ಚಿಕ್ಕಮಗಳೂರು: ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಹಳ್ಳಿ–ಹಳ್ಳಿಗಳಲ್ಲಿ ತೆರೆದಿರುವ ಶುದ್ಧ ಗಂಗಾ ಘಟಕಗಳು ಅಲ್ಲಲ್ಲಿ ಕೆಟ್ಟು ನಿಂತಿವೆ.
ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದಿಂದ ಜಿಲ್ಲೆಯಲ್ಲಿ 216 ಶುದ್ಧ ಗಂಗಾ ನೀರಿನ ಘಟಕಗಳನ್ನು ತೆರೆಯಲಾಗಿದೆ. ನೀರಿನ ಕೊರತೆ, ಯಂತ್ರೋಪಕರಣ ಸಮಸ್ಯೆ ಹಾಗೂ ನಿರ್ವಹಣೆಯ ಇಲ್ಲದೆ 24 ಘಟಕಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
192 ಘಟಕಗಳು ಕಾರ್ಯನಿರ್ವಹಿಸುತ್ತಿದ್ದರೆ, 16 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇನ್ನು 8 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಹಾನಿಯಾಗಿದ್ದು, ನೀರು ಶುದ್ಧೀಕರಿಸುವ ಕೆಲಸ ನಿಲ್ಲಿಸಿವೆ.
ಅಜ್ಜಂಪುರ ತಾಲ್ಲೂಕಿನಲ್ಲಿ 28 ಘಟಕಗಳಿದ್ದು, 21 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಘಟಕಕ್ಕೆ ಹಾನಿಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 45 ಘಟಕಗಳಿದ್ದು, 40 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 3 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಪೈಕಿ 2 ಘಟಕಗಳಿಗೆ ಹಾನಿಯಾಗಿದೆ.
ಕಡೂರು ತಾಲ್ಲೂಕಿನಲ್ಲಿ 68 ಘಟಕಗಳನ್ನು ನಿರ್ಮಿಸಲಾಗಿದ್ದು, 65 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 1 ಘಟಕ ಕಾರ್ಯ ಸ್ಥಗಿತಗೊಳಿಸಿದ್ದು, 2 ಘಟಕಗಳಿಗೆ ಹಾನಿಯಾಗಿದೆ. ಸಖರಾಯಪಟ್ಟಣದಲ್ಲಿನ ಘಟಕ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಸ್ಥಳಾಂತರಿಸಲಾಗಿದ್ದು, ಪುನರ್ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ(ಆರ್‌ಡಬ್ಲ್ಯೂಎಸ್) ಅಧಿಕಾರಿಗಳು ಮಾಹಿತಿ ನೀಡಿದರು.
ಕಳಸ ತಾಲ್ಲೂಕಿನಲ್ಲಿ 5 ಘಟಕಗಳನ್ನು ನಿರ್ಮಾಣ ಮಾಡಿದ್ದು, 4 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 1 ಘಟಕದ ಕಾರ್ಯ ಸ್ಥಗಿತಗೊಳಿಸಿದೆ. ಕೊಪ್ಪ ತಾಲ್ಲೂಕಿನಲ್ಲಿ 5 ಘಟಕಗಳನ್ನು ತೆರೆಯಲಾಗಿದ್ದು, 4 ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ. ಮೂಡಿಗೆರೆ ತಾಲ್ಲೂಕಿನಲ್ಲಿ 22 ಘಟಕಗಳನ್ನು ತೆರೆಯಲಾಗಿದೆ. ಇದರಲ್ಲಿ 13 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 7 ಘಟಕಗಳ ಕಾರ್ಯ ಸ್ಥಗಿತಗೊಂಡಿದ್ದು, 2 ಘಟಕಗಳಿಗೆ ಹಾನಿಯಾಗಿದೆ.
ನರಸಿಂಹರಾಜಪುರ ತಾಲ್ಲೂಕಿನಲ್ಲಿ 6 ಘಟಕಗಳನ್ನು ತೆರೆಯಲಾಗಿದ್ದು, 2 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ವಿವಿಧ ಕಾರಣಗಳಿಂದ 4 ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಶೃಂಗೇರಿ ತಾಲ್ಲೂಕಿನಲ್ಲಿ 2 ಘಟಕ ತೆರೆಯಲಾಗಿದ್ದು, ಎಲ್ಲವೂ ಕಾರ್ಯನಿರ್ವಹಿಸುತ್ತಿವೆ. ತರೀಕೆರೆ ತಾಲ್ಲೂಕಿನಲ್ಲಿ 34 ಘಟಕಗಳನ್ನು ತೆರೆಯಲಾಗಿದ್ದು, 33 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 1 ಘಟಕಕ್ಕೆ ಹಾನಿಯಾಗಿವೆ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.