
ಚಿಕ್ಕಮಗಳೂರು: ಎಲ್ಲೆಲ್ಲೂ ಕಸದ ರಾಶಿ, ಎತ್ತ ನೋಡಿದರೂ ಪ್ಲಾಸ್ಟಿಕ್ ಕಸ... ಇದು ಉಪ್ಪಳ್ಳಿ–ಹಿರೇಕೊಳಲೆ ರಸ್ತೆ ಬದಿಯಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ.
ನಗರದ ಮಲ್ಲಂದೂರು ಮುಖ್ಯರಸ್ತೆ ಮೂಲಕ ಹಿರೇಕೊಳಲೆ–ಉಪ್ಪಳ್ಳಿ ರಸ್ತೆಯ ಎರಡೂ ಬದಿಯಲ್ಲೂ ಕಸದ ರಾಶಿಗಳು ಸ್ವಾಗತಿಸುತ್ತವೆ.
ನಿತ್ಯ ಸಾವಿರಾರು ಪ್ರವಾಸಿಗರು ಇದೇ ಮಾರ್ಗವಾಗಿ ಹಿರೇಕೊಳಲೆ ಕೆರೆ ಹಾಗೂ ಗಿರಿಭಾಗ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ರಯಾಣ ಮಾಡುತ್ತಾರೆ. ಅಲ್ಲಲ್ಲಿ ಇರುವ ಕಸದ ರಾಶಿ ಗಾಳಿಯಲ್ಲಿ ಹರಡಿಕೊಂಡು ರಸ್ತೆಯುದ್ದಕ್ಕೂ ಕಾಣುತ್ತದೆ.
ಇದೇ ಮಾರ್ಗದಲ್ಲಿ ಖಾಸಗಿ ಶಾಲೆ ಇದ್ದು, ಶಾಲೆ ಸಮೀಪದ ಆಲದ ಮರದ ಕೆಳಗೆ ನಿತ್ಯ ಕಸದ ರಾಶಿ ಬೀಳುತ್ತಿದೆ. ಬಡಾವಣೆಗೆ ಕಸ ಸಂಗ್ರಹ ವಾಹನ ಬಂದರೂ, ಕಸದ ರಾಶಿ ಬೀಳುವುದು ತಪ್ಪಿಲ್ಲ. ಸುತ್ತಮುತ್ತಲ ನಿವಾಸಿಗಳು ರಾತ್ರಿ ವೇಳೆ ಕಸ ತಂದು ರಸ್ತೆ ಬದಿಗೆ ಸುರಿಯುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಅಲ್ಲಲ್ಲಿ ಬಿದ್ದಿರುವ ಕಸದ ರಾಶಿಗಳಿಗೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿದೆ. ಇದರಿಂದ ಪರಿಸರ ಹಾನಿಯಾಗುವ ಜತೆಗೆ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಹೊಗೆ ತುಂಬಿದ ರಸ್ತೆಯಲ್ಲೇ ಮೂಗು ಮುಚ್ಚಿ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಾಹನ ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.
ಬಡಾವಣೆ ಹಾಗೂ ರಸ್ತೆ ಬದಿಯಲ್ಲಿ ಕಸ ಬಿಸಾಡದಂತೆ ನಗರ ಸಭೆಯಿಂದ ಸೂಚನಾ ಫಲಕ ಅಳವಡಿಸಿದೆ. ಕಸ ಸಂಗ್ರಹ ವಾಹನದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಆದರೂ ಕಸ ಸುರಿಯುವುದು ತಪ್ಪಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಇದೇ ಮಾರ್ಗದಲ್ಲಿ ವಾಜಪೇಯಿ ಬಡಾವಣೆ ಇದ್ದು, ಈ ಮಾರ್ಗದಲ್ಲಿ ಜನರ ಸಂಚಾರ ಕೊಂಚ ವಿರಳವಾಗಿದೆ. ಯಾರೂ ಇಲ್ಲದ ಸಮಯದಲ್ಲಿ ಕಸ ತಂದು ಸುರಿಯುತ್ತಾರೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಪ್ಲಾಸ್ಟಿಕ್, ಪೇಪರ್, ಮದ್ಯದ ಬಾಟಲಿ, ಗೃಹ ಬಳಕೆ ವಸ್ತುಗಳು ಸೇರಿದಂತೆ ಅನೇಕ ತ್ಯಾಜ್ಯಗಳನ್ನು ರಸ್ತೆ ಪಕ್ಕದಲ್ಲಿ ಕಾಣುತ್ತವೆ. ನಗರಸಭೆ ಸಿಬ್ಬಂದಿ ಬೆಳಿಗ್ಗೆ ಸ್ವಚ್ಛಗೊಳಿಸಿದರೆ ಮಧ್ಯಾಹ್ನದ ವೇಳೆ ಕಸದ ರಾಶಿ ಕಾಣುತ್ತದೆ. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರೂ ಕಸ ಬಿಸಾಡುವುದು ನಿಂತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ರಸ್ತೆಯ ಬದಿ ಕಸದ ರಾಶಿ ಎಲ್ಲಂದರಲ್ಲಿ ಪ್ಲಾಸ್ಟಿಕ್, ಮನೆ ತ್ಯಾಜ್ಯ ಬೆಂಕಿ ಹಚ್ಚಿ ಕಸ ವಿಲೇವಾರಿ
‘ದಂಡ ಹಾಕಿ ಎಚ್ಚರಿಕೆ ನೀಡಿ’
ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ದಂಡ ಹಾಕುವ ಕ್ರಮವನ್ನು ನಗರಸಭೆ ಕೈಗೊಳ್ಳಬೇಕು. ಇಲ್ಲದಿದ್ದರೆ ಕಸ ಸುರಿಯುವುದು ನಿಲ್ಲುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಬಡವಾಣೆಯಲ್ಲಿ ಕಸ ಎಸೆಯದಂತೆ ತ್ಯಾಜ್ಯ ವಿಂಗಡಿಸಿ ಕಸದ ಗಾಡಿಗಳಿಗೆ ನೀಡುವಂತೆ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ಬಗ್ಗೆ ಕಾಳಜಿ ವಹಿಸುವಂತೆ ಅನೇಕ ಬಾರಿ ಅಧಿಕಾರಿಗಳು ಜಾಗೃತಿ ಮೂಡಿಸಿದ್ದಾರೆ. ಆದರೂ ಕಸ ಬೀಳುತ್ತಿದೆ. ಇಂತಹ ಸಮಯದಲ್ಲಿ ದಂಡ ಪ್ರಯೋಗಿಸುವುದು ಸೂಕ್ತ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.