ADVERTISEMENT

ಕಿರುಗುಂದ ಗ್ರಾ.ಪಂ: ಅನುದಾನ ಒದಗಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 12:50 IST
Last Updated 18 ಜೂನ್ 2025, 12:50 IST
ಮೂಡಿಗೆರೆ ತಾಲ್ಲೂಕಿನ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಶಾಸಕಿ ನಯನಾ ಮೋಟಮ್ಮಗೆ ಮನವಿ ಸಲ್ಲಿಸಲಾಯಿತು
ಮೂಡಿಗೆರೆ ತಾಲ್ಲೂಕಿನ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಶಾಸಕಿ ನಯನಾ ಮೋಟಮ್ಮಗೆ ಮನವಿ ಸಲ್ಲಿಸಲಾಯಿತು   

ಮೂಡಿಗೆರೆ: ಕಿರುಗುಂದ ಗ್ರಾ.ಪಂ. ಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಮುಂದುವರೆಸಲು ಅನುದಾನ ಒದಗಿಸುವಂತೆ ಒತ್ತಾಯಿಸಿ ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳ ನೇತೃತ್ವದಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಿರುಗುಂದ ಗ್ರಾ.ಪಂ. ಅಧ್ಯಕ್ಷೆ ಸ್ವಾತಿಶ್ರೀ, ‘ಗ್ರಾ.ಪಂ. ಕಚೇರಿಯ ಹಳೇ ಕಟ್ಟಡ ಚಿಕ್ಕದಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ನರೇಗಾ ಯೋಜನೆಯ ₹30 ಲಕ್ಷ, 15ನೇ ಹಣಕಾಸು ಯೋಜನೆಯ ₹5 ಲಕ್ಷ ಅನುದಾನ ಬಳಸಿ ಅರ್ಧ ಕಾಮಗಾರಿ ನಡೆಸಲಾಗಿದೆ. ಕಟ್ಟಡದ ಪೂರ್ಣ ಕಾಮಗಾರಿಗೆ ಇನ್ನೂ ₹20 ಲಕ್ಷ ಅನುದಾನದ ಅಗತ್ಯವಿದೆ. ಶಾಸಕರ ನಿಧಿಯಿಂದ ₹10 ಲಕ್ಷ ಅನುದಾನ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಯು.ಎಚ್. ರಾಜಶೇಖರ್ ಮಾತನಾಡಿ, ಕಿರುಗುಂದ ಗ್ರಾಮದಿಂದ ಉದುಸೆ ಗ್ರಾಮದವರೆಗೆ ಸಾಗುವ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದೆ. 1997ರಲ್ಲಿ ಈ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿತ್ತು. ಆನಂತರ ರಸ್ತೆ ನಿರ್ವಹಣೆ ಅಥವಾ ಅಭಿವೃದ್ಧಿಯಾಗಿಲ್ಲ. ರಸ್ತೆ ಪಕ್ಕದಲ್ಲಿ ಚರಂಡಿಯಿಲ್ಲದೆ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಉದುಸೆ ಗ್ರಾಮಕ್ಕೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕೆಎಸ್ಆರ್‌ಟಿಸಿ ಬಸ್ ಸಂಚಾರವಿದ್ದು, ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಬಸ್ ಹಾಗೂ ಇತರೆ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಆದ್ದರಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ‘ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 49 ಗ್ರಾಮ ಪಂಚಾಯಿತಿಗಳಿವೆ. ಕಚೇರಿಗೆ ಸುಸಜ್ಜಿತವಾದ ಕಟ್ಟಡಗಳಿಲ್ಲದ ಕಡೆ ನರೇಗಾ ಯೋಜನೆ ಸೇರಿದಂತೆ ಇತರೆ ಅನುದಾನ ಬಳಸಿ ಕಟ್ಟಡ ನಿರ್ಮಿಸಲಾಗುತ್ತಿದೆ. ಬೆಟ್ಟಗೆರೆ, ಬಾಳೂರು, ಕೂವೆ ಗ್ರಾ.ಪಂ. ಕಚೇರಿ ಕಟ್ಟಡಕ್ಕೆ ಶಾಸಕರ ನಿಧಿಯಿಂದ ತಲಾ ₹5 ಲಕ್ಷ ಅನುದಾನ ನೀಡಲಾಗಿದೆ. ಸದ್ಯದಲ್ಲೆ ಶಾಸಕರ ನಿಧಿ ಬಿಡುಗಡೆಯಾಗಲಿದೆ. ನಂತರ ಕ್ರಿಯಾ ಯೋಜನೆ ತಯಾರಿಸಿ ಕಿರುಗುಂದ ಗ್ರಾ.ಪಂ. ಕಟ್ಟಡಕ್ಕೆ ಅನುದಾನ ಒದಗಿಸಲಾಗುವುದು’ ಎಂದು ತಿಳಿಸಿದರು.

ಗ್ರಾ.ಪಂ. ಉಪಾಧ್ಯಕ್ಷ ಪೂರ್ಣೇಶ್, ಸದಸ್ಯರಾದ ಕೆ.ಆರ್.ದಿನೇಶ್, ಚಂದ್ರಿಕಾ, ಕಾರ್ಯದರ್ಶಿ ನಂಜಯ್ಯ, ಕಾಂಗ್ರೆಸ್‌ ಗೋಣಿಬೀಡು ಹೋಬಳಿ ಅಧ್ಯಕ್ಷ ಸುಬ್ರಾಯ ಗೌಡ, ಮಾಜಿ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ಚಂದ್ರಶೇಖರ್, ಕಿರುಗುಂದ ಅಬ್ಬಾಸ್, ಕೆ.ಆರ್. ಲೋಕೇಶ್, ಕೆ.ಬಿ. ಮಂಜುನಾಥ್, ಸಿ.ಎಲ್.ಪೂರ್ಣೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.