ಶೃಂಗೇರಿ: ಪೂರ್ವಜರು ಕಲಿಸಿರುವ ಮೌಲ್ಯಗಳನ್ನು ಉಳಿಸಿಕೊಂಡು ಹೋಗಬೇಕು. ದೇಶದ ಸಂಸ್ಕೃತಿ, ಸಂಸ್ಕಾರವನ್ನು ಪ್ರೀತಿಸಬೇಕು ಎಂದು ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ್ ಶೆಟ್ಟಿ ಹೇಳಿದರು.
ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುರುವಾರ ಆಯೋಜಿಸಿದ್ದ ವಾರ್ಷಿಕ ಚಟುವಟಿಕೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರಕೃತಿ ನಮಗೆ ಅಪಾರ ಕೊಡುಗೆ ನೀಡಿದೆ. ಹುಡುಗಾಟದ ಬದುಕು ವ್ಯರ್ಥ, ಹುಡುಕಾಟದ ಬದುಕು ಸಾರ್ಥಕ ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಇರಬೇಕು. ಯುವಕರು ಹಿಂಸಾತ್ಮಕ ಚಟುವಟಿಕೆಯಿಂದ ದೂರವಿದ್ದು, ಸಾಹಿತ್ಯಿಕ ಬದುಕನ್ನು ತಮ್ಮದಾಗಿಸಿ, ಜ್ಞಾನರ್ಜನೆ ಮಾಡಿಕೊಳ್ಳಬೇಕು. ಆಧುನಿಕತೆಯ ವ್ಯಾಮೋಹದಿಂದ ಹೊರ ಬಂದು ಗ್ರಾಮೀಣ ಬದುಕನ್ನು ಪ್ರೀತಿಸಬೇಕು’ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ತ್ರಿಮೂರ್ತಿ ಮಾತನಾಡಿ, ಜೀವನದಲ್ಲಿ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯುವಶಕ್ತಿ ದೇಶದ ಸಂಸ್ಕಾರವನ್ನು ಉಳಿಸಿ, ದೇಶಭಕ್ತಿ ಮೆರೆಯಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಭಾರತಿ ಮಾತನಾಡಿ, ವ್ಯಕ್ತಿ ಸಮಾಜದಲ್ಲಿ ಉತ್ತಮ ಹೆಸರು ಗಳಿಸಬೇಕಾದರೆ ಸ್ವ ಸಾಮರ್ಥ್ಯ, ಮಾನವೀಯತೆ ಹಾಗೂ ನೈತಿಕತೆ ಮಹತ್ವದ್ದಾಗಿವೆ. ವಿದ್ಯಾರ್ಥಿ ದೆಸೆಯಲ್ಲಿ ಬದುಕನ್ನು ರೂಪಿಸಿಕೊಳ್ಳುವಾಗ ಹೋರಾಟದ ಮನೋಭಾವನೆಯಿಂದ ಮುನ್ನುಗ್ಗಬೇಕು. ಶಿಕ್ಷಣ ಉದ್ಯೋಗ ದೊರಕಿಸಿಕೊಡುತ್ತದೆ. ಆದರೆ, ಕಾಲೇಜಿನಲ್ಲಿ ಕಲಿತ ಮೌಲ್ಯಗಳು ಜೀವನದುದ್ದಕ್ಕೂ ಸಾಧನೆಯ ಹಾದಿಗೆ ಪೂರಕವಾಗಿರುತ್ತವೆ ಎಂದರು.
ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರದೀಪ್ ಯಡದಾಳು, ರಾಮಣ್ಣ, ಸಾಂಸ್ಕೃತಿಕ ವೇದಿಕೆಯ ಆಶಾ, ಪ್ರೊ. ರಾಘವೇಂದ್ರ ರೆಡ್ಡಿ, ಬಿ.ಜಿ ಆಶಾ, ಬಿಂಬ, ಸರಸ್ವತಿ, ಚೇತನ್, ಅಬೂಬಕ್ಕರ್, ರವಿಶಶಂಕರ್, ಶಿವಮೂರ್ತಿ, ಮೇಘಾನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.