ADVERTISEMENT

ಕೊಣೆಗೋಡಿನಲ್ಲಿ ಟಾರ್ಪಾಲಿನ ಆಸರೆಯಲ್ಲಿ ಪರಿಶಿಷ್ಟ ಕುಟುಂಬ...!

ಮಳೆ, ಚಳಿಗೆ ನಲುಗುವ ಮಕ್ಕಳು; ವಿದ್ಯುತ್, ನೀರಿನ ಸೌಕರ್ಯವೂ ಇಲ್ಲದೆ ಪರದಾಡ

ರವಿ ಕೆಳಂಗಡಿ
Published 19 ಜುಲೈ 2023, 7:12 IST
Last Updated 19 ಜುಲೈ 2023, 7:12 IST
ಕಳಸ ತಾಲ್ಲೂಕಿನ ಎಸ್.ಕೆ.ಮೇಗಲ್ ಗ್ರಾಮದ ಕೊಣೆಗೋಡಿನಲ್ಲಿ ನೇತ್ರಾ ಸುನಿಲ್ ದಂಪತಿಯ ಟಾರ್ಪಾಲ್ ಮನೆ
ಕಳಸ ತಾಲ್ಲೂಕಿನ ಎಸ್.ಕೆ.ಮೇಗಲ್ ಗ್ರಾಮದ ಕೊಣೆಗೋಡಿನಲ್ಲಿ ನೇತ್ರಾ ಸುನಿಲ್ ದಂಪತಿಯ ಟಾರ್ಪಾಲ್ ಮನೆ   

ಕಳಸ: ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಕೆ.ಮೇಗಲ್ ಗ್ರಾಮದ ಕೊಣೆಗೋಡು ಅತ್ಯಂತ ಹಿಂದುಳಿದ ಪ್ರದೇಶ. ಅಲ್ಲಿನ ಪರಿಶಿಷ್ಟ ಕುಟುಂಬವೊಂದು  2 ವರ್ಷಗಳಿಂದ ನೆಲೆ ಇಲ್ಲದೆ ಟಾರ್ಪಾಲಿನ ಸೂರಿನಡಿ ವಾಸ ಮಾಡುತ್ತಾ, ನಾಗರಿಕ  ಜಗತ್ತಿನ ಸೌಲಭ್ಯಗಳಿಂದ ವಂಚಿತವಾಗಿದೆ.

ನೇತ್ರಾ ಮತ್ತು ಸುನಿಲ ದಂಪತಿಯ ಪೈಕಿ ಸುನಿಲ್ ಕೂಲಿ ಮಾಡಿ ದಿನದ ಕೂಳು ಸಂಪಾದಿಸುತ್ತಿದ್ದಾರೆ. ನೇತ್ರಾ ತನ್ನೆರಡು ಮಕ್ಕಳ ಜೊತೆಗೆ ಟಾರ್ಪಾಲಿನಡಿ ಸಂಸಾರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಕೊಣೆಗೋಡು ಹರಿಜನ ಕಾಲೊನಿಯಲ್ಲಿ ಇವರಿಗಿದ್ದ ಹಳೆಯ ಮನೆಯ ಹಿಂಭಾಗ 2 ವರ್ಷಗಳ ಹಿಂದೆ ಧರೆ ಕುಸಿದು ಹಾನಿಯಾಗಿತ್ತು. ಶಿಥಿಲಗೊಂಡ ಮನೆಯನ್ನು ತಂದೆ ತಾಯಿಗೆ ಬಿಟ್ಟು, ಸಮೀಪದಲ್ಲೇ ಈ ಕುಟುಂಬ ಟಾರ್ಪಾಲ್ ಕಟ್ಟಿಕೊಂಡು ಬದುಕುವ ತೀರ್ಮಾನ ಮಾಡಿದ್ದರು.

ಸರ್ಕಾರದ ನೆರವಿನಿಂದ ಸೂರು ಕಟ್ಟಿಕೊಳ್ಳುವ ವಿಶ್ವಾಸದಿಂದ ಟಾರ್ಪಾಲಿನ ತಾತ್ಕಾಲಿಕ ಆಸರೆ ನಂಬಿದ್ದರು. ಆದರೆ,  2 ವರ್ಷ ಕಳೆದರೂ ಯಾವುದೇ ನೆರವು ಲಭಿಸದ ಕಾರಣ, ಟಾರ್ಪಾಲಿನ ಆಸರೆಯೇ ಶಾಶ್ವತ ಎಂಬ ಭಾವನೆ ಈ ಕುಟುಂಬಕ್ಕೆ ಬಂದಿದೆ.

