ADVERTISEMENT

ಪೌರಕಾರ್ಮಿಕರ ಸೇವಾ ನಿರ್ವಹಣೆ ಶ್ರೇಷ್ಠ ಕಾರ್ಯ: ಶಾಸಕ ಕೆ.ಎಸ್‌.ಆನಂದ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 5:59 IST
Last Updated 20 ಅಕ್ಟೋಬರ್ 2025, 5:59 IST
ಬೀರೂರಿನ ಗುರುಭವನದಲ್ಲಿ ಭಾನುವಾರ ಪುರಸಭೆ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಮುಖ್ಯಾಧಿಕಾರಿ ಜಿ.ಪ್ರಕಾಶ್ ಭಾಗವಹಿಸಿದ್ದರು
ಬೀರೂರಿನ ಗುರುಭವನದಲ್ಲಿ ಭಾನುವಾರ ಪುರಸಭೆ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಮುಖ್ಯಾಧಿಕಾರಿ ಜಿ.ಪ್ರಕಾಶ್ ಭಾಗವಹಿಸಿದ್ದರು   

ಬೀರೂರು (ಕಡೂರು): ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೇವೆಯನ್ನು ಶ್ರೇಷ್ಠವಾಗಿ ನಿರ್ವಹಿಸುವ ಪೌರಕಾರ್ಮಿಕರ ಕೆಲಸ ಅನನ್ಯವಾಗಿದೆ ಎಂದು ಶಾಸಕ ಕೆ.ಎಸ್‌.ಆನಂದ್‌ ಹೇಳಿದರು.‌

ಬೀರೂರಿನ ರೈಲ್ವೇ ಸ್ಟೇಷನ್‌ ರಸ್ತೆಯ ಗುರುಭವನದಲ್ಲಿ ಬೀರೂರು ಪುರಸಭೆ ವತಿಯಿಂದ ಭಾನುವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರಿಲ್ಲದ ಪಟ್ಟಣವನ್ನು ಊಹಿಸಲೂ ಸಾಧ್ಯವಿಲ್ಲ. ನೀವು ಎಷ್ಟೇ ನಿಷ್ಠೆಯಿಂದ ಕೆಲಸ ಮಾಡಿದರೂ ಮೂದಲಿಕೆ ತಪ್ಪುವುದಿಲ್ಲ. ಸರ್ಕಾರವು ನೇರವೇತನ ಸೌಲಭ್ಯ ಕಲ್ಪಿಸಿದ ಬಳಿಕ ನಿಮ್ಮ ಬದುಕು ಸುಧಾರಣೆಯಾಗುತ್ತಿದೆ. ನಿಮ್ಮ ಆರೋಗ್ಯ ಕಾಪಾಡುವ ಸಲುವಾಗಿ ಸ್ವಚ್ಛತಾ ಪರಿಕರಗಳು, ಆರೋಗ್ಯ ತಪಾಸಣೆ, ವಿಮಾ ಸೌಲಭ್ಯಗಳನ್ನು ಕಲ್ಪಿಸಿದೆ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿಕೊಡಬೇಕು. 7ನೇ ವೇತನ ಆಯೋಗ ಜಾರಿ ಮಾಡಿದಂತೆ ಹೊರಗುತ್ತಿಗೆ ನೌಕರರ, ಕಾರ್ಮಿಕರ ವೇತನವನ್ನೂ ಪರಿಷ್ಕರಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಕಾರ್ಮಿಕರ ಬೇಡಿಕೆಯಂತೆ ನಿವೇಶನ ಒದಗಿಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ADVERTISEMENT

