ADVERTISEMENT

ರಾಗಿ ಖರೀದಿಯಲ್ಲಿ ರೈತರಿಗೆ ಅನ್ಯಾಯ

ಕಡೂರು ತಾಲ್ಲೂಕು ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 5:20 IST
Last Updated 26 ಏಪ್ರಿಲ್ 2022, 5:20 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಹಶೀಲ್ದಾರ್ ಜೆ.ಉಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಹಶೀಲ್ದಾರ್ ಜೆ.ಉಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.   

ಕಡೂರು: ರಾಗಿ ಬೆಳೆದ ರೈತರಿಗೆ ಸರ್ಕಾರಗಳು ನಿರಂತರವಾಗಿ ಅನ್ಯಾಯ ಮಾಡಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ ದೂರಿದರು.

ತಾಲ್ಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಅತಿವೃಷ್ಟಿಯಿಂದ ರಾಗಿ ಬೆಳೆ ಭಾಗಶಃ ಹಾಳಾಗಿ ಉಳಿದಿದ್ದ ಅಲ್ಪಸ್ವಲ್ಪ ಬೆಳೆಯನ್ನು ಮಾರಲು ಹೋದ ರೈತರಿಗೆ ಅನ್ಯಾಯವಾಗಿದೆ. ಅವೈಜ್ಞಾನಿಕವಾಗಿ ಖರೀದಿಸಿ, ರಾಗಿ ಖರೀದಿ ಕೇಂದ್ರವನ್ನು ಮುಚ್ಚಲಾಗಿದೆ. ಮಾರುಕಟ್ಟೆ ಬೆಲೆಗೂ ಇಲ್ಲಿನ ಬೆಲೆಗೂ ಒಂದು ಸಾವಿರ ರೂಪಾಯಿ ವ್ಯತ್ಯಾಸವಿದೆ. ರಾಗಿ ಪ್ರತಿ ಕ್ವಿಂಟಲ್‌ಗೆ ಕೇವಲ ₹ 3200 ನಿಗದಿ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾಗಳು ರೈತರು ಬೆಳೆದ ರಾಗಿ ಪ್ರತಿ ಕ್ವಿಂಟಲ್‌ಗೆ ₹ 5000 ನಿಗದಿಪಡಿಸಲಿ’ ಎಂದು ಆಗ್ರಹಿಸಿದರು.

ADVERTISEMENT

ರಾಜ್ಯದ ಯಾವುದೇ ಶಾಸಕರು ರೈತರ ಬಗ್ಗೆ ವಿಧಾನಸಭೆಯಲ್ಲಿ ಚಕಾರ ಎತ್ತುವುದಿಲ್ಲ. ನಮ್ಮಿಂದಲೇ ಆಯ್ಕೆಯಾದವರು ನಮ್ಮ ಸಂಕಷ್ಟಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸದಿರುವುದು ವಿಪರ್ಯಾಸಕರ ಎಂದರು.

ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಟಿ. ಆನಂದ್ ಮಾತನಾಡಿ, ‘ಇಂಧನ ಸಚಿವರು ರೈತರ ಪಂಪ್‌ಸೆಟ್‌ಗಳಿಗೆ 12 ಗಂಟೆ ತ್ರೀಫೇಸ್ ವಿದ್ಯುತ್‌ ನೀಡುವುದಾಗಿ ತಿಳಿಸುತ್ತಾರೆ. ಆದರೆ, 3 ರಿಂದ 4 ಗಂಟೆ ಮಾತ್ರ ತ್ರೀಫೇಸ್ ವಿದ್ಯುತ್ ದೊರೆಯುತ್ತಿದೆ. ಇದರತ್ತ ಗಮನ ಹರಿಸಿ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಹಶೀಲ್ದಾರ್ ಜೆ. ಉಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಪದಾಧಿಕಾರಿಗಳಾದ ಮಂಜುನಾಥ್, ವನಶ್ರೀ ಲಕ್ಷ್ಮಣಗೌಡ, ಹಾಲಮ್ಮ, ಹೊನ್ನೆಗೌಡರು, ಚಂದ್ರಶೇಖರ್, ಬಸವರಾಜ್, ಲೋಕೇಶ್, ಜಯರಾಮ್, ಹನುಮಂತಪ್ಪ, ವಿಜಯ್‌ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.