ADVERTISEMENT

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ

 ರೈತಸಂಘ–ಹಸಿರುಸೇನೆಯಿಂದ ಎಐಟಿ ವೃತ್ತದಲ್ಲಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 14:07 IST
Last Updated 10 ಜೂನ್ 2019, 14:07 IST
ರೈತಸಂಘ ಮತ್ತು ಹಸಿರುಸೇನೆಯವರು ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.
ರೈತಸಂಘ ಮತ್ತು ಹಸಿರುಸೇನೆಯವರು ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.   

ಚಿಕ್ಕಮಗಳೂರು: ರಾಜ್ಯ ಸರ್ಕಾರವು ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಕೈಬಿಡಬೇಕೆಂದು ರೈತಸಂಘ ಮತ್ತು ಹಸಿರುಸೇನೆಯವರು ನಗರದ ಎಐಟಿ ವೃತ್ತದಲ್ಲಿ ಸೋಮವಾರ ಸುಮಾರು 10 ನಿಮಿಷ ರಸ್ತೆ ತಡೆ ನಡೆಸಿದರು.

ಎಐಟಿ ವೃತ್ತದಲ್ಲಿ ಬೆಳಿಗ್ಗೆ 11.30ರ ಹೊತ್ತಿಗೆ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆ.ಎಂ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಸುಮಾರು 10 ನಿಮಿಷ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

2013ಕ್ಕಿಂತ ಮುಂಚೆ ಇದ್ದ ಭೂಸ್ವಾಧೀನ ಕಾಯ್ದೆಯು ರಿಯಲ್‌ ಎಸ್ಟೇಟ್‌ ಕುಳಗಳ ಎಇಝಡ್‌ ಇತರ ಮಧ್ಯವರ್ತಿಗಳು ರೈತರನ್ನು ವಂಚಿಸಿ ಜಮೀನು ಅಕ್ರಮವಾಗಿ ಪಡೆಯಲು ಅನುಕೂಲಕರವಾಗಿತ್ತು. ಇದನ್ನು ವಿರೋಧಿಸಿ ರೈತ ಸಂಘಟನೆ ಒಕ್ಕೂಟಗಳು ಪ್ರತಿಭಟನೆ ನಡೆಸಿದ್ದರಿಂದ ಆಗಿನ ಯುಪಿಎ ಸರ್ಕಾರವು 2013ರ ಏಪ್ರಿಲ್‌ನಲ್ಲಿ ರೈತರಿಗೆ ಅನುಕೂಲವಾಗುವಂತೆ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರವು 2019ರಲ್ಲಿ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ರೈತರಿಗೆ ಮಾರಕವಾಗಿದೆ. ಹೀಗಾಗಿ, 2013ರ ಕಾಯ್ದೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ನೀರಾವರಿ ಯೋಜನೆಗಳಿಗೆ ಶೇ 25 ಅನುದಾನ ಮೀಸಲಿಟ್ಟು, ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು. ಬರ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದಾರೆ. ಉದ್ಯೋಗ ಅರಸಿ ನಗರಗಳ ಕಡೆಗೆ ಮುಖ ಮಾಡಿದ್ದಾರೆ. ಬರಹರಿಹಾರ ಕಾಯಕ್ರಮಗಳನ್ನು ಸರ್ಕಾರ ಆರಂಭಿಸಬೇಕು. ಕೆರೆಗಳ ಹೂಳು ಎತ್ತುವುದು, ಹಳ್ಳಗಳು ಹರಿಯುವ ಕಡೆ ಚೆಕ್‌ ಡ್ಯಾಂ ಮತ್ತು ನೀರು ಇಂಗಿಸುವ ಯೋಜನೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಡಾ.ಎಂ.ಎಸ್‌.ಸ್ವಾಮಿನಾಥನ್‌ ನೇತೃತ್ವದ ರಾಷ್ಟ್ರೀಯ ರೈತರ ಕಮಿಷನ್‌ ಮಾಡಿರುವ ಶಿಫಾರಸುಗಳನ್ನು ತಕ್ಷಣ ಜಾರಿಗೊಳಿಸಬೇಕು. ರಾಸಾಯನಿಕ ಗೊಬ್ಬರ, ಕೃಷಿ ಪರಿಕರಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ತೆಗೆದುಹಾಕಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 12 ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ 2009ರ ವಿದರ್ಭ ಪ್ಯಾಕೇಜ್‌ ಮತ್ತು ರಾಜ್ಯ ಸರ್ಕಾರದ 2018ರ ಸಾಲಮನ್ನಾ ಎರಡರಿಂದಲೂ ವಂಚಿತರಾಗಿರುವ ರೈತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಸುಸ್ತಿಯಾಗಿರುವ ರೈತರ ಸಾಲ ವಸೂಲಿಗೆ ಬ್ಯಾಂಕಿನವರು ಮುಂದಾಗಿ, ಸಾಲ ಕಟ್ಟುವಂತೆ ನೋಟಿಸ್‌ ನೀಡುತ್ತಾರೆ. ಸುಸ್ತಿಯಾಗಿ ಸಾಲ ಸಂಕಷ್ಟದಲ್ಲಿರುವ ರೈತರಿಗೂ 2018 ಸಾಲಮನ್ನಾ ಅನ್ವಯಿಸುವಂತೆ ಕ್ರಮವಹಿಸಬೇಕು. ರೈತರ ಆತ್ಮಹತ್ಯೆ ತಡೆಗಟ್ಟಬೇಕು ಎಂದು ಮನವಿ ಮಾಡಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್‌, ಜಿಲ್ಲಾಧ್ಯಕ್ಷ ಡಿ.ಆರ್‌.ದುಗ್ಗಪ್ಪಗೌಡ, ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್‌, ಸವಿನ್‌ ಜೈಯಜೈನ್‌, ನಿರಂಜನಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.