ADVERTISEMENT

ಬೀರೂರು ಪುರಸಭೆ ವ್ಯಾಪ್ತಿಯ ರಾಜಾಜಿನಗರ: ನಾಲ್ಕು ದಶಕ ಕಳೆದರೂ ಇಲ್ಲ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:41 IST
Last Updated 22 ಅಕ್ಟೋಬರ್ 2025, 6:41 IST
ಕಡೂರು ತಾಲ್ಲೂಕು ಬೀರೂರು ಪಟ್ಟಣದ ರಾಜಾಜಿನಗರ ಬಡಾವಣೆಯ ರಸ್ತೆಗಳು ದುಃಸ್ಥಿತಿಯಲ್ಲಿರುವುದು
ಕಡೂರು ತಾಲ್ಲೂಕು ಬೀರೂರು ಪಟ್ಟಣದ ರಾಜಾಜಿನಗರ ಬಡಾವಣೆಯ ರಸ್ತೆಗಳು ದುಃಸ್ಥಿತಿಯಲ್ಲಿರುವುದು   

ಬೀರೂರು (ಕಡೂರು): ಬೀರೂರು ಪಟ್ಟಣದ ಸುಶಿಕ್ಷಿತರ, ನೌಕರರ ಬಡಾವಣೆ ಎಂದು ಗುರುತಿಸಲ್ಪಟ್ಟಿರುವ ‘ರಾಜಾಜಿನಗರ ಬಡಾವಣೆ’ ಅಸ್ತಿತ್ವಕ್ಕೆ ಬಂದು ನಾಲ್ಕು ದಶಕಗಳೇ ಕಳೆದರೂ ಮೂಲಸೌಕರ್ಯಗಳ ಕೊರತೆಯಿಂದ ನಲುಗುವುದು ತಪ್ಪಿಲ್ಲ. ಬಡಾವಣೆಯ ಹಲವು ರಸ್ತೆಗಳು ಈವರೆಗೆ ಡಾಂಬರು ಮುಖ ನೋಡಿಲ್ಲ, ಸಾಕಷ್ಟು ಮನೆಗಳ ಮುಂದೆ ಚರಂಡಿ ಇಲ್ಲ. ಪುರಸಭಾ ಸದಸ್ಯರು ಇತ್ತ ತಲೆ ಹಾಕುವುದಿಲ್ಲ. ಹೀಗೆ ಇಲ್ಲಗಳ ಸಾಲಿನ ಮೆರವಣಿಗೆಯೇ ಇಲ್ಲಿ ನಡೆದಿದೆ.

ಮೊದಲು ಆಶ್ರಯ ಬಡಾವಣೆಯಾಗಿದ್ದ ಈ ಬಡಾವಣೆ ಕ್ರಮೇಣ ಖಾಸಗಿಯವರ ಬಡಾವಣೆಯಾಗಿ ಮಾರ್ಪಟ್ಟಿದೆ. ರೈಲ್ವೆ ನಿಲ್ದಾಣ, ಬಿಇಒ ಕಚೇರಿ, ಬಸ್‌ ನಿಲ್ದಾಣ ಮೊದಲಾದವು ಸಮೀಪದಲ್ಲಿವೆ. ಆದ್ದರಿಂದ ಸಾಕಷ್ಟು ಜನ ಇಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಅಂದಾಜು 300 ಮನೆಗಳಿದ್ದು, 700 ಮಂದಿ ನಿವಾಸಿಗಳಿದ್ದಾರೆ. ನಿತ್ಯ ವಿವಿಧ ಕಚೇರಿಗೆ, ಶಾಲೆಗೆ, ಖಾಸಗಿ ಕೆಲಸಗಳಿಗೆ ತೆರಳುವವರು, ನಿವೃತ್ತರು ಇಲ್ಲಿ ವಾಸವಿದ್ದು, ರಸ್ತೆ, ಚರಂಡಿ, ಬೀದಿದೀಪ ಮೊದಲಾದ ವ್ಯವಸ್ಥೆ ಕೋರಿ ಪುರಸಭೆಗೆ ಮನವಿ ಕೊಟ್ಟು ಬೇಸತ್ತಿದ್ದಾರೆ.

ಬಡಾವಣೆಯ ಮುಖ್ಯರಸ್ತೆ, ಒಳಭಾಗದ ಅಲ್ಲಲ್ಲಿ ಕೆಲ ಚಿಕ್ಕ ರಸ್ತೆಗಳು ಡಾಂಬರು, ಕಾಂಕ್ರಿಟ್‌ ಕಂಡಿದ್ದರೆ, ಇನ್ನು 2-3 ಮುಖ್ಯ ಒಳರಸ್ತೆಗಳು ಬಡಾವಣೆ ಅಸ್ತಿತ್ವಕ್ಕೆ ಬಂದಾಗ ಹೇಗಿದ್ದವೋ ಹಾಗೆಯೇ ಇವೆ. ಕೆಲ ಮನೆಗಳ ಅಕ್ಕಪಕ್ಕದಲ್ಲಿಯೂ ಚರಂಡಿಯ ಸುಳಿವಿಲ್ಲ. ಸಾಕಷ್ಟು ಕಡೆ ಮನೆಗಳು ರಸ್ತೆಯ ಪಕ್ಕಕ್ಕೆ ನಿರ್ಮಾಣಗೊಂಡು ರಸ್ತೆಗಳು ಕಿರಿದಾಗಲು ಕಾರಣವಾಗಿದೆ. ಬಹಳಷ್ಟು ಮನೆಗಳ ಮುಂದೆ ಬೈಕ್‌ನಂತಹ ವಾಹನಗಳು ಇದ್ದರೆ ಇನ್ನೊಂದು ವಾಹನ ಸಂಚರಿಸಲೂ ದುಸ್ತರವಾಗುತ್ತಿದೆ ಎನ್ನುತ್ತಾರೆ ನಿವಾಸಿಗಳು.

