
ಆಲ್ದೂರು: ಸಮೀಪದ ಕೆಳಗೂರಿನಲ್ಲಿನ ಅರಣ್ಯ ಇಲಾಖೆಯ ಸಂಜೀವಿನಿ ವನವು ಅವ್ಯವಸ್ಥೆಗಳ ಆಗರವಾಗಿದೆ.
2017ರಲ್ಲಿ ಸುಮಾರು ₹1 ಕೋಟಿ ಅನುದಾನದಲ್ಲಿ ನಿರ್ಮಿಸಲಾದ ಈ ವನ, 33 ಎಕರೆ ವಿಸ್ತೀರ್ಣವಿದೆ. ಪ್ರಾರಂಭದಲ್ಲಿ ಉತ್ತಮ ನಿರ್ವಹಣೆ, ಸ್ವಚ್ಛತೆ, ಕ್ಯಾಂಟಿನ್, ಮಕ್ಕಳ ಪಾರ್ಕ್ ಮೂಲಕ ಗಮನ ಸೆಳೆದಿತ್ತು. ಸಮೀಪದಲ್ಲೇ ಚಿಕ್ಕಮಗಳೂರು– ಧರ್ಮ
ಸ್ಥಳ– ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 173 ಹಾದು ಹೋಗಿದ್ದು, ಪ್ರವಾಸಿಗರ ಸಂಖ್ಯೆಯೂ ಹೆಚ್ಚಿತ್ತು.
‘ಈಗ ಸರಿಯಾದ ನಿರ್ವಹಣೆ ಇಲ್ಲದೆ ಸಂಜೀವಿನಿ ವನದ ಪರಿಸರ ಹಾಳಾಗುತ್ತಿದೆ’ ಎನ್ನುತ್ತಾರೆ ಸ್ಥಳೀಯ
ರಾದ ಸುರೇಶ್ ಹೊಸಪೇಟೆ ಹಾಗೂ ರಫೀಕ್.
‘ವನದ ಒಳಗೆ ಜೊಂಡು ಹುಲ್ಲುಗಳು ಆಳೆತ್ತರಕ್ಕೆ ಬೆಳೆದಿದ್ದು, ರಸ್ತೆ ಕಾಣದಂತಾಗಿದೆ. ನಡೆದಾಡುವುದೂ ಅಸಾಧ್ಯ. ಪೊದೆಗಳ ಮಧ್ಯೆ ವಿಷ ಜಂತುಗಳು ಸೇರಿರುವ ಸಾಧ್ಯತೆ ಇದೆ. ಸಿ.ಸಿ. ಟಿವಿ ಕ್ಯಾಮೆರಾ ಸಂಪರ್ಕ ಕಡಿತಗೊಂಡಿವೆ. ಕಿಡಿಗೇಡಿಗಳು ಅನೈತಿಕ ಚಟುವಟಿಕೆ ನಡೆಸುವ ಸಾಧ್ಯತೆ ಹೆಚ್ಚಿವೆ. ಇದನ್ನು ನಿಯಂತ್ರಿಸಬೇಕು’ ಎಂದು ಬೆಳಗಾರರ ಒಕ್ಕೂಟದ ನಿರ್ದೇಶಕ ಅಶೋಕ್ ಸೂರಪ್ಪನಹಳ್ಳಿ ಆಗ್ರಹಿಸಿದರು.
‘ಈ ವನದಲ್ಲಿ ಗಿಡ ಮೂಲಿಕೆ
ಗಳಿದ್ದು, ಫಲಕಗಳನ್ನು ಹಾಕಲಾಗಿತ್ತು. ಇದು ಮಕ್ಕಳು, ಯುವಜನತೆಗೆ ಮಾಹಿತಿಯುಕ್ತವಾಗಿತ್ತು. ಇದರ ನಿರ್ವಹಣೆಗಾಗಿ ಸಿಬ್ಬಂದಿ ನೇಮಿಸಬೇಕು’ ಎನ್ನುತ್ತಾರೆ ಕೆಳಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರೇಶ್ ಎಚ್.ಎಂ.
‘ಪ್ರತಿ ಬಾರಿ ಧರ್ಮಸ್ಥಳಕ್ಕೆ ಹೋಗುವಾಗ, ಈ ವನದಲ್ಲಿ ವಿರಮಿಸಿ ಹೋಗುತ್ತಿದ್ದೆವು. ಇಲ್ಲಿ ಮಕ್ಕಳ ಜೋಕಾಲಿ, ವೀಲ್ ಸ್ಲೈಡಿಂಗ್ ಇತ್ಯಾದಿ ಆಟೋಪಕರಣಗಳು ಇದ್ದವು. ಈಗೆಲ್ಲ ಹಾಳಾಗಿವೆ’ ಎಂದು ಚಿಕ್ಕಮಗಳೂರು ಅತ್ತಿಗಿರಿಯ ಉಪನ್ಯಾಸಕ ಸುರೇಶ್ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.