ADVERTISEMENT

ಶ್ರಾವಣ ಮಾಸ ಅತ್ಯಂತ ಪವಿತ್ರ: ರಂಭಾಪುರಿ ಶ್ರೀ

ಶ್ರಾವಣ ತಪೋನುಷ್ಠಾನದ ಅಂಗವಾಗಿ ನಡೆದ ಪುರಾಣ ಪ್ರವಚನ ಉದ್ಘಾಟನಾ ಧರ್ಮ ಸಮಾರಂಭದ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:01 IST
Last Updated 27 ಜುಲೈ 2025, 5:01 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಕೈಗೊಂಡ 34ನೇ ವರ್ಷದ ಶ್ರಾವಣ ತಪೋನುಷ್ಠಾನದ ಅಂಗವಾಗಿ ನಡೆದ ಪುರಾಣ ಪ್ರವಚನ ಧರ್ಮ ಸಮಾರಂಭವನ್ನು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಕೈಗೊಂಡ 34ನೇ ವರ್ಷದ ಶ್ರಾವಣ ತಪೋನುಷ್ಠಾನದ ಅಂಗವಾಗಿ ನಡೆದ ಪುರಾಣ ಪ್ರವಚನ ಧರ್ಮ ಸಮಾರಂಭವನ್ನು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು   

ರಂಭಾಪುರಿ ಪೀಠ (ಬಾಳೆಹೊನ್ನೂರು): ವಿಚಾರ–ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ಬುದ್ಧಿ ವಿಕಸನಗೊಂಡಂತೆ ಭಾವನೆಗಳೂ ಬೆಳೆಯುವ ಅವಶ್ಯಕತೆ ಇದೆ. ಸಹನೆಯ ಗುಣ ಹಾಗೂ ತಾಳ್ಮೆಯಿಂದ ಮನಸ್ಸನ್ನು ವಿಕಸನಗೊಳಿಸಬೇಕು ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ರಂಭಾಪುರಿ ಪೀಠದಲ್ಲಿ ಕೈಗೊಂಡ 34ನೇ ವರ್ಷದ ಶ್ರಾವಣ ತಪೋನುಷ್ಠಾನದ ಪ್ರಯುಕ್ತ ನಡೆದ ಪುರಾಣ ಪ್ರವಚನ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಭಾರತೀಯ ಪುಣ್ಯ ಭೂಮಿಯಲ್ಲಿ ಹಲವು ಆಚರಣೆಗಳು ಬೆಳೆದು ಬಂದಿವೆ. ಹಿಂದೂಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು. ಮಠ ಮಂದಿರಗಳಲ್ಲಿ ಶಿವನಾಮ ಸ್ಮರಣೆ ಸತ್ಕಥಾ ಶ್ರವಣಗಳು ನಡೆಯುತ್ತಾ ಬಂದಿವೆ. ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗುರಿಗಳಿಲ್ಲದ ಜೀವನ ಮತ್ತು ಹಣ ಸಂಪಾದನೆಯನ್ನೇ ಗುರಿಯಾಗಿಟ್ಟುಕೊಂಡ ಮನುಷ್ಯ ಬದುಕಲು ಬೇಕಾದ ಜ್ಞಾನವನ್ನು ಪಡೆಯುತ್ತಿಲ್ಲ. ಚಿಂತೆ ಚಿಂತನಗೊಂಡಾಗ ಮಾನವನ ಬದುಕು ಸಾರ್ಥಕಗೊಳ್ಳುವುದು ಎಂದರು.

ADVERTISEMENT

ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಮಾತನಾಡಿ, ಮನುಷ್ಯನಿಗೆ ಮನುಷ್ಯತ್ವ, ಮುಮುಕ್ಷತ್ವ ಮತ್ತು ದೊಡ್ಡವರ ಸಹವಾಸ ದೊರಕಲು ಭಗವಂತನ ಕೃಪೆ ಅಗತ್ಯ, ಅರಿವು, ಆದರ್ಶಗಳನ್ನು ಬೋಧಿಸಿ ಸನ್ಮಾರ್ಗಕ್ಕೆ ಜನ ಸಮುದಾಯ ಬರುವಂತೆ ಪ್ರೇರಣೆ ನೀಡಿದ ಮಹಾನ್ ಶಕ್ತಿ ರೇಣುಕಾಚಾರ್ಯರು ಎಂದರು.

ಶ್ರಾವಣ ಒಂದು ತಿಂಗಳ ಕಾಲ ಅವರ ಆದರ್ಶ ಚಿಂತನಗಳನ್ನು ಅರಿಯಲು ಎಲ್ಲರಿಗೂ ಸುವರ್ಣಾವಕಾಶ ದೊರೆತಿರಲು ಗುರುವೇ ಕಾರಣಿಭೂತ ಎಂದರು.

ಲೋಕಕಲ್ಯಾಣಾರ್ಥವಾಗಿ ರಂಭಾಪುರಿ ಸ್ವಾಮೀಜಿ ಬೆಳಿಗ್ಗೆ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವದಿಸಿದರು.  ಶ್ರಾವಣದ ಅಂಗವಾಗಿ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನಡೆಯಿತು.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿ, ಹುಡಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿ, ಶಿವಮೊಗ್ಗದ ಎಸ್.ಎಚ್.ಸಿದ್ಧಣ್ಣ, ನಾಗರನವಿಲೆಯ ಪವನಕುಮಾರ್, ಸಿದ್ದೇಶ್ವರ ಶಾಸ್ತ್ರಿ, ಗಂಗಾಧರ ಹಿರೇಮಠ, ರೇಣುಕಾಚಾರ್ಯ ಗುರುಕುಲ ಕುಲಪತಿ ಬೆಳಗಾಲಪೇಟೆ ಹಿರೇಮಠದ ಸಿದ್ಧಲಿಂಗಯ್ಯ ಶಾಸ್ತ್ರಿ, ಶಿಕ್ಷಕ ವೀರೇಶ ಕುಲಕರ್ಣಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.