ADVERTISEMENT

ಚಿಕ್ಕಮಗಳೂರು | ಇಲ್ಲ ತಪಾಸಣೆ: ಗಿರಿಯಲ್ಲಿ ಮತ್ತೆ ಪ್ಲಾಸ್ಟಿಕ್ ಹಾವಳಿ

ವಿಜಯಕುಮಾರ್ ಎಸ್.ಕೆ.
Published 28 ಏಪ್ರಿಲ್ 2025, 7:07 IST
Last Updated 28 ಏಪ್ರಿಲ್ 2025, 7:07 IST
ಮಾಣಿಕ್ಯಧಾರ ಜಲಪಾತದ ಬಳಿಯ ವಾಹನ ನಿಲುಗಡೆ ತಾಣದಲ್ಲಿ ಪಾಸ್ಟಿಕ್ ಬಾಟಲಿಗಳು ಬಿದ್ದಿರುವುದು
ಮಾಣಿಕ್ಯಧಾರ ಜಲಪಾತದ ಬಳಿಯ ವಾಹನ ನಿಲುಗಡೆ ತಾಣದಲ್ಲಿ ಪಾಸ್ಟಿಕ್ ಬಾಟಲಿಗಳು ಬಿದ್ದಿರುವುದು   

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಪ್ಲಾಸ್ಟಿಕ್ ಬಾಟಲಿ ಸಾಗಣೆ ನಿಷೇಧಿಸಲಾಗಿದೆ. ಅದರೆ, ಗಿರಿಭಾಗದಲ್ಲಿ ಎಲ್ಲೆಡೆ ಖಾಲಿ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಲೋಟಗಳು ರಾಶಿ ಬಿದ್ದಿವೆ. ಕೈಮರ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ಮಾಡದೆ ಹಾಗೇ ಬಿಡುತ್ತಿದ್ದು, ಗಿರಿಭಾಗದಲ್ಲಿ ಪ್ಲಾಸ್ಟಿಕ್ ರಾಶಿಗೆ ಕಾರಣವಾಗುತ್ತಿದೆ.

ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಝರಿ ಫಾಲ್ಸ್, ಹೊನ್ನಮ್ಮನಹಳ್ಳ, ಮಾಣಿಕ್ಯಧಾರದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ 2024ರ ಏಪ್ರಿಲ್‌ 14ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. 

4.99 ಲೀಟರ್‌ ತನಕ ನೀರು ಸಂಗ್ರಹಿಸಬಹುದಾದ ಪ್ಲಾಸ್ಟಿಕ್ ಬಾಟಲಿ, ಗುಟ್ಕಾ, ಚಿಪ್ಸ್ ಮತ್ತು ಇತರ ತಿನಿಸುಗಳ ಪ್ಯಾಕೇಟ್‌ಗಳನ್ನು ಗಿರಿ ಪ್ರದೇಶಕ್ಕೆ ಕೊಂಡೊಯ್ಯುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದವರ ವಿರುದ್ಧ ಐಪಿಸಿ 188 ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಆದೇಶದಲ್ಲಿ ತಿಳಿಸಿದ್ದರು.

ADVERTISEMENT

ಅಲ್ಲಂಪುರ ಬಳಿ ಪ್ಲಾಸ್ಟಿಕ್ ತಪಾಸಣಾ ಚೆಕ್‌ಪೋಸ್ಟ್ ತೆರೆದು ನಿರ್ವಹಿಸಬೇಕು ಮತ್ತು ಈ ಸಂಬಂಧ ಪ್ರತಿ ತಿಂಗಳು 5ರೊಳಗೆ ವರದಿ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದರು.

