ADVERTISEMENT

ಸಾವರ್ಕರ್‌ ಸಮಗ್ರ ಇತಿಹಾಸ ಸಿದ್ದರಾಮಯ್ಯಗೆ ಗೊತ್ತಿಲ್ಲ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 16:27 IST
Last Updated 15 ಆಗಸ್ಟ್ 2022, 16:27 IST
ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಪೌರಕಾರ್ಮಿಕರಾದ ನಾಗಮ್ಮ ಅವರು ಭಾನುವಾರ ರಾತ್ರಿ 12ಗಂಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಸಿ.ಟಿ.ರವಿ, ವರಸಿದ್ಧಿ ವೇಣುಗೋಪಾಲ್‌ ಇದ್ದರು.
ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಪೌರಕಾರ್ಮಿಕರಾದ ನಾಗಮ್ಮ ಅವರು ಭಾನುವಾರ ರಾತ್ರಿ 12ಗಂಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಸಿ.ಟಿ.ರವಿ, ವರಸಿದ್ಧಿ ವೇಣುಗೋಪಾಲ್‌ ಇದ್ದರು.   

ಚಿಕ್ಕಮಗಳೂರು: ‘ವೀರ ಸಾವರ್ಕರ್‌ ಬಗ್ಗೆ ಬ್ರಿಟಿಷರು ದಾಖಲಿಸಿರುವ ಅಂಶಗಳು ಇಂಗ್ಲೆಂಡ್‌ನಲ್ಲಿರುವ ಇಂಡಿಯನ್‌ ಲೈಬ್ರರಿಯ ಪುಸ್ತಕಗಳಲ್ಲಿ ಇವೆ. ಅವುಗಳನ್ನು ಅಧ್ಯಯನ ಮಾಡಿದರೆ ಸಿದ್ದರಾಮಯ್ಯ ಅವರಿಗೆ ಸಾವರ್ಕರ್‌ ಸಾಧನೆ ತಿಳಿಯುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾವರ್ಕರ್‌ ಅವರು ಎರಡು ಕರಿನೀರಿನ ಶಿಕ್ಷೆ ಅನುಭವಿಸಿದವರು. ಪತಿತ ಪಾವನ ಮಂದಿರ ನಿರ್ಮಿಸಿದರು. ಇತಿಹಾಸದ ಸತ್ಯಗಳನ್ನು ಏಕಮುಖವಾಗಿ ನೋಡದೆ ಸಮಗ್ರವಾಗಿ ಅರ್ಥೈಸಿಕೊಳ್ಳಬೇಕು’ ಎಂದರು.

‘ಸಾವರ್ಕರ್ ಅವರನ್ನು ಸಮಗ್ರ ದೃಷ್ಟಿಯಿಂದ ನೋಡಬೇಕು, ಅವರ ಪ್ರೇರಣೆಯಿಂದ ಎಷ್ಟು ಜನ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು, ಹೋರಾಟ ತೀವ್ರತೆ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು’ ಎಂದರು.

ADVERTISEMENT

‘ಸ್ವಾತಂತ್ರ್ಯ ಅಹಿಂಸೆಯಿಂದ ಬಂತು ಎಂಬುದು ಅರ್ಧ ಸತ್ಯ. ಹೋರಾಟದಲ್ಲಿ ಕ್ರಾಂತಿಕಾರಿಗಳು ಮತ್ತು ಅಹಿಂಸಾವಾದಿಗಳು ಇಬ್ಬರದ್ದೂ ಪಾತ್ರ ಇದೆ. ಇವತ್ತಿನ ಕಾಂಗ್ರೆಸ್‌ನ ಯಾವೊಬ್ಬರ ಕುಟುಂಬದವರೂ ಸಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿಲ್ಲ. ಅವತ್ತಿನ ಕಾಂಗ್ರೆಸ್‌ ಬೇರೆ, ಇವತ್ತಿನದ್ದು ಬೇರೆ’ ಎಂದು ಹೇಳಿದರು.

‘ಸಚಿವರು ಇಲ್ಲದಿದ್ದ ಜಿಲ್ಲೆಗಳಲ್ಲಿ ಅಧಿಕಾರಿಗಳು ಧ್ವಜಾರೋಹಣ ನೆರವೇರಿಸಬೇಕು ಎಂದು ಧ್ವಜ ಸಂಹಿತೆಯಲ್ಲಿ ಸ್ಪಷ್ಟವಾಗಿ ಉಲ್ಲೇಖ ಇದೆ. ಈ ಬಾರಿ ಮೂರು ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಧ್ವಜ ಹಾರಿಸಲು ಅವಕಾಶ ಸಿಕ್ಕಿದೆ. ಈ ಪೈಕಿ ನಮ್ಮ ಜಿಲ್ಲೆಯೂ ಒಂದು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.