ADVERTISEMENT

ರತ್ನಗಿರಿ ರಸ್ತೆ; ಪಾರ್ಕಿಂಗ್‌ ಬವಣೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 15:58 IST
Last Updated 28 ಅಕ್ಟೋಬರ್ 2018, 15:58 IST
ರತ್ನಗಿರಿ ರಸ್ತೆ ಬದಿಯ ಪಾರ್ಕಿಂಗ್‌ ಜಾಗದಲ್ಲಿ ವಾಹನ ಸಾಲು
ರತ್ನಗಿರಿ ರಸ್ತೆ ಬದಿಯ ಪಾರ್ಕಿಂಗ್‌ ಜಾಗದಲ್ಲಿ ವಾಹನ ಸಾಲು   

ಚಿಕ್ಕಮಗಳೂರು: ನಗರದ ಪ್ರಮುಖ ರಸ್ತೆಗಳಲ್ಲೊಂದಾದ ರತ್ನಗಿರಿ ರಸ್ತೆಯಲ್ಲಿ ಪಾರ್ಕಿಂಗ್‌ ಬಿಕ್ಕಟ್ಟು ದಿನೇದಿನೇ ಬಿಗಡಾಯಿಸುತ್ತಿದೆ. ಸಂಚಾರ ದಟ್ಟಣೆಯ ಈ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪೇಚಾಡಬೇಕಿದೆ.

ಗಿರಿಶ್ರೇಣಿ ಸಂಪರ್ಕದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಜಾಸ್ತಿ ಇದೆ. ಲಾಡ್ಜ್‌, ಹೋಟೆಲು, ಕಲ್ಯಾಣ ಮಂಟಪ, ಷೋ ರೂಂಗಳು, ಬ್ಯಾಂಕು, ಸರ್ಕಾರಿ ಕಚೇರಿ, ಶಾಲೆ, ಕಾಲೇಜು, ಆಸ್ಪತ್ರೆಗಳು, ವಾಣಿಜ್ಯ ಮಳಿಗೆಗಳು ಹೆಚ್ಚು ಇರುವ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಮತ್ತು ವಾಹನ ನಿಲುಗಡೆ ನಿರ್ವಹಣೆಯು ಪೊಲೀಸ್‌ ಇಲಾಖೆ ಮತ್ತು ನಗರಸಭೆಗೆ ಸವಾಲಾಗಿ ಪರಿಣಮಿಸಿದೆ.

‘ನಗರಸಭೆಯಲ್ಲಿ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಈಚೆಗೆ ಸಭೆ ನಡೆದಿತ್ತು. ಪಾರ್ಕಿಂಗ್‌ಗೆ ಜಾಗ ಕಲ್ಪಿಸದ ಹೊಸ ವಾಣಿಜ್ಯ ಕಟ್ಟಡಗಳಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಬಾರದು ಎಂದು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಪಾರ್ಕಿಂಗ್‌ ಸೌಲಭ್ಯ ಇಲ್ಲದಿದ್ದರೂ ಈ ರಸ್ತೆಯಲ್ಲಿ ತಲೆಎತ್ತಿರುವ ಹೊಸ ಕಟ್ಟಡಗಳಲ್ಲಿ ಚಟುವಟಿಕೆ (ವ್ಯಾಪಾರ, ವಹಿವಾಟು) ಶುರುವಾಗಿವೆ. ಇದಕ್ಕೆ ಕೆಲ ಸದಸ್ಯರ ಕುಮ್ಮಕ್ಕು ಇದ್ದಂತಿದೆ. ನಿರ್ಣಯಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ.’ ಎಂದು ನಗರಸಭೆ ಸದಸ್ಯರೊಬ್ಬರು ಆರೋಪಿಸುತ್ತಾರೆ.

ADVERTISEMENT

ಕೆಲವು ಹೋಟೆಲ್‌, ಲಾಡ್ಜ್‌, ಕಚೇರಿ, ವಾಣಿಜ್ಯ ಮಳಿಗೆಗಳಲ್ಲಿ ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗ ಕಲ್ಪಿಸಿಲ್ಲ. ಕಲ್ಯಾಣ ಮಂಟಪಗಳಲ್ಲೂ ಪಾರ್ಕಿಂಗ್‌ಗೆ ಸಾಕಷ್ಟು ಜಾಗ ಇಲ್ಲ, ಅಕ್ಕಪಕ್ಕದಲ್ಲೂ ವ್ಯವಸ್ಥೆ ಇಲ್ಲ. ವಾಹನಗಳನ್ನು ರಸ್ತೆ ಬದಿಯೇ ನಿಲ್ಲಿಸಬೇಕಾದ ಸ್ಥಿತಿ ಇದೆ. ಇಕ್ಕೆಲ್ಲಗಳಲ್ಲಿಯೂ ವಾಹನಗಳ ಸಾಲು, ಸಂಚಾರ ದಟ್ಟಣೆ ಭರಾಟೆಯಿಂದ ರಸ್ತೆ ಇಕ್ಕಟ್ಟಾಗಿದೆ.