ADVERTISEMENT

ಬೇಸಿಗೆಯ ಬಿಸಿಲಿಗೆ ಟಾರ್ಪಾಲು ಪುಡಿಯಾಗಿ ಕಿತ್ತು ಹರಿದು ಹೋಗಿತ್ತು. ಮಳೆಗಾಲಕ್ಕೆ ಮುನ್ನ ಹೊಸ ಟಾರ್ಪಾಲು ಹಾಕಿ ಮನೆಯ ನವೀಕರಣ ಮಾಡಿದ್ದಾರೆ.  ಈ ಕುಟುಂಬಕ್ಕೆ ಈವರೆಗೂ ಶಾಶ್ವತ ಸೂರಿನ ಕನಸು ಮರೀಚಿಕೆಯಾಗಿಯೇ ಉಳಿದಿದೆ. ದಂಪತಿಯ ಇಬ್ಬರು ಚಿಕ್ಕ ಮಕ್ಕಳು  ಟಾರ್ಪಾಲಿನ ಒಳಗೆ  ಮಳೆ, ಚಳಿ ಗಾಳಿಗೆ ಹೊಂದಿಕೊಳ್ಳಲಾಗದೆ ನಲುಗುತ್ತಿವೆ.

'ವರ್ಷದ ಹಿಂದೆ ಪಂಚಾಯಿತಿಯವರು ಬಂದು 2 ದಿನದಲ್ಲಿ ಮನೆಯ ಅಡಿಪಾಯ ಮಾಡಿಕೊಳ್ಳಿ, ದುಡ್ಡು ಬರುತ್ತೆ ಅಂದ್ರು. 2 ದಿನದಲ್ಲಿ ನಾವು ಅಷ್ಟೆಲ್ಲಾ ದುಡ್ಡು ತಂದು ಅಡಿಪಾಯ ಕಟ್ಟಿಕೊಳ್ಳಲು ಆಗದೆ ಮನೆಯ ಆಸೆಯನ್ನೇ ಬಿಟ್ಟೆವು. ಈಗ ಮನೆ ವಾಪಸ್ ಹೋಗಿದೆ ಅಂತಾರೆ' ಎಂದು ನೇತ್ರಾ ನೋವಿನಿಂದ ಹೇಳಿದರು.

'ಎರಡು ಎಳೆ ಮಕ್ಕಳು ಇಟ್ಕೊಂಡು ಈ ಟಾರ್ಪಾಲ್ ಮನೇಲಿ ಮಳೆಗಾಲದಲ್ಲಿ ಇರಕ್ಕೆ ಆಗುತ್ತಾ. ಏನೋ ಧೈರ್ಯ ಮಾಡಿ ಬದುಕಿದ್ದೀವಿ ಅಷ್ಟೇ. ನಮಗೆ ಯಾರೂ ದಿಕ್ಕೇ ಇಲ್ಲದಂತೆ ಆಗಿದೆ' ಎಂದು ನೇತ್ರಾ ಹತಾಶೆಯಿಂದ ಹೇಳಿದರು.

ಮನೆ ಅನುದಾನದ ಪ್ರಕ್ರಿಯೆಗಳ ಬಗ್ಗೆ ಏನೂ ಅರಿವಿರದ ಈ ಮನೆಯ ಮಕ್ಕಳು ಎಸ್.ಕೆ. ಮೇಗಲ್ ಅಂಗನವಾಡಿ ಕೇಂದ್ರಕ್ಕೆ ಹೋದಾಗ ಮಾತ್ರ ಗಟ್ಟಿಯಾದ ಸೂರಿನಡಿ  ಆಶ್ರಯ ಪಡೆಯುತ್ತವೆ. ಟಾರ್ಪಾಲಿನ ಮನೆಗೆ ಮರಳಿದಾಗ ಮತ್ತೆ ಕಂಗಾಲಾಗುತ್ತವೆ. ವಿದ್ಯುತ್, ನೀರಿನ ಸೌಕರ್ಯವೂ ಇಲ್ಲದೆ ಈ ಕುಟುಂಬ ಬದುಕಲು ಪರಿಪಾಟಲು ಪಡುತ್ತಿದೆ.

ಕೊಣೆಗೋಡಿನ ಟಾರ್ಪಾಲ್ ಮನೆಯೊಳಗೆ ಈ ಕುಟುಂಬದ ಭವಿಷ್ಯದ ಭರವಸೆ ಆಗಿರುವ ಮಕ್ಕಳು ಓದುತ್ತಿರುವುದು.

‘ 2016-17ರಲ್ಲೇ ನೇತ್ರಾ ಅವರಿಗೆ ಮನೆ ಮಂಜೂರು ಆಗಿತ್ತು. 2021ರಲ್ಲಿ ಪರಿಶಿಷ್ಟ ಜಾತಿಯವರಿಗೆ 3 ಮನೆ ಬಂದಿದ್ದವು. ಈಗ ಮತ್ತೆ ನೇತ್ರಾ ಅವರ ಹೆಸರನ್ನು ಅಂಬೇಡ್ಕರ್ ವಸತಿ ನಿಗಮದಲ್ಲಿ ಸೇರಿಸಲು ಅವಕಾಶ ಇದೆ. ಈ ಬಗ್ಗೆ ತಾಲ್ಲುಕು ಪಂಚಾಯಿತಿ ಮೂಲಕ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ‘ ಎಂದು ಸಂಸೆ ಪಂಚಾಯಿತಿ ಅಧ್ಯಕ್ಷ ಕಳಕೋಡು ರವಿ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.