ADVERTISEMENT

ರೈತರಿಗೆ ಆಸರೆಯಾದ ಮಳೆ ನೀರು ಸಂಗ್ರಹ ಘಟಕ

ರೈನಿ ಸಂಶೋಧನಾ ಸಂಸ್ಥೆಯ ಜಲದಾನ ಕೈಂಕರ್ಯ

ಬಿ.ಜೆ.ಧನ್ಯಪ್ರಸಾದ್
Published 4 ಜೂನ್ 2020, 17:35 IST
Last Updated 4 ಜೂನ್ 2020, 17:35 IST
ಮಳೆ ನೀರು ಸಂಗ್ರಹ ಘಟಕದ ನೀರಿನಲ್ಲಿ ಬೆಳೆದಿರುವ ಬೀನ್ಸ್ ಗಿಡ. –ಪ್ರಜಾವಾಣಿ ಚಿತ್ರ ಎ.ಎನ್‌.ಮೂರ್ತಿ
ಮಳೆ ನೀರು ಸಂಗ್ರಹ ಘಟಕದ ನೀರಿನಲ್ಲಿ ಬೆಳೆದಿರುವ ಬೀನ್ಸ್ ಗಿಡ. –ಪ್ರಜಾವಾಣಿ ಚಿತ್ರ ಎ.ಎನ್‌.ಮೂರ್ತಿ   

ಚಿಕ್ಕಮಗಳೂರು: ತಾಲ್ಲೂಕಿನ ಹಾದಿಹಳ್ಳಿ ಬಳಿಯ ರೈನಿ ಸಂಶೋಧನಾ ಸಂಸ್ಥೆಯ ಮಳೆ ನೀರು ಸಂಗ್ರಹ ಘಟಕದ ‘ಜಲಧಾರೆ’ ಹಲವು ರೈತರ ಪಾಲಿಗೆ ಆಸರೆಯಾಗಿದೆ. ಬೆಳೆ ಕಾಪಾಡಿಕೊಳ್ಳಲು ಆಧಾರವಾಗಿದೆ.

ಮಳೆ ನೀರು ಸಂಗ್ರಹ ವಿಧಾನ ಮತ್ತು ತಂತ್ರಜ್ಞಾನದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಮೈಕೆಲ್‌ ಸದಾನಂದ ಬ್ಯಾಪ್ಟಿಸ್ಟ್‌ ಅವರು ಹಾದಿಹಳ್ಳಿ ಬಳಿ ‘ರೈನಿ’ ಸಂಶೋಧನಾ ಘಟಕ ನಿರ್ಮಾಣ ಕೈಗೆತ್ತಿಕೊಂಡಿದ್ದಾರೆ. ಮಳೆ ನೀರು ಸಂಗ್ರಹ ಘಟಕವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಗಿದೆ.

ಈ ಘಟಕದಿಂದ ಸುತ್ತಮುತ್ತಲಿನ ಜಮೀನುಗಳ ರೈತರಿಗೆ ‘ಜಲದಾನ’ ಕೈಂಕರ್ಯದಲ್ಲಿ ತೊಡಗಿದ್ದಾರೆ. ಪೈಪುಗಳನ್ನು ಅಳವಡಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಹಾದಿಹಳ್ಳಿಕಡೆಮಕ್ಕಿ ಗ್ರಾಮದ 12 ರೈತ ಕುಟುಂಬಗಳ ಸುಮಾರು 50 ಎಕರೆ ಹೊಲಕ್ಕೆ ನೀರು ಒದಗಿಸುತ್ತಿದ್ದಾರೆ. ಆಲೂಗಡ್ಡೆ, ಹುರುಳಿಕಾಯಿ (ಬೀನ್ಸ್‌) ಬಳ್ಳಿ, ಬಟಾಣಿ, ಮಣಸಿನ ಗಿಡ, ಮೂಲಂಗಿ, ಶುಂಠಿ ಮೊದಲಾದ ಬೆಳೆಗಳನ್ನು ಹಾಕಿದ್ದಾರೆ.
‘ನಮ್ಮದು ನಾಲ್ಕು ಎಕರೆ ಜಮೀನಿದೆ. ಮೂರು ಕೊಳವೆ ಬಾವಿ ಕೊರೆಸಿದ್ದೇನೆ, ಮೂರರಲ್ಲೂ ನೀರಿಲ್ಲ. ಬೆಳೆಗೆ ನೀರಿನ ತಾಪತ್ರಯವಾಗಿತ್ತು. ಮೈಕೆಲ್‌ ಅವರು ನೀರು ನೀಡಿದ್ದಾರೆ. ಬೆಳೆ ಕಾಪಾಡಿಕೊಳ್ಳಲು ಅನುಕೂಲವಾಗಿದೆ’ ಎಂದು ರೈತ ವೆಂಕಟೇಗೌಡ್‌ ಸಂತಸ ವ್ಯಕ್ತಪಡಿಸಿದರು.

