ADVERTISEMENT

ಚಿಕ್ಕಮಗಳೂರು | ಮೂರು ಪಕ್ಷಗಳನ್ನು ತಿರಸ್ಕರಿಸಿ: ರವಿಕೃಷ್ಣ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 14:20 IST
Last Updated 1 ಮಾರ್ಚ್ 2024, 14:20 IST
ಕೆಆರ್‌ಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಮಾತನಾಡಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್, ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ, ಎಸ್. ಮಂಜುನಾಥ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ವಿ.ಬಿ. ಕೃಷ್ಣ, ಬಿ.ಜಿ.ಕುಂಬಾರ್, ನಂದರೆಡ್ಡಿ ಭಾಗವಹಿಸಿದ್ದರು.
ಕೆಆರ್‌ಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಮಾತನಾಡಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್, ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ, ಎಸ್. ಮಂಜುನಾಥ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ವಿ.ಬಿ. ಕೃಷ್ಣ, ಬಿ.ಜಿ.ಕುಂಬಾರ್, ನಂದರೆಡ್ಡಿ ಭಾಗವಹಿಸಿದ್ದರು.   

ಚಿಕ್ಕಮಗಳೂರು: ‘ಭ್ರಷ್ಟಾಚಾರ, ಅಪ್ರಾಮಾಣಿಕತೆ‌, ಸ್ವಜನ ಪಕ್ಷಪಾತ, ಅನೈತಿಕ ನಡವಳಿಕೆ, ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತಿರಸ್ಕರಿಸಬೇಕು’ ಎಂದು ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಮನವಿ ಮಾಡಿದರು.

‘ಕರ್ನಾಟಕಕ್ಕಾಗಿ ನಾವು’ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದಾದ್ಯಂತ ಕೆಆರ್‌ಎಸ್‌ ಪಕ್ಷ ನಡೆಸುತ್ತಿರುವ ಬೈಕ್ ರ್‍ಯಾಲಿ ಶುಕ್ರವಾರ ನಗರ ತಲುಪಿತು. ಆಜಾದ್ ಪಾರ್ಕ್ ವೃತ್ತದಲ್ಲಿ ಸಭೆಯನ್ನು ಉದ್ದೇಶಿಸಿದ ಅವರು ಮಾತನಾಡಿದರು.

ಭ್ರಷ್ಟಾಚಾರದ ವಿರುದ್ಧ ಅಣ್ಣ ಹಾಜಾರೆ, ಎಸ್.ಆರ್.ಹಿರೇಮಠ, ಎಚ್.ಎಸ್.ದೊರೆಸ್ವಾಮಿ ಸೇರಿ ಹಲವರು ಹೋರಾಟ ನಡೆಸಿದ್ದರ ಫಲವಾಗಿ ಸಿದ್ದರಾಮಯ್ಯ ಮೊದಲ ಬಾರಿಗೆ 2013ರಲ್ಲಿ ಮುಖ್ಯಮಂತ್ರಿಯಾದರು. ಬಳಿಕ ಅವರು ಲೋಕಾಯುಕ್ತ ಸಂಸ್ಥೆಯನ್ನೇ ನಾಶ ಮಾಡಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ವಂಶ ರಾಜಕಾರಣ ಇರಲಿಲ್ಲ. ಈಗ ಮೋಟಮ್ಮ ಅವರು ತಮ್ಮ ಮಗಳನ್ನು ಶಾಸಕಿಯನ್ನಾಗಿ ಮಾಡುವ ಮೂಲಕ ವಂಶ ರಾಜಕಾರಣವನ್ನು ಜಿಲ್ಲೆಗೆ ತಂದಿದ್ದಾರೆ ಎಂದರು.

ADVERTISEMENT

‘ಮೊದಲ ಬಾರಿಗೆ ಸಿ.ಟಿ.ರವಿ ಶಾಸಕರಾದಾಗ ಪ್ರಾಮಾಣಿಕ, ದೇಶಪ್ರೇಮಿ ಎಂದು ಭಾವಿಸಿದ್ದೆವು. ಜನಸಾಮಾನ್ಯರಿಗೆ ಅನುಕೂಲ ಆಗುವ ತಾಲ್ಲೂಕು ಕಚೇರಿ ಕಟ್ಟಡ 10 ವರ್ಷವಾದರೂ ಪೂರ್ಣವಾಗಲಿಲ್ಲ. ಇಲ್ಲಿಗೆ ಸಮೀಪದಲ್ಲೇ ಇರುವ ಸಿ.ಟಿ.ರವಿ ಅವರ ಬಂಗಲೆ ಬಹುಬೇಗನೆ ಎದ್ದು ನಿಂತಿತ್ತು. ಆಗ ಅವರು ಎಷ್ಟರ ಮಟ್ಟಿನ ಪ್ರಮಾಣಿಕ ಎಂಬುದು ತಿಳಿಯಿತು’ ಎಂದು ಟೀಕಿಸಿದರು.

ಕೆಆರ್‌ಎಸ್‌ ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಮಾತನಾಡಿ, ‘ಭ್ರಷ್ಟಾಚಾರ, ಸ್ವಜನಪಕ್ಷಪಾತದೊಂದಿಗೆ ನಿರಂತರ ದ್ರೋಹ ಮಾಡುತ್ತಿರುವ ಮೂರು ‌ಪಕ್ಷಗಳನ್ನು ಜನ ತಿರಸ್ಕರಿಸಬೇಕು. ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕೆಆರ್‌ಎಸ್ ಬೆಂಬಲಿಸಬೇಕು. ಈ ಕುರಿತು ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಬೈಕ್ ರ್‍ಯಾಲಿ ನಡೆಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.