ADVERTISEMENT

ಆಶ್ರಮ ವಸತಿ ಗೃಹದಲ್ಲಿ ವ್ಯವಸ್ಥೆ: ಗುಹೆಯಲ್ಲಿದ್ದ ಗಿರಿಜನ ಕುಟುಂಬ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 16:37 IST
Last Updated 24 ಏಪ್ರಿಲ್ 2020, 16:37 IST
ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಿಗೆ ಬಳಿ ಗುಹೆಯಲ್ಲಿ ವಾಸವಿದ್ದ ಅನಂತ ಕುಟುಂಬಕ್ಕೆ ಕಳಸ ಗ್ರಾಮ ಪಂಚಾಯಿತಿಯು ನಿರ್ಮಿಸಿದ ತಾತ್ಕಾಲಿಕ ಗುಡಿಸಲು.
ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಿಗೆ ಬಳಿ ಗುಹೆಯಲ್ಲಿ ವಾಸವಿದ್ದ ಅನಂತ ಕುಟುಂಬಕ್ಕೆ ಕಳಸ ಗ್ರಾಮ ಪಂಚಾಯಿತಿಯು ನಿರ್ಮಿಸಿದ ತಾತ್ಕಾಲಿಕ ಗುಡಿಸಲು.   

ಕಳಸ: ಬಲಿಗೆ ಸಮೀಪದ ಗುಹೆಯಲ್ಲಿ ವಾಸವಿದ್ದ ಗಿರಿಜನ ಕುಟುಂಬವನ್ನು ಶುಕ್ರವಾರ ಹೊರನಾಡಿನ ಗಿರಿಜನ ಆಶ್ರಮ ಶಾಲೆಯ ವಸತಿಗೃಹಕ್ಕೆ ಸ್ಥಳಾಂತರ ಮಾಡುವಲ್ಲಿ ಜಿಲ್ಲಾಡಳಿತ ಯಶಸ್ವಿ ಆಗಿದೆ.

ಗುರುವಾರ ಅನಂತ ಅವರ ಕುಟುಂಬವನ್ನು ಜಿಲ್ಲಾಡಳಿತವು ಗುಹೆಯಿಂದ ಹೊರಗೆ ಕರೆದುಕೊಂಡು ಬಂದಿತ್ತು. ಹೊರನಾಡಿನಲ್ಲಿ ಬಾಡಿಗೆ ಮನೆ ಪಡೆದು ಈ ಕುಟುಂಬಕ್ಕೆ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಆದರೆ, ಅನಂತ ತಾನು ವಾಸವಿದ್ದ ಪ್ರದೇಶ ಬಿಟ್ಟು ದೂರದ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಕಳಸ ಗ್ರಾಮ ಪಂಚಾಯಿತಿಯ ಸದಸ್ಯರು, ಅಭಿವೃದ್ಧಿ ಅಧಿಕಾರಿ, ಕಾಯದರ್ಶಿ ಮತ್ತು ಸಿಬ್ಬಂದಿ ಗುರುವಾರ ರಾತ್ರಿಯವರೆಗೂ ಸ್ವತಃ ಕೆಲಸ ಮಾಡಿ ಅನಂತ ಕುಟುಂಬಕ್ಕೆ ತಾತ್ಕಾಲಿಕ ಗುಡಿಸಲನ್ನು ನಿರ್ಮಿಸಿ ಮಾನವೀಯತೆ ತೋರಿದರು. ಆದರೆ, ಅಲ್ಲಿ ಕೂಡ ಶೌಚಾಲಯದ ಕೊರತೆ ಇತ್ತು. ಸಮೀಪದಲ್ಲೇ ಬಲಿಗೆಯ ಶಾಲೆಯ ಕಟ್ಟಡ ಇದ್ದು, ಅಲ್ಲಿ ನೀರು, ಶೌಚಾಲಯದ ವ್ಯವಸ್ಥೆ ಕೂಡ ಇತ್ತು. ಆ ಕಟ್ಟಡಕ್ಕೆ ಅನಂತ ಅವರ ಕುಟುಂಬವನ್ನು ಸ್ಥಳಾಂತರಿಸಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ಬಟ್ಟೆ, ಪಾತ್ರೆ ಮತ್ತು ಪಡಿತರವನ್ನೂ ಖರೀದಿಸಿಕೊಟ್ಟರು.

ADVERTISEMENT

ಗುಹೆಯಿಂದ ಹೊರಬಂದ ನಂತರ ಮುಂದಿನ ಯೋಚನೆ ಏನು ಎಂದು ‘ಪ್ರಜಾವಾಣಿ’ ಪ್ರಶ್ನಿಸಿದಾಗ ಅನಂತ ಅವರು ‘ಈಗ ಒಂದು ಮನೆ ಆಗಬೇಕಲ್ಲ. ದೂರ ಎಲ್ಲೂ ಬೇಡ, ನನ್ನ ಹಳೆ ಮನೆ ಇತ್ತಲ್ಲ, ಅಲ್ಲೇ ಒಂದು ಶೆಡ್ಡೋ ಎಂಥದೋ ಮಾಡಿಕೊಡಲಿ. ನಾನು ಈ ವರ್ಷ ಗದ್ದೆ ಸಾಗುವಳಿ ಬೇರೆ ಮಾಡ್ಬೇಕು’ ಎಂದು ಹಂಬಲಿಸಿದರು.

ಅನಂತ ಅವರ ಮಗಳು ಮೆಣಸಿನಹಾಡ್ಯದ ಗಿರಿಜನ ಆಶ್ರಮ ಶಾಲೆಯಲ್ಲಿ ಓದುತ್ತಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ಅಲ್ಲಿಗೆ ಭೇಟಿ ನೀಡಿದರು. ಮಗುವಿನ ಶಾಲಾ ದಾಖಲಾತಿಗಳಲ್ಲಿ ಅನಂತ ಕುಟುಂಬದ ಪಡಿತರ ಚೀಟಿ, ಜನನ ಪ್ರಮಾಣಪತ್ರ ಮುಂತಾದ ಹಲವಾರು ದಾಖಲೆಗಳು ಸಿಕ್ಕವು. ಅನಂತ ಮತ್ತು ಅವರ ಅಣ್ಣನ ಹೆಸರಿನಲ್ಲಿ ಕಲ್ಲಕ್ಕಿಯಲ್ಲಿ 2 ಎಕರೆ ತರಿ ಭೂಮಿ ಇದೆ ಎಂದು ತಿಳಿದು ಬಂತು.

ತಹಶೀಲ್ದಾರ್ ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ರಫೀಕ್, ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್, ಕಾರ್ಯದರ್ಶಿ ಸಂತೋಷ್ ದಿನವಿಡೀ ಅನಂತ ಕುಟುಂಬದ ಜೊತೆ ಇದ್ದರು.

ಸಂಜೆ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ನಾಗರಾಜ್ ಭೇಟಿ ನೀಡಿ ಅನಂತ ಅವರ ಮನವೊಲಿಸಿ ಕುಟುಂಬವನ್ನು ಹೊರನಾಡಿನ ಗಿರಿಜನ ಆಶ್ರಮ ಶಾಲೆಯ ವಸತಿಗೃಹಕ್ಕೆ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾದರು. ಕಂದಾಯ ನಿರೀಕ್ಷಕ ಅಜ್ಜೇಗೌಡ, ಗ್ರಾಮ ಲೆಕ್ಕಿಗ ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.