ಕಡೂರು: ದುಶ್ಚಟ ಮತ್ತು ಮದ್ಯವ್ಯಸನದಿಂದ ಹಲವು ಕುಟುಂಬಗಳು ತೊಂದರೆಗೆ ಸಿಲುಕಿವೆ. ವ್ಯಸನ ಮುಕ್ತ ಸಮಾಜ ನಿರ್ಮಾಣ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರಿಯಾಗಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡೂರು ತಾಲ್ಲೂಕು, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಜನ ಜಾಗೃತಿ ವೇದಿಕೆ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಸಹಯೋಗದೊಂದಿಗೆ ಪಟ್ಟಣದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶನಿವಾರ ಅಯೋಜಿಸಿದ್ದ ‘1980ನೇ ಮದ್ಯವರ್ಜನʼ ಶಿಬಿರದಲ್ಲಿ ಅವರು ಮಾತನಾಡಿದರು.
ಬಡತನ ನಿರ್ಮೂಲನೆ, ಕೂಲಿ ಕಾರ್ಮಿಕರ ಸಂಸಾರಗಳಿಗೆ ಬದುಕು ರೂಪಿಸಿಕೊಳ್ಳುವ ಸ್ವಾವಲಂಬಿ ಯೋಜನೆಗಳ ಮೂಲಕ ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯಗಳನ್ನು ಈಡೇರಿಸಲು ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 85 ಮದ್ಯವರ್ಜನ ಶಿಬಿರಗಳು ನಡೆದಿದ್ದು ಸುಮಾರು 1,375 ಮಂದಿ ಸುಖ ಸಂಸಾರದ ನಡೆಸುತ್ತಿದ್ದಾರೆ ಎಂದರು.
ಶಿಬಿರದ ಉದ್ಘಾಟನೆ ನೆರವೇರಿಸಿದ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಶಿಕ್ಷಣದ ಕೊರತೆ ನಮ್ಮನ್ನು ದುಃಶ್ಚಟಗಳತ್ತ ದೂಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಎಲ್ಲರೂ ಸುಶಿಕ್ಷಿತರಾಗಬೇಕು. ಪುರಸಭೆಯು ಮದ್ಯಪಾನ ಬಿಡಿಸುವ ಸಂಸ್ಥೆಗೆ ಕಡೂರು ಪಟ್ಟಣದಲ್ಲಿ ಕಟ್ಟಡವನ್ನು ನೀಡಿದ್ದು ಅಲ್ಲಿ ಸೇರಿ ಚಿಕಿತ್ಸೆ ಪಡೆದು, ಹಲವರು ಮದ್ಯಪಾನ ತ್ಯಜಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರವು ನಡೆಸುತ್ತಿರುವ ಇಂಥ ಕಾರ್ಯಕ್ರಮಗಳಿಗೆ ಪುರಸಭೆ ನಿರಂತರವಾಗಿ ಸಹಕಾರ ನೀಡುತ್ತಿದೆ ಎಂದರು.
ವೀರಭದ್ರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಭರತ್ ಕೆಂಪರಾಜ್ ಮಾತನಾಡಿ, ಸರ್ಕಾರ ಒಂದೆಡೆ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕರೆ ನೀಡುತ್ತದೆ. ಹಲವು ಯೋಜನೆಗಳ ಮೂಲಕ ಜನರಿಗೆ ಸುಭದ್ರ ಬದುಕು ಕಟ್ಟಲು ನೆರವಾಗುತ್ತೇವೆ ಎನ್ನುತ್ತದೆ. ಆದರೆ ಸ್ವತಃ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡಿ ಜನರನ್ನು ವ್ಯಸನಿಗಳನ್ನಾಗಿ ಮಾಡುತ್ತಿದೆ. ಮದ್ಯಪಾನದಿಂದ ಸಮಾಜದ ವ್ಯವಸ್ಥೆಯೆ ಹದಗೆಟ್ಟಿದ್ದು, ಒಂದು ರೀತಿಯಲ್ಲಿ ಶ್ರೀ ಕ್ಷೇತ್ರವು ಶಾಪ ವಿಮೋಚನೆಯ ಕಾರ್ಯ ಮಾಡುತ್ತಿದೆ ಎಂದರು.
ಶಿಬಿರಾಧಿಕಾರಿ ದಿವಾಕರ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿ ಮುಖಂಡ ಜಿಗಣೆಹಳ್ಳಿ ನೀಲಕಂಠಪ್ಪ ಮಾತನಾಡಿದರು. ಜನ ಜಾಗೃತಿ ವೇದಿಕೆಯ ಅಜ್ಜಂಪುರದ ಎ.ಸಿ.ಚಂದ್ರಪ್ಪ, 1980ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷ ರವಿಶಂಕರ್ ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು.
ಕಡೂರು ತಾಲ್ಲೂಕು ಯೋಜನಾಧಿಕಾರಿ ಕೆ.ಬೇಬಿ, ಮೇಲ್ವಿಚಾರಕ ತಿಮ್ಮಪ್ಪ, ಅಮಿತಾ, ರಂಜಿತಾ, ಅಶೋಕ್ ಮತ್ತು ಸಿಬ್ಬಂದಿ ಹಾಗೂ 50ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.