ತರೀಕೆರೆ: ಪಟ್ಟಣದ ಗಾಳಿಹಳ್ಳಿ ಕ್ರಾಸ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆಲವು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳು ಮತ್ತು ಶಿಕ್ಷಕರು ಭಯದ ವಾತಾವರಣದಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ಶಾಲೆಯಲ್ಲಿ ಶಿಕ್ಷಕರ ಬದ್ಧತೆಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚುತ್ತಿದೆ. ಇಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ಮತ್ತು ಒಂದರಿಂದ ಏಳನೇ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಆದರೆ, ಈ ವಿದ್ಯಾರ್ಥಿಗಳಿಗೆ ಕೊಠಡಿಗಳ ಸಮಸ್ಯೆ ಇದ್ದು, ಕೇವಲ 5 ಕೊಠಡಿಗಳು ಇವೆ. ಅದರಲ್ಲಿ 2 ಹೆಂಚು ಹಾಕಿರುವ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟು ಶೀಥಿಲಾವಸ್ಥೆಯಲ್ಲಿವೆ. ಇನ್ನು 2 ಆರ್.ಸಿ.ಸಿ. ಕಟ್ಟಡಗಳಿದ್ದು, ಮಳೆಗಾಲದಲ್ಲಿ ಹೆಚ್ಚಿನ ತೇವಾಂಶದಿಂದ ನೀರು ಜಿನುಗಿ ತೊಟ್ಟಿಕ್ಕುತ್ತಿವೆ. ಇದರಿಂದ ಮಕ್ಕಳು ತೇವಾಂಶದಲ್ಲಿಯೇ ಕೂರುವಂತಾಗಿದೆ.
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಕೆಲವು ಬಾರಿ ಎರಡೆರಡು ತರಗತಿಯ ಮಕ್ಕಳನ್ನು ಒಟ್ಟಿಗೆ ಕೂರಿಸಿಕೊಂಡು ಪಾಠ–ಪ್ರವಚನಗಳನ್ನು ಮಾಡುವ ಸ್ಥಿತಿ ಉಂಟಾಗುತ್ತಿದೆ ಎಂದು ಪೋಷಕರು ತಿಳಿಸಿದ್ದಾರೆ.
ಈ ಹಿಂದೆಯೇ ಶೌಚಾಲಯ ಸ್ಥಿತಿ ಹದಗೆಟ್ಟಿತ್ತು. ನಂತರ ಎಸ್.ಡಿ.ಎಂ.ಸಿ., ಸಾರ್ವಜನಿಕ ಸಹಕಾರದಿಂದ ಸನ್ ಟಿವಿ ಮತ್ತು ಸರ್ಕಾರದ ವತಿಯಿಂದ ಎರಡು ಸುಸಜ್ಜಿತವಾದ ಶೌಚಾಲಯ ನಿರ್ಮಿಸಲಾಗಿದೆ. ಸಾರ್ವಜನಿಕ ಮತ್ತು ಸಂಘ-ಸಂಸ್ಥೆಗಳ ಸಹಕಾರದಿಂದ ಮಕ್ಕಳ ಪಾಠ ಪ್ರವಚನಗಳಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಶಾಲೆಗೆ ಒದಗಿಸಲಾಗಿದೆ ಎನ್ನುತ್ತಾರೆ ಶಿಕ್ಷಕರು.
ಮಕ್ಕಳ ಸಂಖ್ಯೆ ಹೆಚ್ಚಳ: ಕೊಠಡಿ ಕೊರತೆ
ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಈ ಶಾಲೆ ಕೊಠಡಿ ಕೊರತೆ ಎದುರಿಸುತ್ತಿದೆ. ಈ ಹಿಂದೆ 50–60 ಇದ್ದ ಮಕ್ಕಳ ಸಂಖ್ಯೆ ಈಗ 150ಕ್ಕೆ ಏರಿಕೆಯಾಗಿದೆ. ಖಾಸಗಿ ಶಾಲೆಗಳನ್ನೂ ಬಿಡಿಸಿ ಈ ಶಾಲೆಗೆ ಪೋಷಕರು ಸೇರಿಸುತ್ತಿದ್ದಾರೆ. ಈಗಿರುವ ಕೊಠಡಿಗಳಲ್ಲಿ ಅಷ್ಟೂ ಜನರಿಗೆ ಅವಕಾಶ ನೀಡುವುದು ಕಷ್ಟವಾಗಿ ಶಿಕ್ಷಕರು ಪರದಾಡುತ್ತಿದ್ದಾರೆ. ಒಂದು ಕೊಠಡಿಯಲ್ಲಿ ಎರಡು ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ. ಇನ್ನು ಯುಕೆಜಿ ಮತ್ತು ಎಲ್‌ಕೆಜಿ ತರಗತಿಗಳನ್ನು ತೆರೆಯಲಾಗಿದೆ. ಇವುಗಳಿಗೂ ಕೊಠಡಿ ಇಲ್ಲದೆ ಪರದಾಡುವಂತಾಗಿದೆ. ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ಖುಷಿಯ ವಿಷಯ. ಆದರೆ ಕೊಠಡಿ ಕೊರತೆ ಸರಿಪಡಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಬೇಕು ಎಂಬುದು ಪೋಷಕರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.