ಶೃಂಗೇರಿ: ಶಾರದಾಂಬೆಗೆ ಕೈಯಲ್ಲಿ ಪಾಶ, ಅಂಕುಶ, ಪುಷ್ಪಬಾಣ ಮತ್ತು ಬಿಲ್ಲುಗಳನ್ನು ಧರಿಸಿ ಕರುಣ ಪೂರಿತ ದೃಷ್ಟಿಯುಳ್ಳವರಾಗಿ ಸರ್ವಾಲಂಕಾರ ಭೂಷಿತರಾಗಿರುವ ರೀತಿಯಲ್ಲಿ ಮಂಗಳವಾರ ಶಾರದೆಗೆ ರಾಜರಾಜೇಶ್ವರಿ ಅಲಂಕಾರ ಮಾಡಿದ್ದರು.
ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿ ಅವರಿಂದ ಶಾರದಾಂಬೆಗೆ ವಿಶೇಷಪೂಜೆ, ಪಾರಾಯಣಗಳು, ಜಪಗಳು, ಕುಮಾರೀಪೂಜೆ, ಸುವಾಸಿನೀಪೂಜೆ ಮುಂತಾದ ಧಾರ್ಮಿಕ ಪ್ರಕ್ರಿಯೆಗಳು ನಡೆದವು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಚೆನ್ನೈನ ಗಾಯಿತ್ರಿ ಮಹೇಶ್ ಮತ್ತು ವೃಂದದಿಂದ ನಾಮ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.
ಶಾರದಾ ಮಠದಲ್ಲಿ ಸಂಜೆ 6ಗಂಟೆಗೆ ನಡೆದ ಬೀದಿ ಉತ್ಸವದಲ್ಲಿ ಮರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಭಾಗವಹಿಸಿದ್ದರು.
ದರ್ಬಾರು: ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಶಾರದಾ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ ಚಂದ್ರಮೌಳೇಶ್ವರ ಸ್ವಾಮಿಯ ಪ್ರಾಂಗಣದಲ್ಲಿ ಶಾರದಾಮ್ಮನವರ ದೇವಾಲಯದ ಒಳಗೆ ಉತ್ಸವದಲ್ಲಿ ಭಾಗವಹಿಸಿದರು. ಬಂಗಾರದ ರಥದಲ್ಲಿರುವ ಸಿಂಹಾಸನದಲ್ಲಿ ಶಾರದೆಯ ಉತ್ಸವ ಮೂರ್ತಿಯನ್ನು ಇಡಲಾಯಿತು.
ವೇದ, ವಾದ್ಯ ಘೋಷಗಳೊಂದಿಗೆ, ಛತ್ರಿ-ಚಾಮರಗಳೊಂದಿಗೆ ಒಳ ಪ್ರಾಂಗಣದಲ್ಲಿ ದೇವಾಲಯಕ್ಕೆ ಮೂರು ಸುತ್ತು ಉತ್ಸವ ನಡೆಯಿತು. ಉತ್ಸವದ ಬಳಿಕ ಗುರುಗಳು ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಆಸೀನರಾದರು. ಸಪ್ತಶತಿ ಪಾರಾಯಣದ ಅಧ್ಯಯನ, ಅಮ್ಮನವರಿಗೆ ಮಂಗಳಾರತಿ, ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.