ಕಾಫಿ ಕಾಯಿಗಳು ಕೊಳೆತಿರುವುದು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದ್ದು, ಮಹಾಮಳೆಗೆ ಕಾಫಿ ಕಾಯಿ ಉದುರುತ್ತಿದೆ. ಬೆಳೆವಿಮೆ ವ್ಯಾಪ್ತಿಯಲ್ಲಿ ಕಾಫಿ ಇಲ್ಲದಿರುವುದು ಬೆಳೆಗಾರರನ್ನು ಆತಂಕಕ್ಕೆ ಈಡು ಮಾಡಿದೆ.
ಕಳೆದ ವರ್ಷ ಮಳೆ ಇಲ್ಲದೆ ಕಂಗೆಟ್ಟಿದ್ದ ಕಾಫಿ ಬೆಳೆಗಾರರು ತೋಟ ಉಳಿಸಿಕೊಳ್ಳಲು ಪರದಾಡಿದ್ದರು. ಈ ವರ್ಷ ಭಾರಿ ಬಿರುಗಾಳಿ ಸಹಿತ ಮಳೆ ಕಾಫಿ ಬೆಳೆಯನ್ನು ಕಾಡುತ್ತಿದೆ.
ಆಲ್ದೂರು, ಕೊಟ್ಟಿಗೆಹಾರ, ಮೂಡಿಗೆರೆ, ಕಳಸ, ಬಾಳೆಹೊನ್ನೂರು ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಗಿಡಗಳಲ್ಲಿಯೇ ಕರಗಿ ಗೊಂಚಲು– ಗೊಂಚಲೇ ಕಾಫಿ ಉದುರುತ್ತಿದೆ. ಗಿಡಗಳ ರೆಂಬೆಗಳಲ್ಲಿ ಕಾಫಿ ಕಾಯಿಗಳು ಕಪ್ಪಾಗಿ ಕೊಳೆಯುತ್ತಿವೆ.
ತೋಟಗಳಿಗೆ ಕಾಲಿಟ್ಟರೆ ಕಾಫಿ ಕಾಯಿಗಳು ಉದುರಿ ಬಿದ್ದಿರುವುದನ್ನು ಕಂಡು ಬೆಳೆಗಾರರು ಮರುಗುತ್ತಿದ್ದಾರೆ. ಮಳೆ ಹೀಗೆಯೇ ಮುಂದುವರಿದರೆ ಮುಂದಿನ ವರ್ಷ ಇಳುವರಿಯೇ ಕೈತಪ್ಪುವ ಸಾಧ್ಯತೆ ಇದೆ ಎಂದು ಬೆಳೆಗಾರರು ಹೇಳುತ್ತಾರೆ.
ವಾಡಿಕೆ ಮಳೆಗೆ ಹೋಲಿಸಿದರೆ ಮಲೆನಾಡಿನಲ್ಲಿ ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಜುಲೈ ಎರಡು ಮತ್ತು ಮೂರನೇ ವಾರದಲ್ಲಿ ಮಳೆ ಅಬ್ಬರ ಜೋರಾಗಿದೆ. ವಾಡಿಕೆಯಂತೆ ಜನವರಿ 1ರಿಂದ ಈವರೆಗೆ ಜಿಲ್ಲೆಯಲ್ಲಿ ಸರಾಸರಿ 83 ಸೆಂಟಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಈಗಾಗಲೇ 100 ಸೆಂಟಿ ಮೀಟರ್ ಮಳೆಯಾಗಿದೆ. ಇದು ಮಲೆನಾಡಿನಲ್ಲಿ ಕಾಫಿ, ಮೆಣಸು ಮತ್ತು ಅಡಿಕೆ ಬೆಳೆಗೆ ಕಂಟಕವಾಗಿ ಕಾಡುತ್ತಿದೆ.
ಕಾಫಿ ಬೆಳೆ ಕೇಂದ್ರ ವಾಣಿಜ್ಯ ಇಲಾಖೆ ವ್ಯಾಪ್ತಿಯಲ್ಲಿದ್ದು, ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಇರುವಂತೆ ಬೆಳೆವಿಮಾ ಸೌಲಭ್ಯ ಇಲ್ಲ. ನೂರಾರು ಎಕರೆ ಎಸ್ಟೇಟ್‌ಗಳನ್ನಷ್ಟೇ ಗಮನದಲ್ಲಿ ಇಟ್ಟುಕೊಂಡು ಉದ್ಯಮವನ್ನಾಗಿ ನೋಡಲಾಗುತ್ತಿದೆ. ಇದರಿಂದಾಗಿ 10– 20 ಎಕರೆ ಹೊಂದಿರುವ ಸಣ್ಣ ಬೆಳೆಗಾರರಿಗೆ ವಿಮೆ ಸೌಲಭ್ಯ ಸಿಗದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.
