ADVERTISEMENT

ಬಿಜೆಪಿಯವರಿಂದ ಕಪ್ಪುಬಟ್ಟೆ ಪ್ರದರ್ಶನ; ಕಾಂಗ್ರೆಸ್‌ನವರಿಂದ ಪ್ರತಿರೋಧ

ಮಳೆ ಹಾನಿ ಪ್ರದೇಶ ವೀಕ್ಷಣೆಗೆ ಜಿಲ್ಲೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 20:12 IST
Last Updated 19 ಆಗಸ್ಟ್ 2022, 20:12 IST
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮೆಣಸೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮೆಣಸೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದರು.   

ಚಿಕ್ಕಮಗಳೂರು: ಮಳೆ ಹಾನಿ ವೀಕ್ಷಣೆಗೆಜಿಲ್ಲೆಗೆ ಬಂದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಹನದಲ್ಲಿ ಸಾಗುವಾಗ ಕೊಪ್ಪ ತಾಲ್ಲೂಕಿನ ಮಕ್ಕಿಕೊಪ್ಪ ಹಾಗೂ ಶೃಂಗೇರಿ ತಾಲ್ಲೂಕಿನ ಮೆಣಸೆಯಲ್ಲಿ ಬಿಜೆಪಿಯವರು ಕಪ್ಪು ಬಟ್ಟೆ, ಸಾವರ್ಕರ್‌ ಚಿತ್ರ, ಬಿಜೆಪಿ ಬಾವುಟ ಪ್ರದರ್ಶಿಸಿದರು. ಬಿಜೆಪಿಯವರ ನಡೆಗೆ ಮೆಣಸೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು.

ಮಕ್ಕಿಕೊಪ್ಪದ ವೃತ್ತದಲ್ಲಿ ವಾಹನ ಸಾಗುವಾಗ ಬಿಜೆಪಿಯವರು ಪ್ರತಿಭಟನೆಗೆ ಮುಂದಾದರು. ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಪ್ರತಿಭಟನಕಾರರನ್ನು ಚದುರಿಸಿದರು.

ಮೆಣಸೆಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಬಳಿ ಸಿದ್ದರಾಮಯ್ಯ ಅವರ ವಾಹನ ತೆರಳುವಾಗ ಬಿಜೆಪಿಯ ಕೆಲವರು ಕಪ್ಪು ಬಟ್ಟೆ ಪ್ರದರ್ಶಿಸಿದರು. ಕಾಂಗ್ರೆಸ್‌ನವರು ಪ್ರತಿರೋಧ ವ್ಯಕ್ತಪಡಿಸಿದರು. ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಎರಡೂ ಗುಂಪಿನವರನ್ನು ಚದುರಿಸಿದರು.

ADVERTISEMENT

ಸಿದ್ದರಾಮಯ್ಯ ಅವರು ಶೃಂಗೇರಿ ಸಮೀಪದ ನೇರಳೆಕೂಡಿಗೆಯಲ್ಲಿ ಮಳೆ ಹಾನಿ ಪ್ರದೇಶವನ್ನು ವೀಕ್ಷಿಸಿದರು. ಗುಡ್ಡೆ ತೋಟದಲ್ಲಿ ಭೂಕುಸಿತ ಪ್ರದೇಶ, ಕೊಗ್ರೆ ಭಾಗದಲ್ಲಿ ಸೇತುವೆ ಹಾನಿ ಜಾಗ ವೀಕ್ಷಿಸಿದರು.

ಮಠಗಳಿಗೆ ಭೇಟಿ, ಶಾರದಾಂಬೆ ದರ್ಶನ
ಸಿದ್ದರಾಮಯ್ಯ ಅವರು ಶೃಂಗೇರಿಯಲ್ಲಿ ಶಾರದಾಂಬೆ ದರ್ಶನ ಮಾಡಿ, ಪೂಜೆ ಸಲ್ಲಿಸಿದರು. ನಂತರ ಶಾರದಾ ಪೀಠದಲ್ಲಿ ವಿಧುಶೇಖರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದರು. ಪ್ರಸನ್ನ ವೀರಸೋಮೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

‘ಸರ್ಕಾರದ ಪ್ರಾಯೋಜಿತ ಪ್ರತಿಭಟನೆ’
‘ಮಡಿಕೇರಿಯಲ್ಲಿ ಆ.18ರಂದು ಮೊಟ್ಟೆ ಎಸೆದದ್ದು, ಕಪ್ಪು ಬಾವುಟ ಪ್ರದರ್ಶಿಸಿದ್ದು ಎಲ್ಲವೂ ಸರ್ಕಾರದ ಪ್ರಾಯೋಜಿತ ಪ್ರತಿಭಟನೆ. ಅಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾನೂನು–ಸುವವ್ಯಸ್ಥೆ ಕಾಪಾಡಲು ವಿಫಲರಾಗಿದ್ದಾರೆ. ಇದನ್ನು ಖಂಡಿಸಿ ಇದೇ 26ರಂದು ಕೊಡಗಿನ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಸ್ಪಿ ಅವರು ದುರುದ್ದೇಶದಿಂದ ಆರ್‌ಎಸ್‌ಎಸ್‌,‌ ಬಜರಂಗ ದಳ, ಸಂಘ ಪರಿವಾರದ ಜತೆ ಶಾಮೀಲಾಗಿ ಪ್ರತಿಭಟನೆ ಮಾಡಲು ಬಿಟ್ಟಿದ್ದಾರೆ’ ಎಂದು ಆರೋಪಿಸಿದರು.

‘18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 5.23 ಲಕ್ಷ ಹೆಕ್ಟೇರ್‌ ಬೆಳೆ ಹಾನಿ ಸಂಭವಿಸಿದೆ. ಮಳೆ ಹಾನಿ ಪ್ರದೇಶ ವೀಕ್ಷಿಸಿ ನಷ್ಟದ ಕುರಿತು ವಿಧಾನಸಭೆಯಲ್ಲಿ ಚರ್ಚಿಸಿ, ಸರ್ಕಾರದ ಗಮನ ಸೆಳೆಯುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.