ADVERTISEMENT

ಮಳೆಗಾಲದಲ್ಲಿ ಸಮಸ್ಯೆಯಾಗುವ ಆತಂಕ

ಹೊರನಾಡು- ಬಲಿಗೆ ರಸ್ತೆ ಕಾಮಗಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 9 ಮೇ 2020, 12:07 IST
Last Updated 9 ಮೇ 2020, 12:07 IST
ಕಳಸ ತಾಲ್ಲೂಕಿನ ಹೊರನಾಡು-ಬಲಿಗೆ ಗ್ರಾಮದ ರಸ್ತೆ ಕಾಮಗಾರಿಯ ದೃಶ್ಯ.
ಕಳಸ ತಾಲ್ಲೂಕಿನ ಹೊರನಾಡು-ಬಲಿಗೆ ಗ್ರಾಮದ ರಸ್ತೆ ಕಾಮಗಾರಿಯ ದೃಶ್ಯ.   

ಕಳಸ: ₹ 6 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಹೊರನಾಡು- ಬಲಿಗೆ ರಸ್ತೆ ಕಾಮಗಾರಿ ನಿಗದಿಯಂತೆ ಮಳೆಗಾಲದ ಒಳಗೆ ಮುಗಿಯುವುದು ಅಸಾಧ್ಯವೇ ಆಗಿದೆ. ಇದರಿಂದಾಗಿ ಅಲ್ಲಿನ ಗ್ರಾಮಸ್ಥರು ಬೇಸರಗೊಂಡಿದ್ದಾರೆ.

‘2 ವರ್ಷದಿಂದ ಕೆಲಸ ಮಾಡ್ತಾನೇ ಇದ್ದಾರೆ. ಇನ್ನೂ ಮುಗಿಯುವ ಹಾಗೆ ಕಾಣುತ್ತಿಲ್ಲ' ಎಂದು ಬಹುತೇಕ ಗ್ರಾಮಸ್ಥರು ದೂರುತ್ತಾರೆ.

‘ಕಾಮಗಾರಿಯ ಕೊನೆ ಹಂತದಲ್ಲಿ ಗುತ್ತಿಗೆದಾರರು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಅಲ್ಲಲ್ಲಿ ಡಾಂಬರು ಕಿತ್ತು ಬರುತ್ತಿದೆ’ ಎಂಬ ದೂರು ಚಿಕ್ಕನಕೊಡಿಗೆ, ಬಲಿಗೆ ಗ್ರಾಮದಲ್ಲಿ ವ್ಯಾಪಕವಾಗಿ ಇದೆ.

ADVERTISEMENT

‘ರಸ್ತೆಯು ಹೊರನಾಡು ತಲುಪುವ ಒಳಗೆ ಕೆಲ ಖಾಸಗಿ ವ್ಯಕ್ತಿಗಳ ಜಮೀನು ಮೂಲಕ ಹಾದುಹೋಗಬೇಕಿದೆ. ಆದರೆ, ಈ ಜಮೀನಿನಲ್ಲಿ ಈವರೆಗೂ ರಸ್ತೆ ಕಾಮಗಾರಿ ಆರಂಭಗೊಂಡಿಲ್ಲ. ಇದು ರಸ್ತೆ ಕಾಮಗಾರಿ ಇನ್ನಷ್ಟು ವಿಳಂಬ ಆಗುವ ಭಯ ಮೂಡಿಸಿದೆ’ ಎಂದು ಜೆಡಿಎಸ್ ಮುಖಂಡ ಪ್ರಸಾದ್ ಜೈನ್ ಬಲಿಗೆ ಹೇಳುತ್ತಾರೆ.

ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಮಂಜುನಾಥ್ ಅವರನ್ನು 'ಪ್ರಜಾವಾಣಿ' ಮಾತನಾಡಿಸಿದಾಗ ‘ಲಾಕ್‌ಡೌನ್ ಕಾರಣಕ್ಕೆ ಒಂದೂವರೆ ತಿಂಗಳು ಕೆಲಸ ನಿಂತು ಹೋಯಿತು. ಇದೀಗ ಹೊರನಾಡಿನ ಜಿ.ಭೀಮೇಶ್ವರ ಜೋಷಿ ತಮ್ಮ ಕುಟುಂಬದ ಜಮೀನಿನಲ್ಲಿ ರಸ್ತೆ ಮಧ್ಯದಿಂದ 5 ಮೀಟರ್ ಅಗಲಕ್ಕೆ ವಿಸ್ತರಿಸಲು ಒಪ್ಪಿದಾರೆ. ಮಳೆಗಾಲದ ಒಳಗೆ ಸಂಪೂರ್ಣವಾಗಿ ಜಲ್ಲಿ ಹಾಕಿ ಮುಂದಿನ ಜನವರಿ ಒಳಗೆ ಡಾಂಬರೀಕರಣದ ಕೆಲಸವನ್ನು ಸಂಪೂರ್ಣವಾಗಿ ಮುಗಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಏನೇ ಸಮಸ್ಯೆ ಇದ್ದರೂ ಬಗೆಹರಿಸಿ ನಮಗೆ ಮಳೆಗಾಲದ ಒಳಗೆ ರಸ್ತೆಯನ್ನು ನಿಗದಿಯಂತೆ ವಿಸ್ತರಣೆ ಮಾಡಿ, ಜಲ್ಲಿ ಹಾಕಿಕೊಟ್ಟರೆ ಮಳೆಗಾಲದಲ್ಲಿ ಓಡಾಡಲು ಅನುಕೂಲ ಆಗುತ್ತದೆ. ಇಲ್ಲದಿದ್ದರೆ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರಿಗೆ ಭಾರಿ ಕಷ್ಟ ಆಗುತ್ತದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.