ADVERTISEMENT

ಮೂಡಿಗೆರೆ | ನೆಲಕಚ್ಚಿದ ಮನೆಗಳು; ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 5:34 IST
Last Updated 22 ಜುಲೈ 2023, 5:34 IST
ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳ್ಳೂರು ಗ್ರಾಮದ ಕುಸುಮ ಎಂಬುವರ ಮನೆ ಮಳೆಯಿಂದ ಹಾನಿಯಾಗಿದೆ
ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳ್ಳೂರು ಗ್ರಾಮದ ಕುಸುಮ ಎಂಬುವರ ಮನೆ ಮಳೆಯಿಂದ ಹಾನಿಯಾಗಿದೆ   

ಮೂಡಿಗೆರೆ: ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯು ಶುಕ್ರವಾರವು ಮುಂದುವರೆದಿದ್ದು ಹಲವೆಡೆ ಮನೆಗಳು ಕುಸಿದು ಹಾನಿ ಸಂಭವಿಸಿದೆ.

ನಸುಕಿಂದಲೂ ಸುರಿಯಲು ಪ್ರಾರಂಭಿಸಿದ ಮಳೆಯು, ಮಧ್ಯಾಹ್ನ ಕೆಲಕಾಲ ಬಿಡುವು ನೀಡಿತ್ತು. ಸಂಜೆ ಮೂರರ ಬಳಿಕ ಪುನಃ ಸುರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ತಾಲ್ಲೂಕಿನ ಊರುಬಗೆ, ದೇವರುಂದ, ಗುತ್ತಿ, ಮೂಲರಹಳ್ಳಿ, ದೇವರಮನೆ, ಮೇಕನಗದ್ದೆ, ದೇವರುಂದ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಮಳೆಯೊಂದಿಗೆ ಗಾಳಿಯ ರಭಸವೂ ಹೆಚ್ಚಾಗಿದ್ದರಿಂದ ಶುಕ್ರವಾರವೂ ಕಾಫಿ ತೋಟಗಳಲ್ಲಿನ ಕೃಷಿ ಚಟುವಟಿಕೆಗೆ ಬಿಡುವು ನೀಡಲಾಗಿತ್ತು.

ಮಳೆಯಿಂದ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳ್ಳೂರು ಗ್ರಾಮದ ಕುಸುಮ ಎಂಬುವವರ ಮನೆಯು ಕುಸಿದಿದ್ದು ನಷ್ಟ ಸಂಭವಿಸಿದೆ. ಗೌಡಳ್ಳಿ ಗ್ರಾಮದ ಬಾಳೆಗದ್ದೆಯಲ್ಲಿನ ಅಂಗನವಾಡಿ ಕೇಂದ್ರದ ಮೇಲ್ಛಾವಣಿಯ ಶೀಟುಗಳು ಹಾರಿ ಹೋಗಿ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ADVERTISEMENT

ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಜನರು ಮನೆಯಿಂದ ಹೊರಗೆ ಬರದೇ ಆರ್ಥಿಕ ವಹಿವಾಟು ಕುಸಿದಿತ್ತು. ಶುಕ್ರವಾರ ವಾರದ ಸಂತೆಯಲ್ಲೂ ಗ್ರಾಹಕರಿಲ್ಲದೇ ತಾವು ತಂದ ಸರಕುಗಳನ್ನು ಮಾರಾಟ ಮಾಡಲು ವರ್ತಕರು ಪರದಾಡುತ್ತಿದ್ದರು. ಸಂಜೆ ಶಾಲೆ ಮುಗಿಯುವ ಸಮಯದಲ್ಲಿ ರಭಸವಾಗಿ ಮಳೆ ಸುರಿದಿದ್ದರಿಂದ ಶಾಲೆಯಿಂದ ಮನೆಗೆ ತೆರಳಲು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಗಂಗನಮಕ್ಕಿ, ಎಂ.ಜಿ ರಸ್ತೆ, ವಿದ್ಯಾನಗರ ರಸ್ತೆಗಳಲ್ಲಿ ಮಳೆ ನೀರೆಲ್ಲವೂ ರಸ್ತೆ ಮೇಲೆ ಹರಿಯುತ್ತಿದ್ದರಿಂದ ಪಾದಚಾರಿಗಳು, ಕಾಲೇಜು ವಿದ್ಯಾರ್ಥಿಗಳು ಪಾದಚಾರಿ ಮಾರ್ಗದಲ್ಲಿ ಸಾಗಲು ಹರಸಾಹಸ ಪಟ್ಟರು.

ಮೂಡಿಗೆರೆ ತಾಲ್ಲೂಕಿನ ಬಾಳೆಗದ್ದೆ ಅಂಗನವಾಡಿ ಕೇಂದ್ರದ ಶೀಟುಗಳು ಗಾಳಿಗೆ ಹಾರಿಹೋಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.