ADVERTISEMENT

ಮಂಡಳಿಗೆ ಪ್ರಾಥಮಿಕ ವರದಿ ಸಲ್ಲಿಕೆ

ಚಿಕ್ಕಮಗಳೂರು ಜಿಲ್ಲೆಯ ಜನತಾ ಜೀವವೈವಿಧ್ಯ ದಾಖಲಾತಿ ಪ್ರಕ್ರಿಯೆ

ಬಿ.ಜೆ.ಧನ್ಯಪ್ರಸಾದ್
Published 24 ಅಕ್ಟೋಬರ್ 2020, 16:56 IST
Last Updated 24 ಅಕ್ಟೋಬರ್ 2020, 16:56 IST
ಕ್ಷೇತ್ರ ಕಾರ್ಯದಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಸ್ಥಳೀಯ ಮಹಿಳೆಯೊಬ್ಬರಿಂದ ಮಾಹಿತಿ ಪಡೆಯುತ್ತಿರುವುದು.
ಕ್ಷೇತ್ರ ಕಾರ್ಯದಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಸ್ಥಳೀಯ ಮಹಿಳೆಯೊಬ್ಬರಿಂದ ಮಾಹಿತಿ ಪಡೆಯುತ್ತಿರುವುದು.   

ಚಿಕ್ಕಮಗಳೂರು: ಜಿಲ್ಲೆಯ ಎಲ್ಲ 227 ಗ್ರಾಮ ಪಂಚಾಯಿತಿಗಳ ಜನತಾ ಜೀವವೈವಿಧ್ಯ ದಾಖಲಾತಿ (ಪಿಬಿಆರ್‌) ಆರಂಭಿಕ ವರದಿಯನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಸಲ್ಲಿಸಲಾಗಿದೆ.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪಿಬಿಆರ್‌ ಸಿದ್ಧಪಡಿಸಲಾಗಿದೆ. ಪ್ರತಿ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಪ್ರದೇಶದಲ್ಲಿನ ಪರಿಸರ, ಜೈವಿಕ ಸಂಪನ್ಮೂಲಗಳು, ಅದಕ್ಕೆ ಸಂಬಂಧಿಸಿದ ಜ್ಞಾನ ಪರಂಪರೆ ಮಾಹಿತಿಗಳು ಈ ವರದಿಯಲ್ಲಿವೆ. ಪ್ರತಿ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿ (ಬಿಎಂಸಿ) ರಚಿಸಲಾಗಿದೆ. ಜೀವವೈವಿಧ್ಯ ದಾಖಲಾತಿಗೆ ಸಮಿತಿಯು ಪೂರಕ ಮಾಹಿತಿಗಳನ್ನು ಒದಗಿಸಿದೆ.

ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಪರಿಸರ ಅಧ್ಯಯನ ವಿಭಾಗಗಳ ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ವಿದ್ಯಾರ್ಥಿಗಳ ತಂಡಗಳು ಕ್ಷೇತ್ರ ಕಾರ್ಯ, ಸಮೀಕ್ಷೆ ನಡೆಸಿ ಸ್ಥಳೀಯರಿಂದ ಮಾಹಿತಿ ಕ್ರೋಡೀಕರಿಸಿವೆ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಡಾ.ಸಯ್ಯದ್‌ ಅಬ್ರಾರ್‌, ಶೃಂಗೇರಿಯ ಜೆಸಿಬಿಎಂ ಕಾಲೇಜಿನ ಡಾ.ಕುಮಾರಸ್ವಾಮಿ ಉಡುಪ, ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಜೆ.ನಾರಾಯಣ, ಪ್ರೊ.ಬಿ.ತಿಪ್ಪೇಸ್ವಾಮಿ ಅವರು ದಾಖಲಾತಿ ವರದಿ ತಯಾರಿಸಿ, ಸಾಮಾಜಿಕ ಅರಣ್ಯ ವಿಭಾಗಕ್ಕೆ ನೀಡಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ವರದಿಯನ್ನು ಕಳೆದ ಆಗಸ್ಟ್‌ನಲ್ಲಿ ಮಂಡಳಿಗೆ ಸಲ್ಲಿಸಿದ್ದಾರೆ.

