ADVERTISEMENT

ಆಲ್ದೂರು: ರಸ್ತೆಗಾಗಿ ಕುಳುವಾಡಿ ಕಾಲೊನಿ ಜನರ ಮನವಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 5:26 IST
Last Updated 4 ಮಾರ್ಚ್ 2023, 5:26 IST
ಬೆಟ್ಟದ ಮಳಲಿ ಕುಳುವಾಡಿ ಕಾಲೊನಿಗೆ ಸಂಪರ್ಕ ರಸ್ತೆಗೆ ಗೇಟ್ ನಿರ್ಮಾಣ ಮಾಡಿರುವುದು
ಬೆಟ್ಟದ ಮಳಲಿ ಕುಳುವಾಡಿ ಕಾಲೊನಿಗೆ ಸಂಪರ್ಕ ರಸ್ತೆಗೆ ಗೇಟ್ ನಿರ್ಮಾಣ ಮಾಡಿರುವುದು   

ಆಲ್ದೂರು: ಸಮೀಪದ ಆವತಿ ಹೋಬಳಿಯ ಬಸರವಳ್ಳಿ ಪಂಚಾಯಿತಿ ವ್ಯಾಪ್ತಿಯ ಬೆಟ್ಟದ ಮಳಲಿಯ ಕುಳುವಾಡಿ ಗದ್ದೆ ಕಾಲೊನಿ ಜನರು ಸಂಪರ್ಕ ರಸ್ತೆಗೆ ಮನವಿ ಮಾಡಿದ್ದಾರೆ.

ಗ್ರಾಮದ ಸುನಿಲ್ ಮಾತನಾಡಿ, ‘45 ವರ್ಷಗಳಿಂದ ಇದೇ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದು, 20ಕ್ಕೂ ಹೆಚ್ಚು ಕುಟುಂಬಗಳು ಈ ರಸ್ತೆಯ ಮೂಲಕವೇ ಪಟ್ಟಣಕ್ಕೆ ಬರಬೇಕಾಗಿದೆ. ಈಗ ಬೇಸಿಗೆ ಸಮಯ ಗದ್ದೆಯ ಮೂಲಕ ನಡೆದಾಡುವ ಪ್ರಯತ್ನ ಮಾಡುತ್ತಿದ್ದೇವೆ, ಮಳೆಗಾಲದಲ್ಲಿ ತೀವ್ರ ತೊಂದರೆ ಉಂಟಾಗುತ್ತದೆ. ಇತ್ತೀಚೆಗೆ ಗ್ರಾಮದ ಇಬ್ಬರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಆಗದೆ, ಅವರು ಮೃತಪಟ್ಟಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡರು.

ಹಿಡುವಳಿದಾರರೊಬ್ಬರು ಒಂದು ವರ್ಷದ ಹಿಂದೆ ರಸ್ತೆಗೆ ಅಡ್ಡಲಾಗಿ ಗೇಟ್ ಅನ್ನು ನಿರ್ಮಿಸಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದರಿಂದ ತೀವ್ರ ತೊಂದರೆಯಾಗಿದೆ. ಈ ಸಮಸ್ಯೆಯ ಕುರಿತು ಸಾಕಷ್ಟು ಬಾರಿ ಶಾಸಕರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ರಸ್ತೆಯ ನಕಾಶೆಯಿದ್ದು, ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಶೀಘ್ರ ನ್ಯಾಯ ಒದಗಿಸಿ ಕೊಡಬೇಕೆಂದು ಗ್ರಾಮದ ಸುನಿಲ್, ರಘು ,ಅರುಣ್ ಒತ್ತಾಯಿಸಿದರು.

ADVERTISEMENT

ತಹಶೀಲ್ದಾರ್ ವಿನಾಯಕ ಸಾಗರ್ ಮಾತನಾಡಿ, ಕುಳುವಾಡಿ ಕಾಲೊನಿ ಜನರ ಸಮಸ್ಯೆ ಗಮನಕ್ಕೆ ಬಂದಿದ್ದು, ಸಂಪರ್ಕ ರಸ್ತೆಯ ನಕಾಶೆ ಮಾಹಿತಿ ಪಡೆಯಲಾಗಿದ್ದು, ರಸ್ತೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ನೀಡಲಾಗಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.