ADVERTISEMENT

ಶಾಸಕ ಟಿ.ಡಿ.ರಾಜೇಗೌಡ ಪ್ರತಿಕೃತಿ ದಹಿಸಿ ಪ್ರತಿಭಟನೆ

ಕಡಬಗೆರೆ: ಬಜರಂಗದಳ, ವಿಎಚ್‌ಪಿ, ಬಿಜೆಪಿ ಕಾರ್ಯಕರ್ತರಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 5:19 IST
Last Updated 25 ಜನವರಿ 2023, 5:19 IST
ಬಾಳೆಹೊನ್ನೂರಿನ ಕಡಬಗೆರೆಯಲ್ಲಿ ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶಾಸಕ ಟಿ.ಡಿ.ರಾಜೇಗೌಡ ಅವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು
ಬಾಳೆಹೊನ್ನೂರಿನ ಕಡಬಗೆರೆಯಲ್ಲಿ ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶಾಸಕ ಟಿ.ಡಿ.ರಾಜೇಗೌಡ ಅವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು   

ಕಡಬಗೆರೆ(ಬಾಳೆಹೊನ್ನೂರು): ಶಾಸಕ ಟಿ.ಡಿ.ರಾಜೇಗೌಡ ಅವರು ಹಿಂದೂ ವಿರೋಧಿಯಾಗಿ, ಬಜರಂಗದಳದ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಜರಂಗದಳ, ವಿಎಚ್‌ಪಿ, ಬಿಜೆಪಿ ಕಾರ್ಯಕರ್ತರು ಕಡಬಗೆರೆಯಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.

ಮುಖಂಡ ಮಾಗಲು ಪ್ರೇಮೇಶ್ ಮಾತನಾಡಿ, ‘ಶಾಸಕರು ತಮ್ಮ ಜವಾಬ್ದಾರಿ ಮರೆತು ನಾಲಿಗೆ ಹರಿಬಿಟ್ಟಿದ್ದಾರೆ. ಹಿಂದುತ್ವ ಸಂಘಟನೆಗಳ ಬಗ್ಗೆ ತುಚ್ಛವಾಗಿ ಮಾತನಾಡಿರುವುದು ಖಂಡನೀಯ. ಇದು ಕಾಂಗ್ರೆಸ್ ಸಂಸ್ಕಾರವನ್ನು ತೋರಿಸುತ್ತದೆ. ಅಕ್ರಮ ಆಸ್ತಿ ಖರೀದಿ, ಸೋಲಿನ ಭೀತಿಯಿಂದ ಈ ರೀತಿ ಹೇಳುತ್ತಿದ್ದಾರೆ. ಈ ಹೇಳಿಕೆಯನ್ನು ಅವರು ಬೇಷರತ್ತಾಗಿ ಹಿಂಪಡೆದು ಹಿಂದೂ ಧರ್ಮೀಯರು ಹಾಗೂ ಸಂಘ ಪರಿವಾರದ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.

ಸರ್ಕಾರ 25 ಎಕರೆ ಒತ್ತುವರಿ ಭೂಮಿಯನ್ನು ಬಾಡಿಗೆ ಆಧಾರದಲ್ಲಿ ಬೆಳೆಗಾರರಿಗೆ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಶಾಸಕರು ಲೀಸ್ ನೀಡಿಕೆಯನ್ನು ವಿರೋಧಿಸಿ ಅಲ್ಲಲ್ಲಿ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಶಾಸಕರು ಸಾರ್ವಜನಿಕವಾಗಿ ಮಾತನಾಡುವಾಗ ಯೋಚಿಸಿ ಮಾತನಾಡುವುದನ್ನು ಕಲಿಯಲಿ ಎಂದರು.

ADVERTISEMENT

ಚಿಕ್ಕಮಗಳೂರು -ಬಾಳೆಹೊನ್ನೂರು ರಸ್ತೆಯ ಕಡಬಗೆರೆಯಲ್ಲಿ ಕೆಲಹೊತ್ತು ರಸ್ತೆ ತಡೆ ನಡೆಸಲಾಯಿತು. ಇದರಿಂದಾಗಿ ಕೆಲಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಜರಂಗದಳದ ಹೋಬಳಿ ಸಂಚಾಲಕ ಸಂತೋಷ್ ಬಾಳೆಗದ್ದೆ,
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅನುದಿನ್, ಕಾರ್ಯದರ್ಶಿ ಮಂಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಘು ಉಜ್ಜಿನಿ, ಬೆಳೆಸೆ ನಾಗೇಶ್, ಪ್ರಸಾದ್ ಹೆಗ್ಡೆ, ನಾರಾಯಣಗೌಡ, ಹೋಬಳಿ ಬಿಜೆಪಿ ಅಧ್ಯಕ್ಷ ಪ್ರವೀಣ್, ಮಾಗಲು ಯೋಗಾನಂದ್, ಹುಣಸೇಹಳ್ಳಿ ಮದನ್, ಸಾರಂಗ ಇದ್ದರು.
ಶಾಸಕ ಟಿ.ಡಿ.ರಾಜೇಗೌಡರು ದತ್ತಮಾಲಾಧಾರಿಗಳನ್ನು ಅವಾಚ್ಯವಾಗಿ ನಿಂದನೆ ಮಾಡಿ ಹಿಂದೂಗಳ ಭಾವನೆಯನ್ನು ಕೆಣಕಿದ್ದಾರೆ ಎಂಬ 49 ಸೆಕೆಂಡ್‌ನ ಧ್ವನಿಮುದ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.