ADVERTISEMENT

ಸ್ಥಳೀಯ ಸಂಸ್ಥೆ ವ್ಯಾಪ್ತಿ ಪ್ರದೇಶದಲ್ಲಿನ ಔಷಧೀಯ ಸಸ್ಯಗಳು, ಅಲಂಕಾರಿಕ ಮತ್ತು ಸುಗಂಧ ಸಸ್ಯಗಳು, ಬಿದಿರು, ಬೆತ್ತ, ಗಿಡಮೂಲಿಕೆಗಳು, ಗಡ್ಡೆ ಗೆಣಸು, ಹುಲ್ಲು, ಬಳ್ಳಿ, ಕಳೆ, ಮರಗಳು, ಪೊದೆಗಳು, ಧಾನ್ಯಗಳು, ಬೆಳೆಗಳು, ಹಣ್ಣುಗಳು, ಮೇವಿನ ಬೆಳೆ ವಿವರಗಳನ್ನು ವರದಿಯಲ್ಲಿ ನಮೂದಿಸಲಾಗಿದೆ.

ಮಣ್ಣಿನ ವಿಧ, ಭೂ–ಜಲ ದೃಶ್ಯಗಳು, ಜಲವಾಸ ಸಸ್ಯ– ಜೀವವೈವಿಧ್ಯ ಮಾಹಿತಿಗಳನ್ನು ದಾಖಲಿಸಲಾಗಿದೆ. ಸಾಕು ಪ್ರಾಣಿಗಳು ಕಾಡು ಪ್ರಾಣಿಗಳು, ಪಕ್ಷಿ ಸಂಕುಲ, ಸರಿಸೃಪಗಳು, ಸಸ್ತನಿಗಳು, ಉಭಯವಾಸಿಗಳು, ಕೀಟಗಳು, ಜನರ ಕಸುಬುಗಳು, ಜಲಮೂಲಗಳು, ಪ್ರದೇಶದ ವೈಶಿಷ್ಟ್ಯಗಳನ್ನು ಗುರುತಿಸಲಾಗಿದೆ.‌

ಸ್ಥಳೀಯ ಸ್ವತ್ತುಗಳ ಸಮಗ್ರ ಮಾಹಿತಿ ಸಂಗ್ರಹ, ದಾಖಲೀಕರಣ ಇಡೀ ಪ್ರಕ್ರಿಯೆಯ ಉದ್ದೇಶವಾಗಿದೆ. ಒಂದು ಪ್ರದೇಶದ ಸ್ವತ್ತುಗಳನ್ನು ಬೇರೆಯವರು (ಅಂತರರಾಷ್ಟ್ರೀಯ ಮಟ್ಟದಲ್ಲಿ) ತಮ್ಮದೂ ಎಂದು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದನ್ನು ತಪ್ಪಿಸುವುದಕ್ಕೆ ಅನುಕೂಲವಾಗುತ್ತದೆ. ಅನನ್ಯ ಸ್ವತ್ತುಗಳನ್ನು ಗುರುತಿಸುವುದು ಪ್ರಕ್ರಿಯೆಯ ಭಾಗವಾಗಿದೆ.

