶದಲ್ಲಿ ಸೋಮವಾರ ಪತ್ತೆಯಾದ ಕಾಡುಹಂದಿಯ ಮರಣೋತ್ತರ ಪರೀಕ್ಷೆ ಸಂಜೆ ನಡೆಯಿತು.   

ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯದಲ್ಲಿ ಕಾಡುಹಂದಿಗಳ ಸಾವಿನ ಸರಣಿ ಮುಂದುವರಿದಿದ್ದು, ಮತ್ತೊಂದು ಕಳೆಬರ ಸೋಮವಾರ ಪತ್ತೆಯಾಗಿದೆ.

ಭದ್ರಾ ಹಿನ್ನೀರು ಪ್ರದೇಶದ ತಡಸ ಸೇತುವೆ ಸಮೀಪದ ಸೋಮವಾರ ಬೆಳಿಗ್ಗೆ ಕಳೆಬರ ಸಿಕ್ಕಿದೆ. ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಕಾಣಿಸಿದೆ ಎಂದು ಭದ್ರಾ ಹುಲಿ ಯೋಜನೆ ನಿರ್ದೇಶಕ ಧನಂಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಮವಾರ ಗಂಡು ಹಂದಿ ಮೃತಪಟ್ಟಿದೆ. ಅದಕ್ಕೆ ಆರರಿಂದ ಏಳು ವರ್ಷ ಇರಬಹುದು. ಕಳೆಬರದಿಂದ ಮಾದರಿ ಸಂಗ್ರಹಿಸಲಾಗಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಶಿವಮೊಗ್ಗ ವನ್ಯಜೀವಿ ವಿಭಾಗದ ಹಿರಿಯ ಪಶುವೈದ್ಯಾಧಿಕಾರಿ ಎಸ್‌.ವಿನಯ್‌ ತಿಳಿಸಿದ್ದಾರೆ.

ADVERTISEMENT

ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಅರಣ್ಯದಲ್ಲಿ ಗಸ್ತನ್ನೂ ಹೆಚ್ಚಿಸಲಾಗಿದೆ.

ಇದೇ 19ರಂದು ಎರಡು ಹೆಣ್ಣು ಹಂದಿಗಳ ಕಳೆಬರ ಪತ್ತೆಯಾಗಿದ್ದವು. ಈ ಪೈಕಿ ಒಂದು ಗರ್ಭಿಣಿ. ಕಳೆಬರದ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಪರೀಕ್ಷೆಗೆ ರವಾನಿಸಲಾಗಿದೆ. ಇದೇ 1ರಿಂದ ಈವರೆಗೆ 27ರವರೆಗೆ 15 ಕಳೆಬರಗಳು ಸಿಕ್ಕಿವೆ. ಬಹುತೇಕ ಕಳೆಬರಗಳ ಪೂರ್ಣ ಕೊಳೆತ ಸ್ಥಿತಿಯಲ್ಲಿ ಸಿಕ್ಕಿವೆ.

‘ಕಾಡುಹಂದಿಗಳು ಸರಣಿಯಾಗಿ ಸಾವಿಗೀಡಾಗುತ್ತಿವೆ. ಅರಣ್ಯದ ಇತರೆಡೆಗಳಲ್ಲಿ ಹಂದಿಗಳು ಮೃತಪಟ್ಟಿವೆಯೇ ಎಂಬ ನಿಟ್ಟಿನಲ್ಲಿಯೂ ಗಮನ ಹರಿಸಬೇಕು. ಹಂದಿಗಳ ಸಾವಿಗೆ ಕಾರಣ ಪತ್ತೆ ನಿಟ್ಟಿನಲ್ಲಿ ಸಂಬಂಧಪಟ್ಟವರು ಕಾರ್ಯ ಪ‍್ರವೃತ್ತರಾಗಬೇಕು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಎಚ್ಚರ ವಹಿಸಬೇಕು ಮತ್ತು ಆದ್ಯ ಗಮನ ಹರಿಸಬೇಕು’ ಎಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.