‘ಬೆಂಗಳೂರಿನಲ್ಲಿದ್ದ ಮಕ್ಕಳು ಕೋವಿಡ್‌ ತಲ್ಲಣದಿಂದ ಮನೆಗೆ ಬಂದಿದ್ದಾರೆ. ನೀರಿಲ್ಲದಿದ್ದರೆ ಆರಂಭ (ವ್ಯವಸಾಯ) ಮಾಡಲಾಗದು. ‘ರೈನಿ’ ಮಳೆ ನೀರು ಸಂಗ್ರಹ ಘಟಕದ ನೀರಿನಿಂದ ತರಕಾರಿ ಬೆಳೆಯಲು ಹಾಕಿದ್ದೇವೆ’ ಎಂದು ರೈತ ಮಹಿಳೆ ಚಂದ್ರಮ್ಮ ಹೇಳಿದರು.
ಮಳೆ ನೀರು ಸಂಗ್ರಹ ವಿಧಾನ–ತಂತ್ರಜ್ಞಾನದ ಸಮಗ್ರ ಚಿತ್ರಣ ಕೇಂದ್ರವಾಗಿ ‘ರೈನಿ’ ಸಂಶೋಧಾನಾ ಘಟಕ ನಿರ್ಮಿಸುವ ಕಾರ್ಯಗಳು ನಡೆಯುತ್ತಿವೆ. ಆರು ಎಕರೆ ಜಾಗದಲ್ಲಿ ನಿರ್ಮಿಸುತ್ತಿರುವ ಈ ಘಟಕದಲ್ಲಿ ಪೈಪ್‌ ಲೈನ್‌, ತೊಟ್ಟಿ, ಟ್ಯಾಂಕು, ವಿ–ವೈರ್‌ ಇಂಜೆಕ್ಷನ್‌ ಬಾವಿ, ಶೋಧಕ (ಫಿಲ್ಟರ್‌) ತಂತ್ರಜ್ಞಾನ ಅಳವಡಿಸಿ ಈಗಾಗಲೇ ಮಳೆ ನೀರು ಸಂಗ್ರಹಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.

‘ಇನ್ನಷ್ಟು ಹೊಲಗಳಿಗೆ ನೀರು ಒದಗಿಸಲು ಸಿದ್ಧ’

‘ಮಳೆ ನೀರು ಸಂಗ್ರಹ ಘಟಕದಿಂದ ಈಗ 50 ಎಕರೆಗೆ ನೀರು ಕೊಡುತ್ತಿದ್ದೇವೆ. ರೈತರಿಗೆ ಅನುಕೂಲವಾಗಬೇಕು ಎಂಬುದು ಇದರ ಉದ್ದೇಶ. ನಮ್ಮ ಘಟಕದಿಂದ ಇನ್ನಷ್ಟು ರೈತರಿಗೆ ನೀರು ಒದಗಿಸಲು ನಾವು ಸಿದ್ಧರಿದ್ದೇವೆ’ ಎಂದು ರೈನಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಮೈಕೆಲ್‌ ಸದಾನಂದ ಬ್ಯಾಪ್ಟಿಸ್ಟ್‌ ತಿಳಿಸಿದರು.

‘ಹೊಲಗಳಲ್ಲಿ ಮಳೆ ನೀರು ಸಂಗ್ರಹ ಘಟಕ ನಿರ್ಮಿಸಿಕೊಂಡರೆ ಬಹಳಷ್ಟು ಅನುಕೂಲವಾಗುತ್ತದೆ. ಇಂಥ ವ್ಯವಸ್ಥೆ ಮಾಡಿಕೊಂಡು ಸಮುದಾಯ ಕೃಷಿ ಮಾಡಿದರೆ ಅಭಿವೃದ್ಧಿ ಹೊಂದಲು ಅವಕಾಶವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಕಾರ್ಯೋನ್ಮುಖರಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.