ಚಿಕ್ಕಮಗಳೂರು: ಹೆಸರೇ ಇಲ್ಲದ ಜನವಸತಿಗಳನ್ನು ಕಂದಾಯ ಗ್ರಾಮವನ್ನಾಗಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಚುರುಕುಗೊಂಡಿದ್ದು, 2300ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ನೀಡಲು ಜಿಲ್ಲಾಡಳಿತ ಸಜ್ಜಾಗಿದೆ.
ಸರ್ಕಾರಿ ಜಾಗ ಮತ್ತು ಖಾಸಗಿ ಜಾಗಗಳಲ್ಲಿ ಜನವಸತಿಗಳು ಹಲವು ವರ್ಷಗಳಿಂದ ತಲೆ ಎತ್ತಿವೆ. ಈ ಜನ ವಸತಿಗಳ ನಿವಾಸಿಗಳು ಹಕ್ಕುಪತ್ರಕ್ಕಾಗಿ ಹಲವು ವರ್ಷಗಳಿಂದ ಕಾದಿದ್ದಾರೆ. ಈ ಜನವಸತಿಗಳನ್ನು ಅಧಿಕೃತವಾಗಿ ಗ್ರಾಮಗಳನ್ನಾಗಿಸುವ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ತೀವ್ರಗೊಳಿಸಿದೆ.
ಕಡೂರು, ತರೀಕೆರೆ, ಅಜ್ಜಂಪುರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಟ್ಟು 117 ಜನವಸತಿಗಳನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕಿದೆ. ಈ ಪೈಕಿ ಕಡೂರು ತಾಲ್ಲೂಕಿನಲ್ಲೇ ಅತೀ ಹೆಚ್ಚು 69 ಜನವಸತಿಗಳಿವೆ. ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯ 100 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದರೆ, 69 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಅಂತಿಮ ಅಧಿಸೂಚನೆಗೆ ಕಳುಹಿಸಿರುವ 26 ಗ್ರಾಮಗಳ ಕಡತ ಸರ್ಕಾರದ ಮುಂದೆ ಅಂತಿಮ ಅಧಿಸೂಚನೆಗೆ ಬಾಕಿ ಇವೆ.
ಜಿಲ್ಲೆಯಲ್ಲಿ ಒಟ್ಟು 5 ಸಾವಿರಕ್ಕೂ ಹೆಚ್ಚು ವಸತಿಗಳಿಗೆ ಹಕ್ಕುಪತ್ರ ನೀಡುವ ಅಗತ್ಯವಿದ್ದು, ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 69 ಗ್ರಾಮಗಳ 2,342 ವಸತಿಗಳಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆದಿದೆ. ಹಲವು ಹಂತದ ಪ್ರಕ್ರಿಯೆಗಳು ನಡೆಯುತ್ತಿವೆ.
956 ಹಕ್ಕುಪತ್ರಗಳನ್ನು ಫಲಾನುಭವಿಗಳ ಹೆಸರಿಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದ್ದು, 892 ಫಲಾನುಭವಿಗಳ ಹೆಸರಿಗೆ ಇ–ಸ್ವತ್ತು ಕೂಡ ಆಗಿದೆ. ಹಂತ–ಹಂತವಾಗಿ ಈ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ 2,342 ಜನರ ಮನೆಗಳನ್ನೂ ಇ–ಸ್ವತ್ತು ಮಾಡಿಸಿ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಹಕ್ಕುಪತ್ರ ಪಡೆದು ತಮ್ಮ ಹೆಸರಿಗೆ ಇ–ಸ್ವತ್ತು ಪಡೆದುಕೊಂಡರೆ ಗ್ರಾಮಠಾಣವಾಗಲಿದ್ದು, ಬಳಿಕ ಆಯ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಸ್ವತ್ತಿನ ನಿರ್ವಹಣೆ, ಕಂದಾಯ ವಸೂಲಿ ಮಾಡಲಿವೆ. ಹಕ್ಕುಪತ್ರ ಪಡೆದರೆ ನಿವಾಸಿಗಳಿಗೆ ಅಧಿಕೃತತೆ ಸಿಗಲಿದೆ. ಮನೆ ತಮ್ಮದೇ ಜಾಗದಲ್ಲಿ ನಿರ್ಮಾಣವಾಗಿದೆ ಎಂಬ ನೆಮ್ಮದಿ ಸಿಗಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.