ಈ ಆದೇಶವನ್ನು ಆರಂಭದಲ್ಲಿ ಕಟ್ಟುನಿಟ್ಟಾಗಿ ಜಾರಿಗೂ ತರಲಾಗಿತ್ತು. ಕೈಮರ ಚೆಕ್‌ಪೋಸ್ಟ್‌ ಬಳಿ ಎಲ್ಲಾ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಪ್ಲಾಸ್ಟಿಕ್ ಬಾಟಲಿ ವಶಪಡಿಸಿಕೊಳ್ಳಲಾಗುತ್ತಿತ್ತು. ಚೆಕ್‌ಪೋಸ್ಟ್‌ ಬಳಿ ಪ್ಲಾಸ್ಟಿಕ್ ಬಾಟಲಿ ಹಾಕಲು ಸ್ಥಳವನ್ನೂ ನಿಗದಿ ಮಾಡಲಾಗಿದೆ.

ಆದರೆ, ಚೆಕ್‌ಪೋಸ್ಟ್‌ನಲ್ಲಿ ಇತ್ತೀಚೆಗೆ ವಾಹನಗಳ ತಪಾಸಣೆ ಇಲ್ಲವಾಗಿದೆ. ಭಾನುವಾರ ಚೆಕ್‌ಪೋಸ್ಟ್‌ನಲ್ಲಿ ಟಿಕೆಟ್ ನೀಡಿ ಪ್ರವೇಶ ಶುಲ್ಕ ಪಡೆಯಲಾಗುತ್ತಿತ್ತು. ಆದರೆ, ವಾಹನಗಳ ತಪಾಸಣೆ ಮಾತ್ರ ಇಲ್ಲವಾಗಿತ್ತು. ಇದರಿಂದ ಪ್ಲಾಸ್ಟಿಕ್ ಬಾಟಲಿ, ಮದ್ಯ ಎಲ್ಲವೂ ಸರಾಗವಾಗಿ ಗಿರಿಭಾಗ ಸೇರುತ್ತಿತ್ತು. 

ಇನ್ನು ಗಿರಿಭಾಗಕ್ಕೆ ಹೋದರೆ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿವೆ. ಹೊನ್ನಮ್ಮನಹಳ್ಳ, ಮಾಣಿಕ್ಯಧಾರ  ಬಳಿ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಲೋಟಗಳ ರಾಶಿ ಬಿದ್ದಿವೆ. ಮಾಣಿಕ್ಯಧಾರ ಜಲಪಾತದ ವಾಹನ ನಿಲುಗಡೆ ಸ್ಥಳ, ದೇವಿರಮ್ಮ ಗುಡ್ಡ ವೀಕ್ಷಣೆ ಸ್ಥಳಕ್ಕೆ ಹೋದರೆ ಪ್ಲಾಸ್ಟಿಕ್ ಮಯವಾಗಿರುವುದು ಗೋಚರಿಸುತ್ತದೆ.

ಮಾಣಿಕ್ಯಧಾರ ಬಳಿ ಹಣ್ಣುಗಳನ್ನು ಪ್ಲಾಸ್ಟಿಕ್ ಲೋಟದಲ್ಲಿ ತುಂಬಿಸಿ ಮಾರಾಟ ಮಾಡುತ್ತಿರುವುದು

ಯಾವುದೇ ಅಂಗಡಿಗಳಲ್ಲೂ 5 ಲೀಟರ್‌ಗೂ ಕಡಿಮೆ ಪ್ರಮಾಣದ ನೀರಿನ ಬಾಟಲಿ ಮಾರಾಟ ಇರಲಿಲ್ಲ. ಆದರೆ, ಪ್ರವಾಸಿಗರು ತೆಗೆದುಕೊಂಡು ಹೋಗುವ ಬಾಟಲಿಗಳು ಅಲ್ಲಿ ರಾಶಿ ಬೀಳುತ್ತಿವೆ. 

ಮಾಣಿಕ್ಯಧಾರ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಕೆರೆ ಇದ್ದು, ಈಗ ನೀರು ಇಲ್ಲ. ಇಡೀ ಕೆರೆಯ ಆವರಣದಲ್ಲಿ ಪ್ಲಾಸ್ಟಿಕ್ ರಾಶಿ ಬಿದ್ದಿದೆ. ಕೆರೆಯೊಳಗೆ ವಾಹನ ನಿಲ್ಲಿಸಿಕೊಳ್ಳುವ ಪ್ರವಾಸಿಗರು ಊಟ, ತಿನಿಸು ತಿನ್ನುತ್ತಿದ್ದಾರೆ. ಪ್ಲಾಸ್ಟಿಕ್ ಬಾಟಲಿ ಮತ್ತು ಲೋಟಗಳನ್ನು ಬಿಸಾಡಿ ಹೋಗುತ್ತಿದ್ದು, ಕೇಳುವವರೇ ಇಲ್ಲವಾಗಿದೆ. 

