ADVERTISEMENT

ಸುರಕ್ಷತೆ, ತಂತ್ರಜ್ಞಾನ ಬಳಕೆಗೆ ಒತ್ತು

ಅಧಿಕಾರಿಗಳೊಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಚರ್ಚೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 3:21 IST
Last Updated 15 ಸೆಪ್ಟೆಂಬರ್ 2020, 3:21 IST
ಪ್ರವೀಣ್ ಸೂದ್
ಪ್ರವೀಣ್ ಸೂದ್   

ಚಿಕ್ಕಮಗಳೂರು: ‘ಮಾರ್ಗದರ್ಶಿ ಸೂತ್ರ (ಎಸ್ಒಪಿ) ಅಳವಡಿಸಿಕೊಂಡು ಸುರಕ್ಷತೆಯಿಂದ ಕೆಲಸ ಮಾಡುವತ್ತ ಈಗ ಗಮನ ಹರಿಸಬೇಕಿದೆ. ತಂತ್ರಜ್ಞಾನ ಬಳಸಿಕೊಂಡು ಕಾರ್ಯನಿರ್ವಹಿಸಲು ಒತ್ತು ನೀಡಬೇಕಾದ ಅಗತ್ಯ ಇದೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್‌ ನಡುವೆ ಈಗ ಮಾಮೂಲಿಯಂತೆ ಕೆಲಸಗಳು ಶುರುವಾಗಿವೆ, ಪ್ರತಿಭಟನೆ, ಧರಣಿ ಮೊದಲಾದವು ಆರಂಭವಾಗಿದೆ. ಸುರಕ್ಷತೆಯಿಂದ ಕೆಲಸ ಮಾಡುವುದಕ್ಕೆ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ತಿಳಿಸಿದರು.

‘ಹಿಂದಿನಂತೆ ಈಗ ಕೆಲಸ ಮಾಡಲು ಆಗಲ್ಲ. ಆರೋಪಿ ಬಂಧಿಸಿ ಕೋರ್ಟ್‌ಗೆ ಕರೆದೊಯ್ಯುತ್ತಿದ್ದೆವು. ಈಗ ಅದು ಇಲ್ಲ, ವಿಡಿಯೊ ಮೂಲಕ ಹಾಜರುಪಡಿಸುತ್ತೇವೆ. ಕೋರ್ಟ್‌ಗೆ ಸಲ್ಲಿಸುವ ಸಾಕ್ಷ್ಯಗಳ ದಾಖಲೀಕರಣವು ವಿಡಿಯೊ ಮೂಲಕವೇ ನಡೆಯುತ್ತಿದೆ. ಪೊಲೀಸ್‌ ಪರಿಶೀಲನೆಗೆ ಅರ್ಜಿ ಸಲ್ಲಿಸುವುದು, ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಗಳನ್ನು ಈಗ ಆನ್‌ಲೈನ್‌ನಲ್ಲಿ ವ್ಯವಸ್ಥೆ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮುಂದಿನ ದಿನಗಳಲ್ಲಿ ಬಹುತೇಕ ಸೇವೆಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತರುತ್ತೇವೆ. ‘ಡಯಲ್‌–112’ ವ್ಯವಸ್ಥೆ ಕಾರ್ಯಗತಗೊಳಿಸಲು ಉದ್ದೇಶಿಸಿದ್ದೇವೆ. ಕಷ್ಟದಲ್ಲಿರುವವರು ಈ ಸಂಖ್ಯೆಗೆ ಕರೆ ಮಾಡಿದರೆ ಅವರ ಮನೆ ಬಾಗಿಲಿಗೆ ಪೊಲೀಸರು ಬರುವ ವ್ಯವಸ್ಥೆ ಇದು. ಎರಡ್ಮೂರು ತಿಂಗಳಲ್ಲಿ ಈ ವ್ಯವಸ್ಥೆಯನ್ನು ಶುರು ಮಾಡುತ್ತೇವೆ’ ಎಂದು ಹೇಳಿದರು.

‘ಪೊಲೀಸ್‌ ಇಲಾಖೆಯಲ್ಲಿ 1980ರಲ್ಲಿ ಮಹಿಳೆಯರ ನೇಮಕಾತಿ ಶುರುವಾದಾಗ, ಅವರಿಗೆ ಪ್ರತ್ಯೇಕ ಕೇಡರ್‌ (ವೃಂದ) ಇತ್ತು. ಹೊಸದಾಗಿ ಶುರುವಾದ ಸಂದರ್ಭದಲ್ಲಿ ಬೇಗ ಬಡ್ತಿ ಸಿಗುತ್ತೆ. ಆಗ ಮಹಿಳೆಯರ ಸಂಖ್ಯೆ ಕಡಿಮೆ ಇದಿದ್ದರಿಂದ ಅವರಿಗೆ ಬೇಗ ಬಡ್ತಿ ಸಿಕ್ಕಿದೆ. ಮಹಿಳೆ ಮತ್ತು ಪುರುಷರನ್ನು ಒಟ್ಟಿಗೆ ಪರಿಗಣಿಸಬೇಕು ಎಂದು 2004ರಲ್ಲಿ ಕೋರ್ಟ್‌ ಆದೇಶ ನೀಡಿದೆ, ಅದರಂತೆ ಜೇಷ್ಠತಾ ಪಟ್ಟಿ ಒಟ್ಟಿಗೆ ಮಾಡಲಾಗುತ್ತಿದೆ’ ಎಂದು ಉತ್ತರಿಸಿದರು.

