ADVERTISEMENT

ಅಭಿವೃದ್ಧಿ ಸಹಿಸದೇ ಬಿಜೆಪಿ ಮುಖಂಡರಿಂದ ಸುಳ್ಳು ಆರೋಪ: ಮೋಟಮ್ಮ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 6:42 IST
Last Updated 8 ಫೆಬ್ರುವರಿ 2026, 6:42 IST
ಮೋಟಮ್ಮ
ಮೋಟಮ್ಮ   

ಮೂಡಿಗೆರೆ: ನಯನಾ ಮೋಟಮ್ಮ ಶಾಸಕಿಯಾದ ಬಳಿಕ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಇದನ್ನು ಸಹಿಸದೇ ಹತಾಶೆಯಿಂದ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕಿ ಮೋಟಮ್ಮ ಆರೋಪಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡ ಬಳಿಕ ದೀಪಕ್ ದೊಡ್ಡಯ್ಯ, ಆಗಾಗ ಶಾಸಕರ ವಿರುದ್ಧ ಹೇಳಿಕೆ ನೀಡಿ ಪುಕ್ಕಟ್ಟೆ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ, ಇಂತಹ ಹೇಳಿಕೆಗಳನ್ನು ಕ್ಷೇತ್ರದ ಜನ ನಿರಂತರವಾಗಿ ತಿರಸ್ಕರಿಸಿದ್ದಾರೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯುವ ಉದ್ದೇಶದಿಂದ ಪ್ರಯೋಜನಕ್ಕೆ ಬಾರದ ಹೇಳಿಕೆಗಳನ್ನು ನೀಡಿ ಪಕ್ಷದ ನಾಯಕರನ್ನು ಓಲೈಸಲು ಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ಈಗಾಗಲೇ ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ. ಈ ವಿಷಯ ಅರಿತ ಅವರು ಹತಾಶೆಯಿಂದ ಶಾಸಕಿ ನಯನಾ ಮೋಟಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಮೋಟಮ್ಮ ಹೇಳಿದರು.

ADVERTISEMENT

2023ರ ಚುನಾವಣೆಯ ಬಳಿಕ ನಯನಾ ಅವರು, ಕ್ಷೇತ್ರದ ಅಭಿವೃದ್ಧಿಗೆ ₹350 ಕೋಟಿ ಅನುದಾನ ತಂದಿದ್ದಾರೆ. ಇದರಲ್ಲಿ ₹80 ಕೋಟಿ ವಿವಿಧ ಸೇತುವೆಗಳ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ. ಬಿದರಹಳ್ಳಿ ಗ್ರಾಮದಲ್ಲಿ ₹22 ಕೋಟಿ ವೆಚ್ಚದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಜೂರಾಗಿದೆ. ಪಟ್ಟಣದ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಮೃತ್ ಯೋಜನೆಯಡಿ ₹19 ಕೋಟಿ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.

ಗ್ರಾಮೀಣ ರಸ್ತೆ, ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿಗೆ ₹30 ಕೋಟಿ ಬಿಡುಗಡೆ ಮಾಡಲಾಗಿದೆ. ಕಳಸ ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ₹5 ಕೋಟಿ ಅನುದಾನ ನೀಡಲಾಗಿದ್ದು, ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಕ್ಷೇತ್ರದ 15 ಕಡೆ ಹೊಸ ಗ್ರಾಮ ಪಂಚಾಯಿತಿ ಕಟ್ಟಡಗಳು ನಿರ್ಮಾಣಗೊಂಡಿವೆ. ಶಾಲಾ ಕಟ್ಟಡ ನಿರ್ಮಾಣ, ದುರಸ್ತಿ ಹಾಗೂ ಶೌಚಗೃಹಗಳಿಗಾಗಿ ₹7 ಕೋಟಿ ಅನುದಾನ ನೀಡಲಾಗಿದೆ ಎಂದರು.

ಇಷ್ಟೊಂದು ಅಭಿವೃದ್ಧಿ ನಡೆದಿರುವುದನ್ನು ಸಹಿಸದೇ ಸುಳ್ಳು ಆರೋಪ ಮಾಡುವುದು ಶೋಭೆಯಲ್ಲ. ಮುಂದಿನ ಚುನಾವಣೆಯಲ್ಲಿ ನಯನಾ ಮೋಟಮ್ಮ ಅವರು ಮತ್ತೆ ಆಯ್ಕೆಯಾಗಲಿದ್ದಾರೆ ಎಂಬ ಭಯದಿಂದಲೇ ಇಂತಹ ಹೇಳಿಕೆಗಳು ಬರುತ್ತಿವೆ ಎಂದು ಮೋಟಮ್ಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.