ADVERTISEMENT

ಶೃಂಗೇರಿ: ಸಂಪರ್ಕ ಕಡಿತದ ಭೀತಿ

ಅರ್ಧ ಶತಮಾನಕ್ಕೂ ಹಿಂದಿನ ಕಿರಿದಾದ ರಸ್ತೆ, ಶಿಥಿಲ ಸೇತುವೆ, ಅಪಾಯ

ರಾಘವೇಂದ್ರ ಕೆ.ಎನ್
Published 29 ನವೆಂಬರ್ 2022, 16:24 IST
Last Updated 29 ನವೆಂಬರ್ 2022, 16:24 IST
ಕೆರೆ ಗ್ರಾಮ ಪಂಚಾಯಿತಿ ಬಳಿ ತುಂಗಾ ನದಿಗೆ ಅಡ್ಡವಾಗಿ ಕಟ್ಟಿರುವ ಗುಲುಗುಂಜಿ ಮನೆ ಸೇತುವೆಯ ದುಸ್ಥಿತಿ
ಕೆರೆ ಗ್ರಾಮ ಪಂಚಾಯಿತಿ ಬಳಿ ತುಂಗಾ ನದಿಗೆ ಅಡ್ಡವಾಗಿ ಕಟ್ಟಿರುವ ಗುಲುಗುಂಜಿ ಮನೆ ಸೇತುವೆಯ ದುಸ್ಥಿತಿ   

ಶೃಂಗೇರಿ: ಇಲ್ಲಿಂದ ಮಂಗಳೂರು ಸಂಪರ್ಕ ಕಲ್ಪಿಸುವರಾಷ್ಟ್ರೀಯ ಹೆದ್ದಾರಿ-169ರ ಗುಲಗುಂಜಿಮನೆ ಸೇತುವೆ ಮತ್ತು ಕೊರಕ್ಕನಹಳ್ಳ ಸೇತುವೆಗಳು ಶಿಥಿಲಗೊಂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿವೆ.

1955ರಲ್ಲಿ ಮೈಸೂರು ಸಂಸ್ಥಾನದ ಮುಖ್ಯಮುಂತ್ರಿ ಹನುಮಂತಯ್ಯ ಈ ಎರಡು ಸೇತುವೆಗಳಿಗೆ ಶಂಕುಸ್ಥಾಪನೆ ನೇರವೇರಿಸಿದ್ದು, 1960 ಮೇ 18ರಿಂದ ವಾಹನ ಸಂಚಾರ ಪ್ರಾರಂಭಗೊಂಡಿತ್ತು. ಈಗ ಶೃಂಗೇರಿ ಕ್ಷೇತ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ವಾಹನಗಳ ದಟ್ಟಣೆ ಹೆಚ್ಚಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿಗೆ ಸಂಪರ್ಕ ಸಾಧಿಸುವ ಈ ರಸ್ತೆಯು 21 ಕಿ.ಮೀ. ಉದ್ದದಷ್ಟು ಅಗಲ ಕಿರಿದಾಗಿದೆ. ಕೇವಲ 3.5 ಮೀ ಅಗಲದ ಈ ರಸ್ತೆ ಮತ್ತು ಸೇತುವೆಯಲ್ಲಿ ಘನವಾಹನ ಚಲಿಸಲು ಹರಸಾಹಸ ಪಡಬೇಕಾಗಿದೆ. ಹಲವೆಡೆ ರಸ್ತೆ ಮತ್ತು ಸೇತುವೆಗಳು ತಗ್ಗಿನಲ್ಲಿವೆ. ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತವೆ. ಸೇತುವೆ ಸಂಪರ್ಕ ಕಡಿತಗೊಂಡರೆ, ಕೆರೆಕಟ್ಟೆ ಭಾಗದ ಜನರು ಪಟ್ಟಣಕ್ಕೆಂದು ಕಾರ್ಕಳಕ್ಕೆ ತೆರಳಬೇಕಾಗುತ್ತದೆ.

ಕೆರೆಕಟ್ಟೆ ರಸ್ತೆ ಶೃಂಗೇರಿ ಕ್ಷೇತ್ರದ ಪಾಲಿಗೆ ಜೀನವಾಡಿ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು ಸೇರಿದಂತೆ ಮಲೆನಾಡಿನ ಜನತೆ ಆಸ್ಪತ್ರೆಗಾಗಿ ಮಂಗಳೂರನ್ನೇ ಆಶ್ರಯಿಸಿದ್ದಾರೆ. ಕಾರ್ಕಳ ಮತ್ತು ಮಂಗಳೂರಿನಿಂದ ಪ್ರತಿನಿತ್ಯ ನೂರಾರು ಲಾರಿಗಳೂ ಇಲ್ಲಿ ಸಂಚರಿಸುತ್ತವೆ.

ADVERTISEMENT

‘ಈ ರಸ್ತೆಯಲ್ಲಿ ಮಳೆಗಾಲದಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಪ್ರಾಯಾಸಕರ’ ಎನ್ನುತ್ತಾರೆ ಆಂಬುಲೆನ್ಸ್ ಚಾಲಕ ಸುರೇಶ್.

ದಕ್ಷಿಣ ಕನ್ನಡ, ಕಾರ್ಕಳ ಮುಂತಾದ ಕಡೆಯಿಂದ ದಿನನಿತ್ಯ ಬ್ಯಾಂಕ್, ಹಲವು ಇಲಾಖೆಯ ಉದ್ಯೋಗಸ್ಥರು ಕೆರೆಕಟ್ಟೆ ಮಾರ್ಗವಾಗಿ ಬಸ್ಸಿನಲ್ಲಿ ಓಡಾಡುತ್ತಾರೆ. ಶೃಂಗೇರಿಯಿಂದ ಹಲವು ಶಿಕ್ಷಕರು, ಬ್ಯಾಂಕ್ ಉದ್ಯೋಗಿಗಳು ಕರಾವಳಿಗೆ ಹೋಗುತ್ತಾರೆ. ಅವರ ಬವಣೆಗೆ ಕೊನೆಯಿಲ್ಲ. ನಗರ ಪ್ರದೇಶದ ಚಾಲಕರು ಇಲ್ಲಿ ಅವಘಡ ಮಾಡಿಕೊಳ್ಳುವುದೇ ಹೆಚ್ಚು.

ಧರ್ಮಸ್ಥಳ, ಸುಬ್ರಹ್ಮಣ್ಯ, ಕಾರ್ಕಳ, ಮೂಡುಬಿದಿರೆ, ಕಾಸರಗೋಡು ಮತ್ತಿತರೆಡೆ ಹೋಗಲು ಸಮೀಪದ ರಸ್ತೆ ಇದಾಗಿದೆ. ಸರ್ಕಾರ ಸೇತುವೆ ಮತ್ತು ರಸ್ತೆಯನ್ನು ಮರುನಿರ್ಮಾಣ ಮಾಡಬೇಕು’ ಎನ್ನುತ್ತಾರೆ ಕುರಾದಮನೆ ವೆಂಕಟೇಶ್.

ರಸ್ತೆ ದುರಸ್ತಿ, ಸೇತುವೆ ಮರುನಿರ್ಮಾಣದ ಮೂಲಕ ಹತ್ತಾರು ಜನರು ಜೀವ ಕಳೆದುಕೊಳ್ಳುತ್ತಿರುವುದನ್ನು ತಪ್ಪಿಸಿ ಎಂದು ಸ್ಥಳೀಯರಾದ ಎ.ಎಸ್ ನಯನಾ, ಅಜ್ರತ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.