ಮೂಡಿಗೆರೆ: ತಾಲ್ಲೂಕಿನ ಬಾಳೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ.
ಕಳೆದ ಸಾಲಿನಲ್ಲಿದ್ದ ಶಿಕ್ಷಕಿ ಆರೋಗ್ಯದ ಸಮಸ್ಯೆಯಿಂದ ದೀರ್ಘ ರಜೆಗೆ ತೆರಳಿದ ಬಳಿಕ, ಶಾಲೆಯಲ್ಲಿ ಯಾವುದೇ ಶಿಕ್ಷಕರಿಲ್ಲದೆ, ಅತಿಥಿ ಶಿಕ್ಷಕರಿಗೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದರು. ಈಗ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಸಂಖ್ಯೆ 10ಕ್ಕೆ ಕುಸಿದಿದ್ದು, ಕೆಲವು ಪೋಷಕರು ಬೇರೆ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದಾಗುತ್ತಿದ್ದಾರೆ.
ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡಲು ಈ ಶಾಲೆಯು ಉತ್ತಮವಾಗಿತ್ತು. ಇದ್ದ ಶಿಕ್ಷಕರು ರಜೆ ಮೇಲೆ ಹೋಗಿರುವುದರಿಂದ ಮಕ್ಕಳ ಸ್ಥಿತಿ ಅತಂತ್ರವಾಗಿದೆ. ಶಿಕ್ಷಕರ ಕೊರತೆ ಇದೆ ರೀತಿಯಲ್ಲಿ ಮುಂದುವರೆದರೆ ಶಾಲೆಯನ್ನು ಮುಚ್ಚುವ ಸ್ಥಿತಿ ಎದುರಾಗಬಹುದು. ಹಲವು ಬಾರಿ ಶಿಕ್ಷಕರ ನೇಮಕಕ್ಕೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮವಹಿಸದೇ ನಿರ್ಲಕ್ಷಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಹೇಳುವ ಸರ್ಕಾರವು ಕೂಡಲೇ ಬಾಳೂರು ಸರ್ಕಾರಿ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕು. ಇಲ್ಲದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪೋಷಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.