‘2004ಕ್ಕಿಂತ ಮುಂಚೆ ಮಹಿಳಾ ಪೊಲೀಸರಿಗೆ ಅನುಕೂಲ ಆಗಿದೆ. ಕೋರ್ಟ್‌ ಆದೇಶವನ್ನು ಪಾಲನೆ ಮಾಡಿದ್ದೇವೆ. ಕೆಎಸ್‌ಆರ್‌ಪಿಯಲ್ಲಿ ಬಡ್ತಿ ಬೇಗ ಆಗುತ್ತೆ, ಸಿವಿಲ್‌ನಲ್ಲಿ ನಿಧಾನವಾಗುತ್ತದೆ. ಹೀಗೆ, ಬೇರೆ ಬೇರೆ ಕೇಡರ್‌ಗಳಲ್ಲಿ ವ್ಯತ್ಯಾಸ ಇರುತ್ತದೆ. ಕೇಡರ್‌ ವಿಲೀನವಾದ ದಿನದಿಂದ ವ್ಯತ್ಯಯ ಇರಲ್ಲ’ ಎಂದರು.

‘ಕುದುರೆಮುಖದಲ್ಲಿ ಠಾಣೆಯನ್ನು ಸ್ಥಳಾಂತರ ಮಾಡಲ್ಲ, ಪುನರ್ರಚನೆ ಮಾಡುತ್ತೇವೆ. ಕೆಲವು ಕಡೆ ಸಿಬ್ಬಂದಿ ಜಾಸ್ತಿ ಇದ್ದಾರೆ ಕೆಲಸದ ಒತ್ತಡ ಕಡಿಮೆ ಇದೆ. ಮತ್ತೆ ಕೆಲವು ಕಡೆ ಒತ್ತಡ ಜಾಸ್ತಿ ಇದೆ ಸಿಬ್ಬಂದಿ ಕಡಿಮೆ ಇದ್ದಾರೆ. ಹೀಗಾಗಿ, ಇದನ್ನು ಸರಿಪಡಿಸುತ್ತೇವೆ. ಪಿಇಬಿ ಪ್ರಕಾರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ. ನಿಯಮಾನುಸಾರ ಕ್ರಮ ವಹಿಸುತ್ತೇವೆ. ಶಿಫಾರಸು ನಡೆಯಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಈ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಿಂತ ಕೋವಿಡ್‌ ನಿರ್ವಹಣೆ ಚೆನ್ನಾಗಿತ್ತು. ಕೆಲವಾರು ಕಾರಣಗಳಿಂದ ಈಗ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ಅನ್‌ಲಾಕ್‌ ನಂತರ ಎಲ್ಲ ಕಡೆಯಿಂದ ಜನ ಬರುತ್ತಿದ್ದಾರೆ. ಕೋವಿಡ್‌–19 ಕಾಲಘಟ್ಟದಲ್ಲಿ ಆರು ತಿಂಗಳಿನಿಂದ ಪೊಲೀಸರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಕೋವಿಡ್‌ ನಿರ್ವಹಣೆಯಲ್ಲಿ ಕೆಲವೆಡೆ ಪೊಲೀಸರಿಗೆ ತೊಂದರೆ ಆಗಿದೆ. ಈವರೆಗೆ ಏಳು ಸಾವಿರ ಪೊಲೀಸರಿಗೆ ಸೋಂಕು ತಗುಲಿದೆ, ಕೋವಿಡ್‌ನಿಂದ 55 ಪೊಲೀಸರು ಸಾವಿಗೀಡಾಗಿದ್ದಾರೆ’ ಎಂದರು.

‘ಕೋವಿಡ್‌ನಿಂದ ಪೊಲೀಸರು ಮೃತಪಟ್ಟರೆ, ಅವರ ಕುಟುಂಬದವರಿಗೆ ಪರಿಹಾರ ನೀಡಲಾಗುತ್ತದೆ. ಕೋವಿಡ್‌ ತಗುಲಿದ ಪೊಲೀಸರಿಗೆ ಚಿಕಿತ್ಸೆ, ಪೌಷ್ಟಿಕ ಆಹಾರ ಒದಗಿಸಲು ಕ್ರಮ ವಹಿಸಿದ್ದೇವೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.