ಮಾಣಿಕ್ಯಧಾರ ಜಲಪಾತದ ಬಳಿ ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿರುವುದು

ಪ್ಲಾಸ್ಟಿಕ್ ಲೋಟದ ಹಾವಳಿ

ಗಿರಿಭಾಗದಲ್ಲಿ ಈಗ ಪ್ಲಾಸ್ಟಿಕ್ ಲೋಟದ ಹಾವಳಿ ಜಾಸ್ತಿಯಾಗಿದೆ. ಇವು ಕೂಡ ಎಲ್ಲೆಂದರೆಲ್ಲಿ ಬೀಳುತ್ತಿವೆ. ಹಣ್ಣುಗಳನ್ನು ಕತ್ತರಿಸಿ ಮಾರಾಟ ಮಾಡುವುದು ಎಲ್ಲಾ ಅಂಗಡಿಗಳಲ್ಲಿ ಇದೆ. ಹಣ್ಣು ತುಂಬಿಕೊಡಲು ಪ್ಲಾಸ್ಟಿಕ್ ಲೋಟಗಳನ್ನು ವ್ಯಾಪಾರಿಗಳು ಬಳುಸುತ್ತಿದ್ದಾರೆ. ಹಣ್ಣು ತಿನ್ನುವ ಪ್ರವಾಸಿಗರು ಈ ಲೋಟಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ.  ಇವು ಇನ್ನೊಂದು ರೀತಿಯಲ್ಲಿ ಪರಿಸರಕ್ಕೆ ಮಾರಕವಾಗುತ್ತಿವೆ. ಪ್ಲಾಸ್ಟಿಕ್ ಬಾಟಲಿ ನಿಷೇಧ ಮಾಡಲಾಗಿದೆ. ಆದರೆ ಪ್ಲಾಸ್ಟಿಕ್ ಲೋಟಗಳನ್ನು ಬಳಕೆಗೆ ಅವಕಾಶ ನೀಡಿದರೆ ಪರಿಸರ ಉಳಿಯುತ್ತದೆಯೇ ಎಂದು ಪರಿಸರ ಆಸಕ್ತ ಪ್ರವಾಸಿಗ ಲೋಕೇಶ್ ಪ್ರಶ್ನಿಸಿದರು.

ಪ್ರವೇಶ ಶುಲ್ಕ ಹೆಚ್ಚಳ

ಫೆಬ್ರುವರಿಯಿಂದಲೇ ಗಿರಿಭಾಗಕ್ಕೆ ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ₹20 ನಾಲ್ಕು ಚಕ್ರದ ವಾಹನಗಳಿಗೆ ₹50 ತೂಫಾನ್ ಕ್ಯಾಂಪೆರ್ ವಾಹನಗಳಿಗೆ ₹75 ಟೆಂಪೊ ಟ್ರಾವೆಲರ್‌ಗಳಿಗೆ ₹100 ಮಿನಿ ಬಸ್ ಮತ್ತು ಲಾರಿಗಳಿಗೆ ₹200 ನಿಗದಿ ಮಾಡಲಾಗಿದೆ. ಟಿಕೆಟ್‌ ನೀಡಿ ಹಣ ಪಡೆಯಲಾಗುತ್ತಿದೆ. ಹಣ ಪಡೆಯಲು ಅಷ್ಟೇ ಸಿಬ್ಬಂದಿ ಆಸಕ್ತರಾಗಿದ್ದರೆ ವಾಹನಗಳ ತಪಾಸಣೆ ಮರೆತಿದ್ದಾರೆ ಎಂದು ಪ್ರವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಮಾಣಿಕ್ಯಾಧಾರಕ್ಕೆ ಶುಲ್ಕವಷ್ಟೇ ಟಿಕೆಟ್ ಇಲ್ಲ