‘ಮಲೆನಾಡಿನ ಗುಡ್ಡಗಾಡು ಪ್ರದೇಶದಲ್ಲಿ ಕಾಫಿ ಹೊರತಾಗಿ ಬೇರೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಬೆಳೆ ವಿಮೆ ವ್ಯಾಪ್ತಿಗೆ ಕಾಫಿಯನ್ನೂ ತರಬೇಕು. ಇಲ್ಲದಿದ್ದರೆ ಸಣ್ಣ ಬೆಳೆಗಾರರು ಉಳಿಯಲು ಸಾಧ್ಯವಿಲ್ಲ’ ಎಂಬುದು ಅವರ ಒತ್ತಾಯ.
ಬೆಳೆವಿಮೆ ವ್ಯಾಪ್ತಿಗೆ ಸೇರಿಸಲು ಮನವಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಾಫಿ ಕಾಯಿಗಳು ಕಪ್ಪಾಗಿ ಉದುರುತ್ತಿವೆ. ಇದರಿಂದ ಫಸಲು ಕಡಿಮೆಯಾಗಲಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್.ಜೈರಾಮ್ ತಿಳಿಸಿದರು. ಬೆಳೆವಿಮೆ ವ್ಯಾಪ್ತಿಯಲ್ಲಿ ಕಾಫಿ ಇಲ್ಲ. ಸೇರ್ಪಡೆ ಮಾಡುವಂತೆ ಕೇಂದ್ರ ವಾಣಿಜ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಕೃಷಿ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಮೂಲಕ ಜಂಟಿ ಸರ್ವೆ ಮಾಡಿಸಿ ಹಾನಿ ಬಗ್ಗೆ ಅಂದಾಜು ಮಾಡಿಸಬೇಕು ಎಂದು ಒತ್ತಾಯಿಸಿದರು.
ಮೆಣಸು ಅಡಿಕೆಯೂ ಬೆಳೆವಿಮೆ ವಂಚಿತ ಕಾಳು ಮೆಣಸು ಮತ್ತು ಅಡಿಕೆ ಬೆಳೆಗಳು ಬೆಳೆವಿಮೆ ವ್ಯಾಪ್ತಿಯಲ್ಲಿದ್ದರೂ ಹೆಚ್ಚಿನ ಬೆಳೆಗಾರರು ವಿಮೆಯಿಂದ ವಂಚಿತರಾಗುತ್ತಿದ್ದಾರೆ. ಜೂನ್ ಮತ್ತು ಜುಲೈ ತಿಂಗಳಿನಲ್ಲೇ ಹೆಚ್ಚು ಮಳೆಯಾಗುತ್ತಿದೆ. ಆದರೆ ಈ ಬೆಳೆಗಳ ವಿಮಾ ಅವಧಿ ಆಗಸ್ಟ್‌ನಿಂದ ಆರಂಭವಾಗುತ್ತದೆ. ಇದರಿಂದಾಗಿ ಸೌಲಭ್ಯದಿಂದ ವಂಚಿತಾಗುತ್ತಿದ್ದಾರೆ ಎಂದು ಬೆಳೆಗಾರರು ಹೇಳುತ್ತಾರೆ. ‘ತಾಂತ್ರಿಕ ಕಾರಣಗಳಿಂದ ಪಹಣಿಯಲ್ಲಿ ಕಾಳು ಮೆಣಸು ಮತ್ತು ಅಡಿಕೆ ಬೆಳೆ ನಮೂದಾಗಿಲ್ಲ. ಇದರಿಂದಾಗಿ ಶೇ 60ರಷ್ಟು ಬೆಳೆಗಾರರು ವಿಮಾ ವ್ಯಾಪ್ತಿಯಿಂದ ಹೊರಗುಳಿಯುತ್ತಿದ್ದಾರೆ. ಸಂಬಂಧಪಟ್ಟ ಸಚಿವರ ಗಮನ ಸೆಳೆಯಬೇಕು ಎಂದು ಶಾಸಕಿ ನಯನಾ ಮೋಟಮ್ಮ ಅವರಿಗೆ ಬೆಳೆಗಾರರ ಒಕ್ಕೂಟದಿಂದ ಗುರುವಾರ ಮನವಿ ಸಲ್ಲಿಸಲಾಗಿದೆ’ ಎಂದು ಬಿ.ಎಸ್. ಜೈರಾಮ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.