‘ಈ ಮೊದಲು (2007ರಿಂದ 2012ರವರೆಗೆ) ಸ್ವಯಂ ಸೇವಾಸಂಸ್ಥೆಗಳು (ಎನ್‌ಸಿಒ) ಜನತಾ ಜೀವವೈವಿಧ್ಯ ದಾಖಲಾತಿ ಸಿದ್ಧಪಡಿಸುವ ಕಾರ್ಯ ಮಾಡಿದ್ದವು. ವರದಿಗಳಲ್ಲಿ ಕೆಲವಾರು ಸಸ್ಯ, ಪ್ರಾಣಿಗಳ ವೈಜ್ಞಾನಿಕ ಹೆಸರುಗಳು ತಪ್ಪಾಗಿ ದಾಖಲಾಗಿದ್ದವು. ಹೀಗಾಗಿ, 2013ರಿಂದ ವರದಿ ಸಿದ್ಧತಾ ಕಾರ್ಯವನ್ನು ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರಿಗೆ ವರ್ಗಾಯಿಸಿದ್ದಾರೆ. ವಿದ್ಯಾರ್ಥಿ ಸಮುದಾಯದ ‘ಸಾಥ್‌’ ಪಡೆದು ಮಾಹಿತಿ ಸಂಗ್ರಹಿಸಲಾಗಿದೆ. ನಾವು ಚಿಕ್ಕಮಗಳೂರು ಜಿಲ್ಲೆಯ 187 ಗ್ರಾಮ ಪಂಚಾಯಿತಿಯ ಪಿಬಿಆರ್‌ ಸಿದ್ಧಪಡಿಸಿದ್ದೇವೆ’ ಎಂದು ಡಾ.ಸಯ್ಯದ್‌ ಅಬ್ರಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೀವವೈವಿಧ್ಯ ದಾಖಲಾತಿ ನಿರಂತರ ಪ್ರಕ್ರಿಯೆ. ಈಗ ನಾವು ಪ್ರಾಥಮಿಕ ದತ್ತಾಂಶ ಆಧರಿಸಿ ವರದಿಯನ್ನು ಸಿದ್ಧಪಡಿಸಿ ನೀಡಿದ್ದೇವೆ. ಬಹುತೇಕ ಮೊದಲ ಹಂತದ ಪ್ರಕ್ರಿಯೆ ಮುಗಿದಿದೆ. ಮಂಡಳಿಯು ಎರಡನೇ ಹಂತದ ಪ್ರಕ್ರಿಯೆಗೆ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಬಹುದು’ ಎಂದು ತಿಳಿಸಿದರು.

‘ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ದಿನ ಕ್ಷೇತ್ರ ಕಾರ್ಯ ಮಾಡಿದೆವು. ದಾಖಲಾತಿ ನಮೂನೆಯಲ್ಲಿದ್ದ ಎಲ್ಲ ಕಾಲಂಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದೇ ದೊಡ್ಡ ಸವಾಲು. ಕೆಲ ನಾಟಿ ವೈದ್ಯರು, ವೃದ್ಧರು ದಾಖಲಾತಿಯ ಕುರಿತು ವಿಸ್ಕೃತವಾಗಿ ತಿಳಿಸಿದ ನಂತರವೇ ಮಾಹಿತಿ ನೀಡಿದರು’ ಎಂದು ಕ್ಷೇತ್ರ ಕಾರ್ಯ ನಿರ್ವಹಿಸಿದ ವಿದ್ಯಾರ್ಥಿನಿ ಅಕ್ಷತಾ ತಿಳಿಸಿದರು.

‘ಮಂಡಳಿ ಅನುಮೋದಿಸಿದ ಬಳಿಕ ಮುದ್ರಣ’

ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆ ಗಳ ಪಿಬಿಆರ್‌ ಸಿದ್ಧವಾಗಿವೆ. ಎಲ್ಲ 227 ಗ್ರಾಮ ಪಂಚಾಯಿತಿಗಳ ಪಿಬಿಆರ್‌ಗಳನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಈಗಾಗಲೇ ಸಲ್ಲಿಸಲಾಗಿದೆ. ಮಂಡಳಿ ಅನುಮೋದನೆ ನೀಡಿದ ನಂತರ ವರದಿ ಮುದ್ರಿಸುತ್ತೇವೆ’ ಎಂದು ಜನತಾ ಜೀವವೈವಿಧ್ಯ ದಾಖಲಾತಿ ಜಿಲ್ಲಾ ನೋಡಲ್‌ ಅಧಿಕಾರಿಯೂ ಆಗಿರುವ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ. ಶರಣಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಹಸಿರು ಪೀಠವು (ಎನ್‌ಜಿಟಿ) ವರದಿ ತಯಾರಿಗೆ ಗಡುವು ನೀಡಿತ್ತು. ಸಿದ್ಧಪಡಿಸದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿತ್ತು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.