ಮಾಣಿಕ್ಯಧಾರ ಜಲಪಾತ ವೀಕ್ಷಣೆಗೆ ತೆರಳುವ ಜನರಿಗೆ ಪ್ರತ್ಯೇಕವಾಗಿ ₹5 ಶುಲ್ಕ ವಸೂಲಿ ಮಾಡಲಾಗುತ್ತಿದೆ.  ಈ ಹಿಂದೆ ಟಿಕೆಟ್ ನೀಡಿ ಹಣ ಪಡೆಯಲಾಗುತ್ತಿತ್ತು. ಆದರೆ ಭಾನುವಾರ ಹಣ ಪಡೆಯುತ್ತಿದ್ದ ಅಲ್ಲಿನ ಸಿಬ್ಬಂದಿ ಯಾರಿಗೂ ಟಿಕೆಟ್ ನೀಡಲಿಲ್ಲ. ಜಲಪಾತದ ಬಳಿ ಸ್ವಚ್ಛತೆ ನಿರ್ವಹಣೆಗಾಗಿ ಪ್ರತಿ ಪ್ರವಾಸಿಗರಿಂದ ₹5 ಪಡೆಯಲಾಗುತ್ತಿದೆ. ಆದರೆ ನಿರ್ವಹಣೆ ಸ್ವಚ್ಛತೆಯಂತೂ ಇಲ್ಲವಾಗಿದೆ. ಸ್ನಾನ ಮಾಡಿ ಪ್ರವಾಸಿಗರು ಬಿಸಾಡುವ ಬಟ್ಟೆಗಳು ಹಳ್ಳದ ನೀರಿಗೆ ಸೇರಿದಂತೆ ಸಂಗ್ರಹಿಸಬೇಕಿದೆ. ಆದರೆ ಬಟ್ಟೆ ಸಂಗ್ರಹಿಸುವ ಸಿಬ್ಬಂದಿ ಎಲ್ಲವನ್ನೂ ಒಟ್ಟುಗೂಡಿಸಿ ನೀರಿನ ಕಡೆಗೆ ಬಿಸಾಡುತ್ತಿದ್ದಾರೆ. ಇದರಿಂದ ಹಳ್ಳ ಸೇರುವ ಬಟ್ಟೆ ನೀರನ್ನು ಮಲೀನಗೊಳಿಸುತ್ತಿದೆ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.

ಎಲ್ಲೆಂದರಲ್ಲಿ ತಲೆ ಎತ್ತಿರುವ ಅಂಗಡಿ

ಗಿರಿಭಾಗದಲ್ಲಿ ಈಗ ಎಲ್ಲೆಂದರಲ್ಲಿ ಅಂಗಡಿ–ಮುಂಗಟ್ಟುಗಳ ತಲೆ ಎತ್ತುತ್ತಿವೆ. ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಿಂದ ಮಾಣಿಕ್ಯಾಧಾರ ಜಲಪಾತ ಕಡೆಗೆ ಹೋಗುವ ಕಡೆ ಎಡಭಾಗದಲ್ಲಿ ಗುಡ್ಡದ ಮೇಲೆ ಇತ್ತೀಚೆಗೆ ಎರಡು ಅಂಗಡಿಗಳು ತಲೆ ಎತ್ತಿವೆ. ಹೊನ್ನಮ್ಮನಹಳ್ಳ ಬಳಿಯೂ ಅಂಗಡಿಗಳ ಸಂಖ್ಯೆ ಹೆಚ್ಚಾಗಿವೆ. ಹೆಚ್ಚು ಅಂಗಡಿಗಳಿಗೆ ಅವಕಾಶ ನೀಡಿದರೆ ಪರಿಸರ ಮಾಲಿನ್ಯವೂ ಹೆಚ್ಚಾಗಲಿದೆ ಎಂಬುದು ಪ್ರವಾಸಿಗರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.