ಮೂಡಿಗೆರೆ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯು ಬುಧವಾರವೂ ಮುಂದುವರೆದಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿ ನಷ್ಟ ಉಂಟಾಗಿದೆ.
ಮಂಗಳವಾರ ರಾತ್ರಿಯಿಂದಲೂ ಆರ್ಭಟಿಸಿದ ಮಳೆಯು, ಬುಧವಾರ ಸಂಜೆಯವರೆಗೂ ಎಡಬಿಡದೇ ಸುರಿಯಿತು. ಮಳೆಯಿಂದಾಗಿ ಜನರು ಮನೆಯಿಂದ ಹೊರಗೆ ಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಹಳ್ಳ, ನದಿ, ತೊರೆಗಳು ತುಂಬಿ ಹರಿಯುತ್ತಿದ್ದು, ಹೇಮಾವತಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಬುಧವಾರ ಬೆಳಿಗ್ಗೆ ಹೇಮಾವತಿ ನೀರು ಉಗ್ಗೆಹಳ್ಳಿ ಗದ್ದೆ ಬಯಲಿಗೆ ಹತ್ತಿದ್ದು, ತಡೆಗೋಡೆಯವರೆಗೂ ವ್ಯಾಪಿಸಬಹುದು ಎಂಬ ಆತಂಕ ಕಾಡಿತ್ತು.
ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮೆನಹಳ್ಳಿ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ನಡೆಯುತ್ತಿರುವ ನೂತನ ಸೇತುವೆ ಕಾಮಗಾರಿಯ ಸಲುವಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆಯು ಕುಸಿದು ಬಿದ್ದಿದ್ದು, ಸೇತುವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ್ದರೂ, ಸೇತುವೆಯ ಮುಂಭಾಗದ ಹಾಗೂ ಹಿಂಭಾಗದಲ್ಲಿ ಹಾಕಿದ್ದ ಮಣ್ಣು ಕೆಸರಾಗಿರುವುದರಿಂದ ಘನ ವಾಹನಗಳು ಚಲಿಸಲಾಗದೇ ಪರದಾಡುವಂತಾಗಿದೆ.
ಹ್ಯಾರಗುಡ್ಡೆ, ಬಕ್ಕಿ ಸುತ್ತಮುತ್ತಲ ಗ್ರಾಮಗಳಲ್ಲಿ ಹೇಮಾವತಿ ನದಿ ನೀರು ಕಾಫಿ ತೋಟಗಳಿಗೆ ನುಗ್ಗಿದ್ದು ಹಾನಿ ಸಂಭವಿಸಿದೆ. ಮಳೆಯಿಂದ 100ಕ್ಕೂ ಅಧಿಕ ವಿದ್ಯುತ್ ಕಂಬಗಳು, 10ಕ್ಕೂ ಅಧಿಕ ವಿದ್ಯುತ್ ಪರಿವರ್ತಕಗಳು ಹಾನಿಯಾಗಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
ಕಾಫಿ ತೋಟಗಳಲ್ಲಿ ಮರಗಳು ಧರೆಗುರುಳಿದ್ದು, ಕಾಫಿ ಗಿಡಗಳು ಮುರಿದು ಹಾನಿ ಸಂಭವಿಸಿದರೆ, ಶುಂಠಿ ಗದ್ದೆಗಳಲ್ಲಿ ನೀರು ನಿಂತು, ಶುಂಠಿಗೆ ಕೊಳೆ ರೋಗ ಬರುವ ಭೀತಿ ಕಾಡುತ್ತಿದೆ. ಮುಗ್ರಹಳ್ಳಿ, ಹೊರಟ್ಟಿ, ಕಿತ್ಲೆಗಂಡಿ, ಬೆಟ್ಟದಮನೆ, ಅಗ್ರಹಾರ ಮುಂತಾದ ಭಾಗಗಳಲ್ಲಿ ಭತ್ತದ ಸಸಿಮಡಿಗಳು ಜಲರಾಶಿಯ ನಡುವೆ ಮುಳುಗಿ ಹೋಗಿದ್ದು, ಮಳೆ ಕಡಿಮೆಯಾಗದಿದ್ದರೆ ಸಸಿಗಳು ಕರಗುವ ಆತಂಕ ಕಾಡುತ್ತಿದೆ.
ಗೋಣಿಬೀಡಿನ ದೇವರಮಕ್ಕಿಯಲ್ಲಿ ಸುಂದರಿ ಎಂಬುವವರ ಮನೆ, ಜಾಣಿಗೆ ಗ್ರಾಮದ ಲಕ್ಷ್ಮಣಗೌಡ ಎಂಬುವವರ ದನದ ಕೊಟ್ಟಿಗೆ ಕುಸಿದು ಬಿದ್ದಿದ್ದು, ಕೊಟ್ಟಿಗೆಯಲ್ಲಿದ್ದ ಹಸುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದೇವರುಂದ, ಫಲ್ಗುಣಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮನೆಗಳು ಧರೆಗುರುಳಿದ್ದು, ಅಪಾರ ನಷ್ಟ ಸಂಭವಿಸಿದೆ.
ಕಳೆದ 24 ಗಂಟೆಗಳಲ್ಲಿ ಹೊಸ್ಕೆರೆಯಲ್ಲಿ 15 ಸೆಂ.ಮೀ, ಬಿಳ್ಳೂರು, ಕೊಟ್ಟಿಗೆಹಾರದಲ್ಲಿ 14 ಸೆಂ.ಮೀ, ಮೂಡಿಗೆರೆ ಹಾಗೂ ಗೋಣಿಬೀಡು 8 ಸೆಂ.ಮೀ, ಜಾವಳಿಯಲ್ಲಿ 7.5 ಸೆಂ.ಮೀ ನಷ್ಟು ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.