ಶೃಂಗೇರಿ: ಪೊಲೀಸ್ ಇಲಾಖೆ ಕೊಪ್ಪ ವಿಭಾಗ ವತಿಯಿಂದ ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಆಟೊರಿಕ್ಷಾ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಗೆ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಅಭಿಯಾನ ನಡೆಸಲಾಯಿತು.
ಶೃಂಗೇರಿ ಠಾಣಾಧಿಕಾರಿ ಬಿ.ಆರ್. ನಾಗರಾಜ್ ಮಾತನಾಡಿ, ಚಾಲಕರು ವಾಹನ ದಟ್ಟಣೆ ಇದ್ದ ಸಂದರ್ಭದಲ್ಲಿ ಓವರ್ ಟೇಕ್ ಮಾಡದೆ ನಿಧಾನವಾಗಿ ವಾಹನ ಚಲಾಯಿಸಬೇಕು. ರಸ್ತೆ ಇಕ್ಕೆಲಗಳಲ್ಲಿ ಸಂಚಾರ ನಿಯಮಗಳಿಗೆ ಪೂರಕವಾದ ಸಂಚಾರ ಚಿಹ್ನೆಗಳನ್ನು ಗಮನಿಸಬೇಕು. ಚಾಲಕರು ಪಾಲಿಸಿದರೆ ಪಾದಚಾರಿ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಸಾಧ್ಯವಾಗುತ್ತದೆ. ವಾಹನದಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ದ್ವಿಚಕ್ರ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಬೇಕು’ ಎಂದರು.
ಸಹಾಯಕ ಪೋಲಿಸ್ ಉಪನಿರೀಕ್ಷಕ ಮೋಹನ್ ಕುಮಾರ್ ಮಾತನಾಡಿ, ‘ಪ್ರತಿ ವರ್ಷ ವಾಹನ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ರಸ್ತೆ ನಿಯಮ ಪಾಲಿಸಿದಾಗ ಅಪಘಾತಗಳು ಕಡಿಮೆಯಾಗುತ್ತವೆ. ಜೀವ ಎಂಬುದು ಅಮೂಲ್ಯ. ನಮ್ಮ ಜೀವಕ್ಕೆ ನಾವೇ ರಕ್ಷಕರಾಗಿ ರಸ್ತೆಯಲ್ಲಿ ನಿಯಮಗಳನ್ನು ಪಾಲಿಸಬೇಕು. ತಾಲ್ಲೂಕಿನ ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಚಾಲಕರು ನಿಧಾನವಾಗಿ ವಾಹನ ಚಲಾಯಿಸಬೇಕು’ ಎಂದರು.
ಪೊಲೀಸ್ ಇಲಾಖೆಯ ಅಧಿಕಾರಿಗಳಾದ ರಾಜು, ಪ್ರವೀಣ್, ಗೃಹರಕ್ಷಕ ಸಿಬ್ಬಂದಿ ಸುಂದರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.