ADVERTISEMENT

ಚಿಕ್ಕಮಗಳೂರು: ರಸ್ತೆ ಅಧ್ವಾನ; ಬಿದ್ದೀರಾ ಜೋಕೆ

ಬಿ.ಜೆ.ಧನ್ಯಪ್ರಸಾದ್
Published 30 ಆಗಸ್ಟ್ 2021, 14:25 IST
Last Updated 30 ಆಗಸ್ಟ್ 2021, 14:25 IST
ಚಿಕ್ಕಮಗಳೂರಿನ ದೀಪಾ ನರ್ಸಿಂಗ್ ಹೋಂ ಮುಂಭಾಗದ ಬೈಪಾಸ್‌ ಕಡೆಗಿನ ರಸ್ತೆ ದುಃಸ್ಥಿತಿ.
ಚಿಕ್ಕಮಗಳೂರಿನ ದೀಪಾ ನರ್ಸಿಂಗ್ ಹೋಂ ಮುಂಭಾಗದ ಬೈಪಾಸ್‌ ಕಡೆಗಿನ ರಸ್ತೆ ದುಃಸ್ಥಿತಿ.   

ಚಿಕ್ಕಮಗಳೂರು: ನಗರದ ದೀಪಾ ನರ್ಸಿಂಗ್ ಹೋಂ ಮುಂಭಾಗದ ಬೈಪಾಸ್‌ ಕಡೆಗಿನ ರಸ್ತೆ, ಅರಣ್ಯ ಇಲಾಖೆ ಕಚೇರಿ ಮುಂಭಾಗದ ರಸ್ತೆ ಹದಗೆಟ್ಟಿದ್ದು, ಸಂಚಾರ ಪಡಿಪಟಾಲಾಗಿದೆ.

ದೀಪಾ ನರ್ಸಿಂಗ್‌ ಹೋಂ ಮುಂಭಾಗದಿಂದ ಬೈಪಾಸ್‌ ಮಾರ್ಗ ಸಂಪರ್ಕ ರಸ್ತೆಯು ಲಕ್ಷೀಶ ನಗರದಿಂದ ಸ್ವಲ್ಪಮುಂದೆ ನಾಲ್ಕು ಕಡೆ ಗುಂಡಿಮಯವಾಗಿದೆ. ಮಳೆಯಾದಾಗ ಗುಂಡಿಗಳಲ್ಲಿ ನೀರು ತುಂಬಿಕೊಂಡು ಈ ಭಾಗ ಕೆಸರಿನ ರಾಡಿಯಾಗುತ್ತದೆ. ‘ಬಿದ್ದೀರಾ ಜೋಕೆ...’ ಎಂಬ ಎಚ್ಚರಿಕೆಯಿಂದಲೇ ಓಡಾಡಬೇಕಾದ ಸ್ಥಿತಿ ಇದೆ.

‘ದ್ವಿಚಕ್ರವಾಹನ ಸವಾರರು ಗುಂಡಿ ತಪ್ಪಿಸುವ ಭರದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿರುವ ಬಹಳಷ್ಟು ಉದಾಹರಣೆಗಳಿವೆ. ಈಚೆಗೆ ಆಟೊ ರಿಕ್ಷಾವೊಂದು ಪಲ್ಟಿಯಾಗಿ ಇಬ್ಬರು ಗಾಯಗೊಂಡಿದ್ದರು. ನಗರಸಭೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ರಿಪೇರಿಗೆ ಕ್ರಮ ವಹಿಸಿಲ್ಲ’ ಎಂದು ಲಕ್ಷ್ಮೀಶನಗರದ ನಿವಾಸಿ ಸರಸ್ವತಿ ದೂರಿದರು.

ADVERTISEMENT

ಅರಣ್ಯ ಇಲಾಖೆ ಕಚೇರಿ ಮುಂಭಾಗದ (ಬೋಳರಾಮೇಶ್ವರ ದೇಗುಲ ಬಳಿ) ರಸ್ತೆಯನ್ನು ಒಳಚರಂಡಿ ಕಾಮಗಾರಿಗೆ ಅಗೆದು ಪೈಪು ಅಳವಡಿಸಿ ಹಾಳುಗೆಡವಲಾಗಿದೆ. ಅಗೆದಿದ್ದ ಕಡೆಗಳಲ್ಲಿ ತಗ್ಗಾಗಿದೆ.
ಬೇಲೂರು ಮಾರ್ಗದ ಕಡೆಗಿನ ಈ ರಸ್ತೆ ತಿರುವಿನಲ್ಲಿ ಅಗೆದು ಅಧ್ವಾನ ಮಾಡಲಾಗಿದೆ. ಸಂಚಾರ ತ್ರಾಸವಾಗಿ ಪರಿಣಮಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು, ಟಿಪ್ಪರ್‌ ಲಾರಿಗಳು ಸಹಿತ ಬಹಳಷ್ಟು ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತವೆ.

‘ಒಳಚರಂಡಿ ಕಾಮಗಾರಿಗೆ ಅಗೆದಿದ್ದರು, ಪೈಪು ಅಳವಡಿಸಿದ ನಂತರ ಮಣ್ಣು ಹಾಕಿ ಮುಚ್ಚಿದ್ದಾರೆ. ಡಾಂಬರು ಹಾಕಿಲ್ಲ, ಸರಿಯಾಗಿ ದುರಸ್ತಿ ಮಾಡಿಲ್ಲ. ಮೊಣಕಾಲುದ್ದ ಗುಂಡಿಯಾಗಿದೆ. ಈಚೆಗೆ ಜೀಪೊಂದು ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ರಾತ್ರಿ ವೇಳೆ ಗುಂಡಿ ಗೊತ್ತಾಗದೆ ದ್ವಿಚಕ್ರವಾಹನ ಸವಾರರು ಬಿದ್ದಿರುವ ಉದಾರಣೆಗಳು ಇವೆ’ ಎಂದು ಆಟೋ ಚಾಲಕ ಲೋಕೇಶ್‌ ಒತ್ತಾಯಿಸಿದರು.

‘ಕಾಮಗಾರಿಗೆ ರಸ್ತೆ ಅಗೆದಿದ್ದೆವು. ರಿಪೇರಿ ಬಾಬ್ತು ₹ 8.4 ಲಕ್ಷ ಹಣವನ್ನ ಲೋಕೋಪಯೋಗಿ ಇಲಾಖೆಗೆ ಸಂದಾಯ ಮಾಡಿದ್ದೇವೆ. ಅವರು ರಿಪೇರಿಗೆ ಕ್ರಮ ವಹಿಸಿಲ್ಲ’ ಎಂದು ಕುಡಿಯುವ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಚಿಕ್ಕಮಗಳೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಲ್ಲೇಶ್‌ ನಾಯಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.