ADVERTISEMENT

ಕಾರು ತೆಗೆಯುವ ವಿಷಯಕ್ಕೆ ಹಲ್ಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:10 IST
Last Updated 28 ಅಕ್ಟೋಬರ್ 2025, 5:10 IST
ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಬೆಳ್ಳಿಪ್ರಕಾಶ್‌, ಬೆಂಬಲಿಗರು ಕಡೂರು ಪೊಲೀಸ್‌ ಠಾಣೆಯ ಮುಂದೆ ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದರು
ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಬೆಳ್ಳಿಪ್ರಕಾಶ್‌, ಬೆಂಬಲಿಗರು ಕಡೂರು ಪೊಲೀಸ್‌ ಠಾಣೆಯ ಮುಂದೆ ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದರು   

ಕಡೂರು: ‘ಪಟ್ಟಣದ ಶ್ರೀಬಸವೇಶ್ವರ ವೃತ್ತದಲ್ಲಿ ಭಾನುವಾರ ರಾತ್ರಿ ಕಾರು ಹಿಂತೆಗೆಯುವ ವಿಷಯಕ್ಕೆ ಸಂಬಂಧಿಸಿದಂತೆ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು, ನನ್ನ ಮೇಲೆ ಸಂತೋಷ್‌ ಹಾಗೂ ಸಹಚರರು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ಸಿ.ಎಲ್‌.ಸಂದೇಶ್‌ ಎಂಬುವರು ಕಡೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮೂಲತಃ ಚಿಕ್ಕಮಗಳೂರಿನ ಸಂದೇಶ್‌ ಭಾನುವಾರ ಬೆಂಗಳೂರಿನಲ್ಲಿ ಕೆಲಸ ಮುಗಿಸಿ ರಾತ್ರಿ ಕಡೂರಿನಲ್ಲಿರುವ ಪತ್ನಿಯ ಮನೆಗೆ ಬರುವಾಗ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇನ್ನೊಂದು ಬದಿಯಿಂದ ಬಂದ ಕಾರನ್ನು ಅವರ ಕಾರಿನ ಮುಂದೆ ನಿಲ್ಲಿಸಿದ್ದರು. ಸಂದೇಶ್‌ ಕೈಸನ್ನೆ ಮಾಡಿ ಕಾರನ್ನು ಮುಂದೆ ತೆಗೆಯಲು ತಿಳಿಸಿದ್ದರು. ಆದರೆ, ಎದುರು ಇದ್ದವರು ಕಾರನ್ನು ಮುಂದಕ್ಕೆ ತೆಗೆದುಕೊಳ್ಳದೆ ನಿಂದಿಸಿದರು. ಏಕೆ ನಿಂದಿಸುತ್ತೀರಿ ಎಂದು ಪ್ರಶ್ನಿಸುವಾಗ ಇನ್ನೋವಾ ಕಾರಿನಿಂದ ಇಳಿದ ಸಂತೋಷ್‌ ಸೇರಿದಂತೆ ಐವರು ಕೈಯಿಂದ ಹೊಡೆದಿದ್ದಾರೆ. ನಂತರ ಚಿನ್ನದ ಸರವನ್ನು ಕಿತ್ತು ಹಾಕಿದ್ದಾರೆ. ಏಕೆ ಹೊಡೆಯುತ್ತೀರಿ ಎಂದು ಕೇಳಿದ್ದಕ್ಕೆ ಕೆಟ್ಟ ಪದಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಕೆಳಗೆ ಬೀಳಿಸಿ ಒದ್ದರು. ಅಷ್ಟರಲ್ಲಿ ಅಲ್ಲೇ ಇದ್ದ ಜನರು ಬಂದು ಗಲಾಟೆ ಬಿಡಿಸಿದರು. ಸಂತೋಷ್‌ ಹಾಗೂ ಆತನ ನಾಲ್ಕು ಜನ ಸ್ನೇಹಿತರು ನನ್ನ ಮೇಲೆ ಹಲ್ಲೆ ನಡೆಸಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಸಂದೇಶ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾರೆ.

ಸಂದೇಶ್‌ ಅವರು ಮಾಜಿ ಶಾಸಕ ಹಾಗೂ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌ ಅವರ ಅಳಿಯನಾಗಿದ್ದು, ಸಂದೇಶ್‌ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಹಲ್ಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಬೆಳ್ಳಿಪ್ರಕಾಶ್‌ ನೇತೃತ್ವದಲ್ಲಿ ಕಡೂರು ಠಾಣೆಯ ಮುಂದೆ ನೂರಾರು ಜನರು ಪ್ರತಿಭಟನೆ ನಡೆಸಿದರು.

ADVERTISEMENT

ಸಿಪಿಐ ಜತೆ ಮಾತುಕತೆ ನಡೆಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಅವರು ಮಧ್ಯ ರಾತ್ರಿ ಕಡೂರಿಗೆ ಬಂದು, ಪ್ರತಿಭಟನಾ ನಿರತರೊಂದಿಗೆ ಮಾತನಾಡಿ, ಆರೋಪಿ ಸಂತೋಷ್‌ ಮತ್ತು ನಾಲ್ಕು ಜನ ಸ್ನೇಹಿತರ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡು ಬಂಧಿಸಲು ತಂಡ ರಚಿಸಿರುವುದಾಗಿ ಮಾಹಿತಿ ನೀಡಿದರು. ಬಳಿಕ ತಡರಾತ್ರಿ ‌2 ಗಂಟೆ ವೇಳೆಯಲ್ಲಿ ಪ್ರತಿಭಟನೆ ಹಿಂಪಡೆದರು.

ಆರೋಪಿ ಸಂತೋಷ್‌ ಮತ್ತು ಸಹಚರರು ನಾಪತ್ತೆಯಾಗಿದ್ದು ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.