‘ಈ ರಸ್ತೆಯು ಪ್ರವಾಸಿತಾಣಗಳು ಮತ್ತು ನಗರದ ಪ್ರಮುಖ ರಸ್ತೆಗಳ ಸಂಪರ್ಕ ಕೊಂಡಿಯಾಗಿದೆ. ಇಂದಿರಾಗಾಂಧಿ (ಐಜಿ) ರಸ್ತೆಗೆ(ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಬಳಿ) ಕೂಡುವ ವೃತ್ತ ಹಾಗೂ ಟೌನ್‌ ಕ್ಯಾಂಟೀನ್‌ ಬಳಿಯ ವೃತ್ತಗಳಲ್ಲಿ ಅಪಘಾತ ಸಂಭವ ಸಾಧ್ಯತೆಗಳೇ ಹೆಚ್ಚು. ಕಲ್ಯಾಣಮಂಟಪಗಳಲ್ಲಿ ಸಾಮಾನ್ಯವಾಗಿ ವಾರದಲ್ಲಿ ನಾಲ್ಕೈದು ದಿನ ಸಮಾರಂಭಗಳು ಇದ್ದೇ ಇರುತ್ತವೆ. ಪಾರ್ಕಿಂಗ್‌ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸಪಡಬೇಕು’ ಎಂದು ಟ್ರಾಫಿಕ್‌ ಪೊಲೀಸರೊಬ್ಬರು ಹೇಳುತ್ತಾರೆ.

ಕಾಫಿನಾಡಿಗೆ ಪ್ರವಾಸಿಗರ ದಾಂಗುಡಿ ಹೆಚ್ಚುತ್ತಿದೆ. ವಾರಾಂತ್ಯದಲ್ಲಂತೂ ಇಲ್ಲಿನ ಹೋಟೆಲುಗಳು, ಲಾಡ್ಜ್‌ಗಳು, ತಂಗುಮನೆಗಳು ಪ್ರವಾಸಿಗರಿಂದ ಗಿಜಿಗುಡುತ್ತವೆ. ಗಿರಿಶ್ರೇಣಿ ಮಾರ್ಗದ ಈ ರಸ್ತೆಯಲ್ಲಿ ಪ್ರವಾಸಿ ವಾಹನಗಳ ದಟ್ಟಣೆ ಹೆಚ್ಚು ಇರುತ್ತದೆ.

ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು, ವಾಹನ ತೆಗೆಯಲು ತಿಣುಕಾಡುವಂತೆ ಒತ್ತೊತ್ತಾಗಿ ನಿಲ್ಲಿಸುವುದು, ಸಂಚಾರಕ್ಕೆ ತೊಡಕಾಗುವಂತೆ ವಾಹನ ನಿಲ್ಲಿಸುವುದು ಪಡಿಪಾಟಲಿಗೆ ಎಡೆಮಾಡಿದೆ.

‘ಕೆಲ ಹೊಸಕಟ್ಟಡಗಳವರು ಕೋರ್ಟ್‌ ಆದೇಶ ಪಡೆದು ಕಾರ್ಯಚಟುವಟಿಕೆ ಶುರು ಮಾಡಿದ್ದಾರೆ. ಕಟ್ಟಡ ನಕ್ಷೆಯಲ್ಲಿ ಪಾರ್ಕಿಂಗ್‌ಗೆ ಜಾಗ ತೋರಿಸಿ, ನಿರ್ಮಾಣ ಹಂತದಲ್ಲಿ ಕೈಬಿಡುತ್ತಾರೆ. ಕೆಲವರು ಮೂರು ಹಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆದು

ನಾಲ್ಕು ಹಂತಸ್ತು (ನೆಲ ಮಳಿಗೆ+ಮೂರು ಹಂತಸ್ತು) ನಿರ್ಮಿಸಿದ್ದಾರೆ. ಸಮಸ್ಯೆ ಬಿಗಡಾಯಿಸದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ’ ಎಂದು ವಾರ್ಡ್‌ ಸದಸ್ಯ ರಾಜಶೇಖರ್‌ ಹೇಳುತ್ತಾರೆ.

‘ಲಾಡ್ಜ್‌, ಹೋಟೆಲ್, ವಾಣಿಜ್ಯ ಮಳಿಗೆಗಳ ಮಾಲೀಕರ ಸಭೆ ಮಾಡಿದ್ದೇವೆ. ಮಳಿಗೆ, ಕಟ್ಟಡಗಳಲ್ಲಿ ಪಾರ್ಕಿಂಗ್‌ ಜಾಗ ಖುಲ್ಲಾಗೊಳಿಸಬೇಕು, ಪಾರ್ಕಿಂಗ್‌ಗೆ ಕಡ್ಡಾಯವಾಗಿ ವ್ಯವಸ್ಥೆ ಮಾಡಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳುತ್ತಾರೆ.

‘ಎಷ್ಟು ಬಾರಿ ಹೇಳಿದರೂ ಕೆಲವರು ಬಗ್ಗುತ್ತಿಲ್ಲ. ಹೀಗಾಗಿ, ಪಾವತಿ ವಾಹನ ನಿಲುಗಡೆ ( ಪೇ ಅಂಡ್‌ ಪಾರ್ಕ್‌) ವ್ಯವಸ್ಥೆ ಜಾರಿಗೊಳಿಸಲು ಯೋಚಿಸಲಾಗುತ್ತಿದೆ. ರಸ್ತೆ ಬದಿ ವಾಹನ ನಿಲುಗಡೆಗೆ ಗಂಟೆ ಲೆಕ್ಕದಲ್ಲಿ ಶುಲ್ಕ ನಿಗದಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಟೆಂಡರ್‌ ಆಹ್ವಾನಿಸಲಾಗುವುದು’ ಎಂದು ರಾಜಶೇಖರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.