ಡಿಎಸ್‌ಎಸ್ ರಾಜ್ಯ ಘಟಕದ ಸಂಚಾಲಕ ವೆಂಕಟೇಶ್ ಮಾತನಾಡಿ, ಪೌರ ಕಾರ್ಮಿಕರಿಗೆ ಹಲವು ಸೌಲಭ್ಯ ಲಭಿಸಲು ಸಫಾಯಿ ಕರ್ಮಚಾರಿ ಆಯೋಗದ ವತಿಯಿಂದ ಐಪಿಡಿ ಸಾಲಪ್ಪ ಅವರು ಸರ್ಕಾರಕ್ಕೆ ವರದಿ ನೀಡಿದ್ದರು. ಅದರ ಫಲವಾಗಿ ಇಂದು ಪೌರಕಾರ್ಮಿಕರೂ ಎಲ್ಲರಂತೆ ಬದುಕುವಂತಾಗಿದೆ. ವರದಿ ಅನುಸರಿಸಿದರೆ ಪ್ರತಿ 500 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರಂತೆ ನೇಮಕ ಆಗಬೇಕು. ಪೌರ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ಪೌರಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಮುಂದಿನ ದಿನಗಳಲ್ಲಿ ಶಾಸಕರು ಪೌರಕಾರ್ಮಿಕರ ಮಕ್ಕಳನ್ನು ನಾಮ ನಿರ್ದೇಶಿತ ಸದಸ್ಯರಾಗಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಪುರಸಭೆ ಸದಸ್ಯ ಬಿ.ಆರ್‌.ಮೋಹನಕುಮಾರ್‌ ಮಾತನಾಡಿ, ಜನರು ನಿರ್ವಹಿಸಲು ಹಿಂಜರಿಯುವ ಕೆಲಸವನ್ನು ಆತ್ಮಸಂತೋಷದ ಮೂಲಕ ನಿರ್ವಹಿಸುವ ಪೌರಕಾರ್ಮಿಕರು ನಿತ್ಯ ಸಂತೋಷಿಗಳು. ಆಡಳಿತ ಮತ್ತು ಅಧಿಕಾರ ಸಮನ್ವಯದಿಂದ ಇರಬೇಕು, ಪೌರಕಾರ್ಮಿಕರು, ನೀರುಗಂಟಿಗಳು ಮತ್ತು ಕಸ ಸಂಗ್ರಹಿಸುವ ಚಾಲಕರು ಸಮಾಜದ ಚಾಲಕ ಶಕ್ತಿಯಾಗಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಸದಸ್ಯೆ ವನಿತಾ ಮಧು ಬಾವಿಮನೆ, ಸದಸ್ಯ ಬಿ.ಕೆ.ಶಶಿಧರ್‌ ಮಾತನಾಡಿದರು.

ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ಜಯಮ್ಮ, ಪೌರಕಾರ್ಮಿಕರಿಗೆ ನಿವೇಶನ ಕಲ್ಪಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಹಳೇಪೇಟೆಯ ಶ್ರೀವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪೌರಕಾರ್ಮಿಕರ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಗುರುಭವನಕ್ಕೆ ಬಂದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ರಘು, ಸದಸ್ಯರಾದ ಜ್ಯೋತಿ ಸಂತೋಷ್, ಸಹನಾ ಮಾತನಾಡಿದರು.

ಸಫಾಯಿ ಕರ್ಮಚಾರಿ ಜಾಗೃತ ಸಮಿತಿ ಸದಸ್ಯೆ ಭವಾನಿ, ಪುರಸಭೆ ಸದಸ್ಯರಾದ ಮಾನಿಕ್ ಬಾಷಾ, ಟಿ.ಗಂಗಾಧರ್, ಸುಮಿತ್ರ, ಶಾರದಾ, ನಾಮ ನಿರ್ದೇಶಿತ ಸದಸ್ಯರಾದ ಎಂ.ಎಲ್.ಮೋಹನ್ ಕುಮಾರ್, ಪುಟ್ಟಸ್ವಾಮಿ, ಆಶ್ರಯ ಸಮಿತಿ ಸದಸ್ಯ ಮುಬಾರಕ್, ಮಲ್ಲಿಕಾರ್ಜುನ್‌, ಪುರಸಭೆ ಅಧಿಕಾರಿಗಳು, ನಿವೃತ್ತ ನೌಕರರು, ಮತ್ತು ಪೌರಕಾರ್ಮಿಕರು, ಸಿಬ್ಬಂದಿ ಮತ್ತು ಕುಟುಂಬದವರು ಭಾಗವಹಿಸಿದ್ದರು.

ಪೌರಕಾರ್ಮಿಕರಿಗೆ ವಿವಿಧ ಸವಲತ್ತು 

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಾಧಿಕಾರಿ ಜಿ.ಪ್ರಕಾಶ್ ಹಲವಾರು ಹೋರಾಟಗಳ ಮೂಲಕ ಪೌರಕಾರ್ಮಿಕರಿಗೆ ಇಂದು ಸಮರ್ಪಕವಾದ ಸೌಲಭ್ಯಗಳು ದೊರೆತು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಪೌರಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಆರೋಗ್ಯ ತಪಾಸಣೆ ಸಂಕಷ್ಟ ಭತ್ಯೆ ಶವಸಂಸ್ಕಾರಕ್ಕೆ ₹ 15 ಸಾವಿರ ವೇತನ ಹಾಗೂ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ಪೌರಸೇವಾ ನೌಕರರಿಗೆ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿಯಾಗಿದ್ದ ದಿ.ಜೆ.ಎಚ್.ಪಟೇಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಸ್ಮರಣೀಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.