ADVERTISEMENT

ಅಡಿಕೆ ತೋಟದಲ್ಲಿ ಸಂಬಾರ ಬೆಳೆ ಲಾಭದಾಯಕ

ಸೋಷಿಯಲ್ ವೆಲ್ಫೇರ್‌ ಸೊಸೈಟಿ: ಆಧುನಿಕ ಕೃಷಿ ಪದ್ಧತಿ, ಸಂಬಾರ ಬೆಳೆ ಮಾಹಿತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:12 IST
Last Updated 28 ಅಕ್ಟೋಬರ್ 2025, 5:12 IST
ನರಸಿಂಹರಾಜಪುರ ತಾಲ್ಲೂಕು ಸಿಂಸೆ ಗ್ರಾಮದ ಸೋಷಿಯಲ್ ವೆಲ್ಫೇರ್ ಸೊಸೈಟಿ ಸಭಾಂಗಣದಲ್ಲಿ ನಡೆದ ಆಧುನಿಕ ಕೃಷಿ ಪದ್ಧತಿ ಹಾಗೂ ಸಂಬಾರ ಬೆಳೆ ಮಾಹಿತಿ ಕಾರ್ಯಕ್ರಮಕ್ಕೆ ಫಾ.ಜೋಬಿಶ್ ಚಾಲನೆ ನೀಡಿದರು
ನರಸಿಂಹರಾಜಪುರ ತಾಲ್ಲೂಕು ಸಿಂಸೆ ಗ್ರಾಮದ ಸೋಷಿಯಲ್ ವೆಲ್ಫೇರ್ ಸೊಸೈಟಿ ಸಭಾಂಗಣದಲ್ಲಿ ನಡೆದ ಆಧುನಿಕ ಕೃಷಿ ಪದ್ಧತಿ ಹಾಗೂ ಸಂಬಾರ ಬೆಳೆ ಮಾಹಿತಿ ಕಾರ್ಯಕ್ರಮಕ್ಕೆ ಫಾ.ಜೋಬಿಶ್ ಚಾಲನೆ ನೀಡಿದರು   

ಸಿಂಸೆ (ನರಸಿಂಹರಾಜಪುರ): ಅಡಿಕೆ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಸಂಬಾರ ಬೆಳೆ ಬೆಳೆಯುವುದರಿಂದ ರೈತರು ಹೆಚ್ಚು ಲಾಭಗಳಿಸಬಹುದು ಎಂದು ಸಂಬಾರ ಮಂಡಳಿ ಅಧಿಕಾರಿ ದೀಪಕ್ ಹೇಳಿದರು.

ತಾಲ್ಲೂಕಿನ ಸಿಂಸೆ ಗ್ರಾಮದಲ್ಲಿರುವ ಸೋಷಿಯಲ್ ವೆಲ್ಫೇರ್‌ ಸೊಸೈಟಿಯಲ್ಲಿ ನಡೆದ ಆಧುನಿಕ ಕೃ಼ಷಿ ಪದ್ಧತಿ ಮತ್ತು ಸಂಬಾರ ಬೆಳೆ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರು ಅಡಿಕೆ ಬೆಳೆಯನ್ನೇ ನಂಬಿಕೊಂಡು ಕೂರಬಾರದು. ಅಡಿಕೆ ಬೆಳೆಗೆ ರೋಗ ಹೆಚ್ಚಾಗುತ್ತಿದೆ. ಧಾರಣೆಯಲ್ಲೂ ಏರಿಳಿತವಾಗುತ್ತಿದೆ. ರೈತರು ಒಂದೇ ಬೆಳೆಯನ್ನು ಬೆಳೆಯದೆ ಅಡಿಕೆ ಜತೆಗೆ ಏಲಕ್ಕಿ, ಶುಂಠಿ, ಲವಂಗ, ಜಾಯಿಕಾಯಿ, ಚಕ್ಕೆ, ಕಾಳುಮೆಣಸು ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸೋಷಿಯಲ್ ವೆಲ್ಫೇರ್‌ ಸೊಸೈಟಿಯ ನಿರ್ದೇಶಕ ಫಾದರ್ ಜೋಬಿಶ್ ಮಾತನಾಡಿ, ನರಸಿಂಹರಾಜಪುರದ ರೈತ ಕುಟುಂಬದ ಮನೆಗಳಲ್ಲಿರುವ ಸಮಸ್ಯೆಗಳನ್ನು ಅರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಲ ಬದಲಾದಂತೆ ಕೃಷಿಯಲ್ಲೂ ಆವಿಷ್ಕಾರ ಆಗುತ್ತಿದೆ. ಕೃಷಿ ಕಾರ್ಯಕ್ಕೆ ಹೊಸ ಯಂತ್ರಗಳು ಬರುತ್ತಿವೆ. ಪ್ರತಿಯೊಬ್ಬರೂ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಮಾತ್ರ ಆರ್ಥಿಕ ಬೆಳವಣಿಗೆ ಸಾಧ್ಯ ಎಂದರು.

ಸೋಷಿಯಲ್ ವೆಲ್ಫೇರ್‌ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿ, ಸೊಸೈಟಿಯು ಸುಮಾರು 35 ವರ್ಷಗಳಿಂದ ಗ್ರಾಮೀಣ ಭಾಗದ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ರೈತರಿಗೆ ಸೋಲಾರ್ ಅಳವಡಿಕೆ ಕಾರ್ಯಕ್ರಮದ ಮಾಹಿತಿ ನೀಡಲಾಗುತ್ತಿದೆ ಎಂದರು.

ನೆದರ್‌ಲ್ಯಾಂಡ್‌ ದೇಶದ ರಾಬರ್ಟ್ ಮಾಹಿತಿ ನೀಡಿ, ಕೃಷಿ ಮಾಡುವ ರೈತರು ತಮ್ಮ ತೋಟಗಳಿಗೆ ಸೋಲಾರ್ ಬೇಲಿ ಆಳವಡಿಸಿದರೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬಹುದು. ಸೋಲಾರ್ ಪಂಪ್ ಮೂಲಕ ತುಂತುರು ನೀರಾವರಿ, ಹನಿ ನೀರಾವರಿ ಪದ್ಧತಿ ಮಾಡಿಕೊಳ್ಳಬಹುದು. ಸಾವಯವ ಗೊಬ್ಬರ ಬಳಸಿದರೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ವೈಜ್ಞಾನಿಕ ಪದ್ಧತಿಯಿಂದ ತರಕಾರಿ ಬೆಳೆದರೆ ಆರ್ಥಿಕವಾಗಿ ಸಬಲರಾಗಬಹುದು ಎಂದು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಸೋಷಿಯಲ್ ಪೆಲ್ಫೇರ್‌ ಸೊಸೈಟಿಯ ಸಿಬ್ಬಂದಿ ಪ್ರಿನ್ಸಿ, ಸಿನಿ ಜಾರ್ಜ್, ಅಶ್ವಿನಿ, ಉಷಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.