ಮೂಡಿಗೆರೆ: ತಾಲ್ಲೂಕಿನ ಹದಿಮೂರು ಸರ್ಕಾರಿ ಶಾಲೆಗಳ ಚಾವಣಿ ಸೋರುತ್ತಿದ್ದು, ಮಳೆ ಬಂದರೆ ಮಳೆ ನೀರಿನಿಂದ ರಕ್ಷಿಸಿಕೊಳ್ಳುವುದೇ ಕಷ್ಟವಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ 13 ಶಾಲೆಗಳ ಚಾವಣಿ ಹಾನಿಯಾಗಿ ಮಳೆನೀರು ಕೊಠಡಿಯೊಳಗೆ ಸೋರುತ್ತಿದ್ದು, 10 ಶಾಲೆಗಳ ಗೋಡೆಗಳು ಹಾನಿಯಾಗಿ ಕುಸಿಯುವ ಹಂತಕ್ಕೆ ತಲುಪಿವೆ. ಮಗ್ಗಲಮಕ್ಕಿ ಶಾಲೆಯ ಚಾವಣಿ ಶೀಟ್‌ಗಳು ಒಡೆದು ಹೋಗಿದ್ದು, ಮಳೆ ನೀರು ಕೊಠಡಿಯೊಳಗೆ ಸುರಿಯುತ್ತಿದೆ.
ಚಾವಣಿಗೆ ಹಾಕಿರುವ ಶೀಟ್‌ಗಳು ಹಳೆಯದಾಗಿದ್ದು, ನೀರು ಹೀರಿಕೊಳ್ಳುವ ಶೀಟ್‌ಗಳಿಂದ ನೀರು ಗೋಡೆ ಮೇಲೆ ಇಳಿದು ಕೊಠಡಿ ಒದ್ದೆಯಾಗುತ್ತಿದೆ. ತಾಲ್ಲೂಕಿನ ಬಿಳ್ಳೂರು, ಕಮ್ಮರಗೋಡು, ಹಾರ್ಮಕ್ಕಿ, ಹೊಸಕೆರೆ ಕಾಲೊನಿ, ಹಂತೂರು, ಗೌಡಳ್ಳಿ, ದಾರದಹಳ್ಳಿ, ಅಣಜೂರು, ಚಂದುವಳ್ಳಿ, ಬೆಟ್ಟದಮನೆ ಶಾಲೆಗಳ ಚಾವಣಿ ಸೋರುತ್ತಿದೆ. ಕನ್ನೆಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯೊಳಗೆ ಮಳೆ ನೀರು ನುಗ್ಗುತ್ತಿದ್ದು, ಕಲಿಕೋಪಕರಣಗಳನ್ನು ಸಂಗ್ರಹಿಸಿಡುವುದೇ ದುಸ್ತರವಾಗಿದೆ.
ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಹೊಳೆ ಸರ್ಕಾರಿ ಶಾಲೆಯ ಬಳಿ ಧರೆ ಕುಸಿತದ ಆತಂಕ ಕಾಡುತ್ತಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜೀವ ಭಯದಲ್ಲಿ ಶಾಲೆಯಲ್ಲಿರುವಂತಾಗಿದೆ. ಪಟ್ಟಣದ ಉರ್ದು ಶಾಲೆ ಹಾಗೂ ದುಂಡುಗ ಶಾಲೆಗಳಲ್ಲಿ ಗೋಡೆ ಬಿರುಕು ಬಿಟ್ಟಿದ್ದು, ಕುಸಿಯುವ ಹಂತಕ್ಕೆ ತಲುಪಿವೆ.
‘ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ಕಟ್ಟಡ ಮಂಜೂರಾಗಿಲ್ಲ. ಈ ಕಾರಣದಿಂದ ಹಲವಾರು ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡಗಳಲ್ಲೇ ಕಲಿಕಾ ಚಟುವಟಿಕೆ ನಡೆಯುವಂತಾಗಿದೆ. ಹತ್ತಾರು ವರ್ಷಗಳಿಂದ ಸುಣ್ಣ, ಬಣ್ಣ ಕಾಣದ ಶಾಲೆಗಳೂ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿವೆ. ಕುಸಿಯುವ ಹಂತದಲ್ಲಿರುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಇಷ್ಟ ಪಡುವುದಿಲ್ಲ. ಸರ್ಕಾರವು ಹಳೆ ಕಟ್ಟಡಗಳಿರುವ ಶಾಲೆಗಳಿಗೆ ಹೊಸ ಕೊಠಡಿಗಳನ್ನು ಮಂಜೂರು ಮಾಡಬೇಕು. ತುರ್ತಾಗಿ ದುರಸ್ತಿ ಮಾಡಬೇಕಾದ ಶಾಲೆಗಳನ್ನು ಆದ್ಯತೆಯ ಮೇಲೆ ಸರಿಪಡಿಸಲು ಮುಂದಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಸುಸಜ್ಜಿತ ಮೂಲ ಸೌಕರ್ಯಗಳಿಲ್ಲದಿರುವುದು ಕೂಡ ಕಾರಣವಾಗಿದೆ’ ಎನುತ್ತಾರೆ ವಕೀಲ ಪರೀಕ್ಷಿತ್ ಜಾವಳಿ.
ಖಾಸಗಿ ಶಾಲೆಗೆ ವಿದ್ಯಾರ್ಥಿಗಳ ವರ್ಗಾವಣೆ
ಹಲವು ಶಾಲೆಗಳಲ್ಲಿ ಮೂಲ ಸೌಲಭ್ಯವಿದ್ದರೂ ಗುಣಮಟ್ಟದ ಕಲಿಕೆಯಿಲ್ಲ ಎಂಬ ಕಾರಣಕ್ಕೆ ಪ್ರಸಕ್ತ ಸಾಲಿನಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲ ಸರ್ಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳು ವರ್ಗಾವಣೆ ಪಡೆದಿದ್ದಾರೆ. ಅಂತಹ ಶಾಲೆಗಳನ್ನು ತನಿಖೆ ನಡೆಸಿ ಗುಣಮಟ್ಟ ಕುಸಿಯದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಶಿಕ್ಷಣಾಸಕ್ತರ ಒತ್ತಾಯವಾಗಿದೆ.
ಕೊರತೆ ನೀಗಿಸಲು ಕ್ರಮ ‘
ತಾಲ್ಲೂಕಿನಲ್ಲಿ 23 ಶಾಲೆಗಳು ದುರಸ್ತಿಯ ಹಂತದಲ್ಲಿದ್ದು ದುರಸ್ತಿಗೆ ಅಗತ್ಯವಿರುವ ಶಾಲೆಗಳ ಪಟ್ಟಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಶಾಲೆಯ ಕಲಿಕೆಗೆ ಅಡ್ಡಿಯಾಗುವಂತಹ ಸಮಸ್ಯೆ ಯಾವುದೇ ಶಾಲೆಯಲ್ಲಿಲ್ಲ. ಅಂತಹ ಸಮಸ್ಯೆ ಎದುರಾದರೆ ತುರ್ತಾಗಿ ಕ್ರಮ ಕೈಗೊಳ್ಳಲು ಸಜ್ಜಾಗಿದ್ದೇವೆ. ಪ್ರಸ್ತುತ ಪ್ರತಿ ದಿನವೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ಶಾಲೆಗಳ ಮೂಲಸೌಲಭ್ಯಗಳು ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಯಾವುದೇ ಕೊರತೆಯಾದರೂ ಅದನ್ನು ನೀಗಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೀನಾಕ್ಷಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.