ರಂಭಾಪುರಿ ಪೀಠ (ಬಾಳೆಹೊನ್ನೂರು): ‘ಜೀವನಾಧಾರಕ್ಕೆ ಅನ್ನ, ನೀರು, ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಉತ್ತಮ ಚಿಂತನೆಗಳು ಬದುಕಿನ ಶ್ರೇಯಸ್ಸಿಗೆ ಮೂಲ. ಸತ್ಯ ಮತ್ತು ಸಂಸ್ಕೃತಿ ಉಳಿದು–ಬೆಳೆದು ಬರಬೇಕಾಗಿದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಪುರಾಣ ಪ್ರವಚನ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬದುಕು ಸುಖ–ದುಃಖ, ನೋವು–ನಲಿವು, ಮಾನ-ಅಪಮಾನ, ಜಯ–ಅಪಜಯ ಮೊದಲಾದ ದ್ವಂದ್ವಗಳಿಂದ ಕೂಡಿದೆ. ಈ ಸಂಗತಿ ಯಾರಿಗೆ ಗೊತ್ತಿದೆಯೋ ಅವರು ಜೀವನದಲ್ಲಿ ಏನೆಲ್ಲ ಕಷ್ಟ ಬಂದರೂ ಅವುಗಳಿಗೆ ಎದೆಗುಂದಬಾರದು. ಸುಖದ ಬದುಕಿಗೆ ಪ್ರಯತ್ನ ಮತ್ತು ಸಾಧನೆ ಬೇಕು. ಬದುಕು ವಿಕಾಸಗೊಳ್ಳಲು ಅಧ್ಯಾತ್ಮದ ಅರಿವು ಮುಖ್ಯ. ಬಿಸಿಲಿನಿಂದ ಬಳಲಿ ಬಂದ ಜನರಿಗೆ ಮರ ನೆರಳು ನೀಡುತ್ತದೆ. ಕಲ್ಲು ಹೊಡಿಸಿಕೊಂಡ ರುಚಿಯಾದ ಹಣ್ಣು ಕೊಡುತ್ತದೆ. ನಿಂತ ನೆಲ ಮತ್ತು ನೆರಳು ಕೊಟ್ಟ ಮರವನ್ನೇ ನಾವಿಂದು ಕತ್ತರಿಸುತ್ತಿದ್ದೇವೆ. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಡಿ ಸತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ಸಂಕಲ್ಪ ಎಲ್ಲರದೂ ಆಗಬೇಕು’ ಎಂದರು.
ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ‘ಸುಂದರವಾದ ಉಡುಪು ನಮ್ಮ ವ್ಯಕ್ತಿತ್ವವನ್ನು ಮೆರೆಸಬಹುದು. ಆದರೆ, ಸುಂದರವಾದ ಗುಣ ನಮ್ಮ ಬದುಕನ್ನೇ ಬದಲಾಯಿಸುತ್ತದೆ. ಸುಖ–ದುಃಖ ಶಾಶ್ವತವಲ್ಲ. ಅವೆರಡನ್ನು ಸಮಾನವಾಗಿ ಸ್ವೀಕರಿಸಿ, ಬಾಳಿದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ವಿಚಾರಧಾರೆ ಬದುಕಿ ಬಾಳುವ ಜನಾಂಗಕ್ಕೆ ದಾರಿದೀಪ’ ಎಂದರು.
ಯಡಿಯೂರು ರೇಣುಕ ಶಿವಾಚಾರ್ಯ, ದೊಡ್ಡಗುಣಿ ರೇವಣಸಿದ್ಧೇಶ್ವರ ಶಿವಾಚಾರ್ಯ, ತಾವರೆಕೆರೆ ಅಭಿನವ ಸಿದ್ಧಲಿಂಗ ಶಿವಾಚಾರ್ಯ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ, ಹುಡುಗಿಯ ಸೋಮೇಶ್ವರ ಶಿವಾಚಾರ್ಯ, ಉಟಗಿ ಶಿವಪ್ರಸಾದ ದೇವರು, ನೆಗಳೂರು ಗುರುಶಾಂತೇಶ್ವರ ಸ್ವಾಮೀಜಿ, ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ, ಎಸ್.ಜೆ.ಆರ್. ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರಭುದೇವ ಕಲ್ಮಠ, ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ, ಶಿವಮೊಗ್ಗದ ರಾಜು, ಗುರುಕುಲದ ಕುಲಪತಿ ಸಿದ್ಧಲಿಂಗ ಶಾಸ್ತ್ರೀ, ಶಿಕ್ಷಕ ವೀರೇಶ ಕುಲಕರ್ಣಿ ಭಾಗವಹಿಸಿದ್ದರು.
ರಂಭಾಪುರಿಸ್ವಾಮೀಜಿ ಅವರು, ರೇಣುಕಾಚಾರ್ಯರಿಗೆ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿಗೆ ನೂರೆಂಟು ಕಲಶೋಧಕದಿಂದ ಅಭಿಷೇಕ ನೆರವೇರಿಸಿ ನಂತರ ಜನ ಕಲ್ಯಾಣಕ್ಕಾಗಿ ಇಷ್ಟಲಿಂಗ ಮಹಾಪೂಜೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.