ADVERTISEMENT

ಆಲ್ದೂರು: ಮುಕ್ತಿದಾಮದಲ್ಲಿ ಸಿಲಿಕಾನ್ ಚೇಂಬರ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:36 IST
Last Updated 5 ಜನವರಿ 2026, 6:36 IST
ವೀರಭದ್ರೇಶ್ವರ ಮುಕ್ತಿಧಾಮದಲ್ಲಿ ನೂತನ ಸಿಲಿಕಾನ್ ಚೇಂಬರ್ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನಡೆಯಿತು
ವೀರಭದ್ರೇಶ್ವರ ಮುಕ್ತಿಧಾಮದಲ್ಲಿ ನೂತನ ಸಿಲಿಕಾನ್ ಚೇಂಬರ್ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನಡೆಯಿತು   

ಆಲ್ದೂರು: ಗಾಳಿಗಂಡಿ ಮತ್ತು ಮೇಲ್ ಬನ್ನೂರು ಗ್ರಾಮದ ಬಳಿಯಿರುವ ವೀರಭದ್ರೇಶ್ವರ ಮುಕ್ತಿಧಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ನೂತನ ಸಿಲಿಕಾನ್ ಚೇಂಬರ್ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನಡೆಯಿತು. 

ಗಾಳಿಗಂಡಿಯ ಶ್ರೀವಿನಾಯಕ ಭಜನಾ ಮಂದಿರಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಕ್ತಿಧಾಮ ಸಮಿತಿಯ ಬಿ.ಕೆ.ನಿಂಗೇಗೌಡ, ‘ಆಲ್ದೂರು ಹೋಬಳಿಯಲ್ಲಿ ಮುಕ್ತಿಧಾಮ ನಿರ್ಮಿಸಿ, ಅಲ್ಲಿ ಸಿಲಿಕಾನ್ ಚೇಂಬರ್ ಅಳವಡಿಕೆ ಮಾಡಬೇಕೆಂಬುವುದು 15 ವರ್ಷಗಳ ಚಿಂತನೆ. ಆಲ್ದೂರು ಸುತ್ತಮುತ್ತ ರುದ್ರಭೂಮಿಗಳು ರಸ್ತೆ ಪಕ್ಕದಲ್ಲಿ ಇದ್ದರೂ, ಅಲ್ಲಿ ಅಗ್ನಿಸ್ಪರ್ಶ ಮಾಡುವ ಚಿತಾಗಾರದ ಕೊರತೆ ಇತ್ತು. ಸಿಲಿಕಾನ್ ಚೇಂಬರ್ ಇರುವಂತಹ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶವಿರಲಿಲ್ಲ. ಚಿಕ್ಕಮಗಳೂರು, ಉಪ್ಪಳ್ಳಿ ಇಲ್ಲವೇ ತೇಗೂರಿಗೆ ಶವ ಸಾಗಿಸಬೇಕಾಗಿತ್ತು. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಿಲಿಕಾನ್ ಚೇಂಬರ್ ಇರುವ ಚಿತಾಗಾರದ ಕನಸು ನನಸಾಗಿದೆ. ಸಮಿತಿ ರಚನೆ ಮಾಡಿದ ಬಳಿಕ ಪದಾಧಿಕಾರಿಗಳು, ಸದಸ್ಯರು ಉತ್ತಮ ಸಹಕಾರ ನೀಡಿದ್ದರಿಂದ ಕೆಲಸ ಪರಿಪೂರ್ಣವಾಗಿದೆ’ ಎಂದರು.

ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಸುಧೀರ್ ಜೈನ್ ಮಾತನಾಡಿ, ‘ರಾಜ್ಯದಲ್ಲಿ 250 ಯೋಜನಾ ಕಚೇರಿಗಳಿದ್ದು, 6.52 ಲಕ್ಷ ಸಂಘಗಳು ಸಕ್ರಿಯವಾಗಿದೆ. ಸಮುದಾಯದ ಅಭಿವೃದ್ಧಿ ಯೋಜನೆಯ ಭಾಗವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಕೊರತೆಯಾದಾಗ ಶಿಕ್ಷಕರ ನಿಯೋಜನೆ, ಶಾಲೆಗೆ ಅಗತ್ಯವಿರುವ ಮೇಜು–ಕುರ್ಚಿಗಳ ಕೊಡುಗೆ, ಶುದ್ಧಗಂಗಾ ಯೋಜನೆ ಅಡಿ ಕುಡಿಯುವ ನೀರಿನ ಸಹಕಾರ, ನಿರ್ಗತಿಕರಿಗೆ–ವೃದ್ಧರಿಗೆ ಮಾಸಾಶನ ಹೀಗೆ ಹಲವಾರು ಜನಪರ ಯೋಜನೆಗಳಿವೆ. ಸಿಲಿಕಾನ್ ಚೇಂಬರ್‌ಗೆ ಒಟ್ಟು ₹2.5 ಲಕ್ಷ ಅನುದಾನವಿದ್ದು, ಪ್ರಸ್ತುತ ₹1 ಲಕ್ಷ ಒದಗಿಸಲಾಗಿದೆ. ಮುಕ್ತಿಧಾಮದ ಬಳಿ ಶೌಚಾಲಯ, ಕುಡಿಯುವ ನೀರು, ಸ್ವಚ್ಛತೆ ಮತ್ತು ದಹನ ಮಾಡಲು ಕಟ್ಟಿಗೆ ದಾಸ್ತಾನು ಕೊಠಡಿಗೆ ಬಾಕಿ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬಹುದು. ತಾಲೂಕಿನಲ್ಲಿ 785 ಸಿಲಿಕಾನ್ ಚೇಂಬರ್ ನಿರ್ಮಾಣ ಮಾಡಿದ್ದು, ರಾಜ್ಯದಾದ್ಯಂತ ₹10 ಕೋಟಿ ವ್ಯಯಮಾಡಿದೆ’ ಎಂದು ತಿಳಿಸಿದರು.

ADVERTISEMENT

ಮುಕ್ತಿಧಾಮ ಕಾರ್ಯದರ್ಶಿ ನಾಗೇಶ್ ಎಂ. ಅವರು, ಖರ್ಚು ವೆಚ್ಚದ ವರದಿ ಮಂಡಿಸಿ, ‘ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್ ₹1 ಲಕ್ಷ ಒದಗಿಸಿದ್ದು, ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ವತಿಯಿಂದ ₹1 ಲಕ್ಷ, ಶಾಸಕಿ ನಯನಾ ಮೋಟಮ್ಮ ಅವರು ರಸ್ತೆ ಅಭಿವೃದ್ಧಿಗೆ ₹2 ಲಕ್ಷ ಅನುದಾನ ಪಟ್ಟಿಗೆ ಸೇರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರು ಅನುದಾನದ ಭರವಸೆ ನೀಡಿದ್ದಾರೆ ಎಂದು ಹೇಳಿ, ಮುಕ್ತಿಧಾಮಕ್ಕೆ ಅನುದಾನ ದೇಣಿಗೆ ಖರ್ಚು ಎಲ್ಲಾ ಸೇರಿ ಒಟ್ಟು ₹3,97,250 ವೆಚ್ಚವಾಗಿದೆ’ ಎಂದು ತಿಳಿಸಿದರು.

ಆಲ್ದೂರು ಪಂಚಾಯಿತಿ ಉಪಾಧ್ಯಕ್ಷ ಭರತ್ ಎ.ಬಿ., ದೊಡ್ಡಮಾಗರವಳ್ಳಿ ಪಂಚಾಯಿತಿ ಸದಸ್ಯೆ ಪದ್ಮಾವತಿ, ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಎಚ್.ಪಿ. ನಾರಾಯಣಗೌಡ, ಬಿಲ್ಲವ ಸಂಘದ ಗೌರವಾಧ್ಯಕ್ಷ ಬನ್ನೂರು ಭೋಜ ಪೂಜಾರಿ, ಮುಕ್ತಿದಾಮ ಸಮಿತಿಯ ಗೌರವಾಧ್ಯಕ್ಷ ರಮೇಶ್ ಆಚಾರ್ಯ ಗಾಳಿಗಂಡಿ, ಉಪಾಧ್ಯಕ್ಷ ಸುಂದರ ಎನ್., ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ದೊಡ್ಡಮಾಗರವಳ್ಳಿ, ಸಹಕಾರ್ಯದರ್ಶಿ ವಾದಿರಾಜ್ ಪಿ., ಖಜಾಂಚಿ ತಿಮ್ಮಪ್ಪ, ಸಂಚಾಲಕರಾದ ಕೆ.ಎಲ್. ರಾಜು, ಅನಿಲ್ ಬಿ.ಎಚ್., ಬಿ.ಟಿ. ನವೀನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.