ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಹಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಉರಳಿವೆ. ಮರದ ಕೊಂಬೆಯೊಂದು ಬಿದ್ದು ಬೈಕ್ ಸವಾರ ಮೃತಪಟ್ಟಿದ್ದಾರೆ.
ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಮುಳ್ಳಯ್ಯನಗಿರಿ ಕೊಪ್ಪ, ಶೃಂಗೇರಿ ಎನ್.ಆರ್.ಪುರ, ಬಾಳೆಹೊನ್ನೂರು, ಆಲ್ದೂರು ಸೇರಿ ಮಲೆನಾಡು ಭಾಗದಲ್ಲಿ ಮಳೆ ಸೋಮವಾರ ಬೆಳಿಗ್ಗೆ ತನಕ ಆರ್ಭಟಿಸಿತು. ಮಧ್ಯಾಹ್ನದ ಬಳಿಕ ಎಲ್ಲೆಡೆ ಕೊಂಚ ಕಡಿಮೆಯಾಗಿದೆ.
ಬಿರುಗಾಳಿ ಸಹಿತ ಸುರಿದ ಮಳೆಗೆ ಬಾಳೆಹೊನ್ನೂರು ಸಮೀಪ ಮರದ ಕೊಂಬೆಯೊಂದು ಬೈಕ್ ಸವಾರನ ಮೇಲೆ ಬಿದ್ದಿದೆ. ಕಡಬಗೆರೆ ಬಿಳುಕೊಪ್ಪ ನಿವಾಸಿ ಅನಿಲ್ ರುಜಾರಿಯೊ(50) ಮೃತಪಟ್ಟಿದ್ದಾರೆ. ಇವರು ತಮ್ಮ ಗ್ರಾಮದಿಂದ ಬಾಳೆಹೊನ್ನೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು.
ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ತೆರಳುವ ಮಾರ್ಗದಲ್ಲಿ ಕೈಮರದಿಂದ 4 ಕಿಲೋ ಮೀಟರ್ ದೂರದಲ್ಲಿ ದೊಡ್ಡ ಮರವೊಂದು ಬಿದ್ದಿದೆ. ಕೊಪ್ಪ ತಾಲ್ಲೂಕಿನ ಮೇಗೂರು ಬಳಿ ಮರವೊಂದು ಬೇರು ಸಹಿತ ರಸ್ತೆಗೆ ಉರಳಿತ್ತು. ಮರಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಭಾರಿ ವಾಹನ ನಿಷೇಧ: ಶೃಂಗೇರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ತನಿಕೋಡಿನಿಂದ ಎಸ್.ಕೆ.ಬಾರ್ಡರ್ ತನಕ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಭಾರಿ ಮಳೆ ಸುರಿಯುತ್ತಿರುವುದರಿಂದ ರಸ್ತೆ ಕುಸಿಯುವ ಸಾಧ್ಯತೆ ಇದೆ. ಆದ್ದರಿಂದ ಭಾರಿ ವಾಹನಗಳ ಸಂಚಾರ ನಿಷೇಧಿಸಿದ್ದು, ಕಳಸ–ಕುದುರೆಮುಖ–ಎಸ್.ಕೆ.ಬಾರ್ಡರ್ ಮಾರ್ಗದಲ್ಲಿ ಸಂಚರಿಸಲು ಬದಲಿ ಮಾರ್ಗ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.