ADVERTISEMENT

ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಇದ್ದರೂ ಕೊಳಚೆ ನೀರು ಸರಿಯಾಗಿ ಹರಿದು ಟ್ರೀಟ್‌ಮೆಂಟ್‌ ಪ್ಲಾಂಟ್‌ ತಲುಪಲು, ಸೂಕ್ತವಾದ ವ್ಯವಸ್ಥೆಯೇ ಇಲ್ಲದ ಕಾರಣ ಅಲ್ಲೇ ಇರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್‌ ಮುಂದೆಯೇ ತುಂಬಿ ಹರಿಯುವ ಸ್ಥಿತಿ ಸಾಮಾನ್ಯವಾಗಿದೆ. ಕೆಲವೆಡೆ ಚರಂಡಿ ಕಳೆಗಿಡಗಳಿಂದ ತುಂಬಿ ಇಲ್ಲಿ ಚರಂಡಿ ಇದೆಯೇ ಎಂದು ಹುಡುಕಬೇಕಾದ ಸನ್ನಿವೇಶವಿದೆ. ಕೆಲವೆಡೆ ಚರಂಡಿ ಕೊಳಚೆಯಿಂದ ಕಟ್ಟಿಕೊಂಡು ನೀರು ಹರಿಯಲು ಸಾಧ್ಯವಿಲ್ಲ ಎನ್ನುವಂತಿದ್ದು ಅನೈರ್ಮಲ್ಯ ಉಂಟಾಗುತ್ತಿದೆ.

‘ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಆದರೆ, ರಸ್ತೆ ಮತ್ತು ಚರಂಡಿ ಕೊರತೆ ಇದ್ದು ಪುರಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅನುದಾನ ಇಲ್ಲ. ವಾರ್ಡ್‌ ಪ್ರತಿನಿಧಿ ಕೋರಿಕೆಯ ಮೇಲೆ ಕೆಲಸಗಳು ನಡೆಯುತ್ತವೆ, ಚರಂಡಿ ಸ್ವಚ್ಛತೆಗೆ ಕ್ರಮ ವಹಿಸುತ್ತೇವೆ. ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಿಸುತ್ತೇವೆ ಎಂದು ಹೇಳುತ್ತಾರೆ. ಇಲ್ಲಿ ಉತ್ತಮ ರಸ್ತೆ, ಚರಂಡಿ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರವಿ.

ಬಡಾವಣೆಯಲ್ಲಿ ಎಲ್ಲಿಯೂ, ಯಾರೂ ಸಿ.ಸಿ ಟಿವಿ ಅಳವಡಿಸಿಲ್ಲ. ಏನಾದರೂ ಅಪರಾಧ ಪ್ರಕರಣಗಳು ಜರುಗಿದರೆ ಪತ್ತೆ ಕಾರ್ಯಕ್ಕೆ ಕಷ್ಟವಾಗಲಿದೆ. ಪೊಲೀಸ್ ಬೀಟ್ ಕೂಡ ಅಸಮರ್ಪಕವಾಗಿದ್ದು, ಪೊಲೀಸ್ ಇಲಾಖೆ ಇಲ್ಲಿ ಬೀಟ್ ಹೆಚ್ಚಿಸುವ ಮತ್ತು ಸಿ.ಸಿ ಟಿವಿ ಅಳವಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ನಾಗರಿಕ ಚಂದ್ರಶೇಖರ್ ಒತ್ತಾಯಿಸಿದರು.

ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಲಿ ಎನ್ನುವುದು ಆಶಯ.

ಕಡೂರು ತಾಲ್ಲೂಕು ಬೀರೂರು ಪಟ್ಟಣದ ರಾಜಾಜಿನಗರ ಬಡಾವಣೆಯ ರಸ್ತೆಗಳು ದುಃಸ್ಥಿತಿಯಲ್ಲಿರುವುದು
ಬೀರೂರು ಪಟ್ಟಣದ ರಾಜಾಜಿನಗರ ಬಡಾವಣೆಯಲ್ಲಿ ಕಳೆ ಗಿಡಗಳಿಂದ ಚರಂಡಿ ಮುಚ್ಚಿ ಹೋಗಿರುವುದು 

ಅಭಿವೃದ್ಧಿಗೆ ಪುರಸಭೆ ಕ್ರಮ ವಹಿಸಲಿ‌

ನಗರೋತ್ಥಾನ ಯೋಜನೆಯಲ್ಲಿ ಪಟ್ಟಣದ ಹಲವು ರಸ್ತೆಗಳನ್ನು ನಿರ್ಮಿಸಲಾಗಿತ್ತು. ಇಲ್ಲಿನ ಸದಸ್ಯರು ಮತ್ತು ಅಧಿಕಾರಿಗಳು ಸ್ವಲ್ಪ ಕ್ರಮ ವಹಿಸಿದ್ದರೂ ಇಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಿತ್ತು. ಆದರೆ ಎಲ್ಲರೂ ನಿರ್ಲಕ್ಷ್ಯ ತೋರುತ್ತಾರೆ. ಮಕ್ಕಳು ವೃದ್ಧರ ಪರಿಸ್ಥಿತಿ ಗಮನಿಸಿದರೆ ಬೇಸರವಾಗುತ್ತದೆ. ಬಡಾವಣೆಯ ಅಭಿವೃದ್ಧಿಗೆ ಪುರಸಭೆ ಕ್ರಮ ವಹಿಸಲು ಮುಂದಾಗಬೇಕು’ ಎನ್ನುತ್ತಾರೆ ಚಂದ್ರಶೇಖರ್‌ ಕೆ.ಎಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.