
ಶೃಂಗೇರಿಯ ಬೇಗಾರ್ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕೋಟೆ ರಸ್ತೆಯಲ್ಲಿ ಹೊಂಡ ಬಿದ್ದು, ಜಲ್ಲಿ ಕಲ್ಲು ಎದ್ದಿರುವುದು
ಶೃಂಗೇರಿ: ತಾಲ್ಲೂಕಿನ ಬೇಗಾರ್ ಗ್ರಾಮ ಪಂಚಾಯಿತಿಯ ಅಸನಬಾಳು ಗ್ರಾಮದ ಬಿದಗೋಡುನಿಂದ ಕೋಟೆ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಗ್ರಾಮಸ್ಥರು ಮತ್ತು ಶಾಲಾ ಕಾಲೇಜಿಗೆ ತೆರಳುವ ಮಕ್ಕಳ ಸಂಚಾರಕ್ಕೆ ಅಡಚಣೆಯಾಗಿದೆ. ಈ ರಸ್ತೆ ಅತ್ತ ಜಲ್ಲಿ ರಸ್ತೆಯೂ ಅಲ್ಲ. ಇತ್ತ ಮಣ್ಣು ರಸ್ತೆಯೂ ಅಲ್ಲ ಎಂಬಂತಿದೆ.
ಈ ರಸ್ತೆಯಲ್ಲಿ ಹೊಂಡ–ಗುಂಡಿ ಗಳಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತದೆ. ಬಹುತೇಕ ಕಡೆ ಚರಂಡಿ ಇಲ್ಲದೆ ರಸ್ತೆ ಮೇಲೆ ಮಳೆ ನೀರು ಹರಿಯುತ್ತದೆ. ರಸ್ತೆಯ ಬದಿ ಚರಂಡಿಗೂ, ರಸ್ತೆಗೂ ವ್ಯತ್ಯಾಸವಿಲ್ಲದಂತೆ ನೀರು ಹರಿಯುತ್ತದೆ.
ಇಲ್ಲಿ ಸುಮಾರು 30 ವರ್ಷಗಳ ಹಿಂದೆ ಡಾಂಬರೀಕರಣವಾಗಿತ್ತು. ಈಗ ಡಾಂಬರು ಪೂರ್ತಿ ಹಾಳಾಗಿ, ಜಲ್ಲಿಕಲ್ಲು ಎದ್ದು ನಿಂತಿದೆ. ರಸ್ತೆ ಹಾಳಾಗುತ್ತಿರುವ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗ ಳಿಗೆ ತಿಳಿಸಿದ್ದರು. ಚುನಾವಣೆ ಸಂದರ್ಭ ಇಲ್ಲಿನ ಜನರು ಚುನಾ ವಣಾ ಬಹಿಷ್ಕಾರ ಮಾಡಿದ್ದರು. ನಂತರ ಕಂದಾಯ ಇಲಾಖಾಧಿಕಾರಿಗಳು, ಲೋಕೋಪಯೋಗಿ ಇಲಾಖಾಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ, ರಸ್ತೆಯನ್ನು ದುರಸ್ತಿ ಮಾ ಡಲಾಗುವುದೆಂದು ಭರವಸೆ ನೀಡಿದ್ದು, ಪ್ರತಿಭಟನೆ ಹಿಂಪಡೆಯಲಾಗಿತ್ತು.
ಖಾಸಗಿ ವಾಹನಗಳ ಓಡಾಟ ಹೊರತುಪಡಿಸಿ ಬಸ್ ಸಂಚಾರವಿಲ್ಲ. ರಸ್ತೆಯಲ್ಲಿ ಹೊಂಡಗುಂಡಿ ಇರುವುದ ರಿಂದ ಬಾಡಿಗೆ ವಾಹನ ಚಾಲಕರು ಈ ರಸ್ತೆಯಲ್ಲಿ ವಾಹನ ಓಡಿಸಲು ಹಿಂದೇಟು ಹಾಕುತ್ತಾರೆ. ತುರ್ತು ಚಿಕಿತ್ಸೆ ಪಡೆಯಬೇಕಾದಾಗ ಆಸ್ಪತ್ರೆಗೆ ತೆರಳಲು ತೊಂದರೆ ಅನುಭವಿಸುತ್ತಾರೆ.
ಸರ್ಕಾರ ಈ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಮಾಡಲಿ ಎಂದು ಗ್ರಾಮಸ್ಥರಾದ ಉಮೇಶ, ಸತೀಶ್, ಸುಬ್ರಹ್ಮಣ್ಯ, ಗಾಯತ್ರಿ, ವನಿತಾ, ಸ್ವಾತಿ ಒತ್ತಾಯಿಸಿದ್ದಾರೆ.
ಸರ್ಕಾರ ತ್ವರಿತವಾಗಿ ಅನುದಾನಗಳನ್ನು ಗ್ರಾಮೀಣ ಭಾಗಕ್ಕೆ ನೀಡಿದರೆ ರಸ್ತೆಗಳು ಅಭಿವೃದ್ಧಿಯಾಗುತ್ತವೆ ಎಂದು ಬೇಗಾರ್ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಜಿ.ಪಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರತಿದಿನವೂ ಅನಿವಾರ್ಯವಾಗಿ ನೂರಾರು ಜನರು ಸಂಚರಿಸುವ, ಮೂಲಭೂತ ಸೌಕರ್ಯವಾದ ರಸ್ತೆ ನಿರ್ಮಾಣದ ಬಗ್ಗೆ ಎಲ್ಲಾರ ಮನಸ್ಸು ಒಗ್ಗೂಡಿ ಕಾರ್ಯನಿರ್ವಹಿಸಬೇಕು’ ಎಂದು ಗ್ರಾಮಸ್ಥರಾದ ಕೋಟೆ ಸಂತೋಷ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.